Morbi Bridge Collapse : ಗುಜರಾತ್ ಮೊರ್ಬಿ ಸೇತುವೆ ದುರಂತ: ಸ್ಥಳೀಯರು, ಪ್ರವಾಸಿಗರು ಹೇಳಿದ್ದು ಹೀಗೆ
ಅಹಮದಾಬಾದ್, ಅ. 31: ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾಗಿರುವ ಗುಜರಾತ್ ಮೊರ್ಬಿ ಸೇತುವೆ ದುರಂತದ ಬಗ್ಗೆ ಸ್ಥಳೀಯರು, ಪ್ರವಾಸಿಗರು ಇದೊಂದು ಭಯಾನಕ ಘಟನೆ ಎಂದು ಹೇಳಿದ್ದಾರೆ.
ಸೇತುವೆ ಮೇಲಿದ್ದ ಗುಂಪಿನ ಕೆಲವು ಯುವಕರು ಸೇತುವೆಯನ್ನು ಅಲುಗಾಡಿಸಲು ಪ್ರಾರಂಭಿಸಿದ್ದರು ಎಂದು ಅಹಮದಾಬಾದ್ ನಿವಾಸಿ ವಿಜಯ್ ಗೋಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಭಾನುವಾರ ಮಧ್ಯಾಹ್ನ ಗುಜರಾತ್‌ನ ಮೊರ್ಬಿಯಲ್ಲಿರುವ ತೂಗು ಸೇತುವೆಗೆ ಭೇಟಿ ನೀಡಿದ್ದ ವಿಜಯ್ ಗೋಸ್ವಾಮಿ ಮತ್ತು ಕುಟುಂಬದವರು, ಯುವಕರ ಗುಂಪು ಸೇತುವೆ ಅಲುಗಾಡಿಸಲು ಪ್ರಾರಂಭಿಸಿದ ನಂತರ ಭಯದಿಂದ ಸೇತುವೆಯ ಅರ್ಧದಾರಿಯಲ್ಲೇ ಹಿಂತಿರುಗಿದ್ದಾರೆ.
ಇವರು ಹಿಂತಿರುಗಿದ ಕೆಲವು ಗಂಟೆಗಳ ನಂತರ, ಪ್ರವಾಸಿಗರ ಆಕರ್ಷಣೆಯಾದ ಮಚ್ಚು ನದಿಯ ಸೇತುವೆಯು ಕುಸಿದಿದ್ದು, ಕನಿಷ್ಠ 100 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಪತ್ತೆಯಾದವರಿಗಾಗಿ ಇನ್ನು ಶೋಧ ನಡೆಯುತ್ತಿದೆ. 177 ಮಂದಿಯನ್ನು ರಕ್ಷಿಸಲಾಗಿದೆ.
ವಿಜಯ್ ಗೋಸ್ವಾಮಿ ಮತ್ತು ಅವರ ಕುಟುಂಬ ಸೇತುವೆಯ ಮೇಲೆ ಇದ್ದಾಗ, ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಇವರಿಗೆ ಸೇತುವೆಯ ಮೇಲೆ ನಡೆಯಲು ಕಷ್ಟವಾಗಿದೆ. ಈ ರೀತಿ ಸೇತುವೆಯನ್ನು ಅಲುಗಾಡಿಸುವುದು ಅಪಾಯಕಾರಿ ಎಂದು ವಿಜಯ್ ಕುಟುಂಬ ಸೇತುವೆಯ ಮೇಲೆ ಹೋಗುವುದನ್ನು ಅರ್ಧದಲ್ಲೇ ಬಿಟ್ಟು ವಾಪಸ್ ಆಗಿದ್ದಾರೆ. ಈ ಬಗ್ಗೆ ಸೇತುವೆಯ ಸಿಬ್ಬಂದಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಅವರು ಉದಾಸೀನರಾಗಿದ್ದರು ಎಂದು ಆರೋಪಿಸಿದ್ದಾರೆ.

ಬ್ರಿಟಿಷರ ಕಾಲದ ಸೇತುವೆಯ ಮೇಲೆ ಭಾರಿ ಜನಸಂದಣಿ
ಬ್ರಿಟಿಷರ ಕಾಲದ ಸೇತುವೆ ಏಳು ತಿಂಗಳ ಕಾಲ ನವೀಕರಣ ಕಾಮಗಾರಿಗಾಗಿ ಮುಚ್ಚಲಾಗಿತ್ತು. ಐದು ದಿನಗಳ ಹಿಂದಷ್ಟೇ ಸಾರ್ವಜನಿಕರಿಗಾಗಿ ಮತ್ತೆ ತೆರೆಯಲಾಗಿತ್ತು. ದೀಪಾವಳಿ ರಜೆ ಮತ್ತು ಛತ್ ಪೂಜೆಯ ಕಾರಣ ಸೇತುವೆಯ ಮೇಲೆ ಭಾರಿ ಜನ ಸಂದಣಿಯಿತ್ತು.
ದೀಪಾವಳಿ ರಜೆ ಕಾರಣ ಕುಟುಂಬದೊಂದಿಗೆ ಮೊರ್ಬಿಗೆ ಹೋಗಿದ್ದಾಗಿ ವಿಜಯ್ ಗೋಸ್ವಾಮಿ ಹೇಳಿದ್ದಾರೆ. "ಸೇತುವೆಯ ಮೇಲೆ ಭಾರಿ ಜನಸಂದಣಿ ಇತ್ತು. ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಲು ಪ್ರಾರಂಭಿಸಿದಾಗ ನನ್ನ ಕುಟುಂಬ ಮತ್ತು ನಾನು ಸೇತುವೆಯ ಮೇಲೆ ಇದ್ದೆವು. ಜನರು ಯಾವುದೇ ಬೆಂಬಲವಿಲ್ಲದೆ ನಿಲ್ಲುವುದು ಅಸಾಧ್ಯವಾಗಿತ್ತು. ಇದು ಅಪಾಯಕಾರಿ ಎಂದು ನಾನು ಭಾವಿಸಿ, ಸೇತುವೆಯ ಮೇಲೆ ಸ್ವಲ್ಪ ದೂರ ಕ್ರಮಿಸಿದ ನಂತರ ನಾವು ಹಿಂತಿರುಗಿದೆವು" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
|
ಸೇತುವೆ ಅಲುಗಾಡಿಸುವ, ಹಗ್ಗಗಳಿಗೆ ಒದೆಯುವ ಯುವಕರ ವಿಡಿಯೋ ವೈರಲ್
"ಸ್ಥಳದಿಂದ ಹೊರಡುವ ಮೊದಲು, ಜನರು ಸೇತುವೆಯನ್ನು ಅಲುಗಾಡದಂತೆ ತಡೆಯಲು ನಾನು ಕರ್ತವ್ಯ ನಿರತ ಸಿಬ್ಬಂದಿಯನ್ನು ಎಚ್ಚರಿಸಿದೆ. ಆದರೆ, ಅವರು ಟಿಕೆಟ್ ಮಾರಾಟದಲ್ಲಿ ಮಾತ್ರ ಆಸಕ್ತಿ ಹೊಂದಿದ್ದರು. ಸೇತುವೆ ಬಳಿ ಜನಸಂದಣಿಯನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ನಾವು ವಾಪಸ್ ಹೋದ ಕೆಲವು ಗಂಟೆಗಳ ನಂತರ, ನಮ್ಮ ಭಯ ನಿಜವಾಯಿತು" ಎಂದು ವಿಜಯ್ ಗೋಸ್ವಾಮಿ ದುಖಃ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ಕೆಲವು ಯುವಕರು ಸೇತುವೆಯ ಹಗ್ಗಗಳನ್ನು ಒದೆಯುವುದು, ಇತರ ಪ್ರವಾಸಿಗರನ್ನು ಹೆದರಿಸಲು ಸೇತುವೆಯನ್ನು ಜೋರಾಗಿ ಅಲ್ಲಾಡಿಸುವುದನ್ನು ಕಾಣಬಹುದು.

'ಸಾಧ್ಯವಾದಷ್ಟು ಜನರನ್ನು ಉಳಿಸಲು ಪ್ರಯತ್ನಿಸಿದ್ದೇವೆ'
ಕ್ಷಣಾರ್ಧದಲ್ಲಿ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. "ದೀಪಾವಳಿ ರಜೆಯ ಕಾರಣ ಅನೇಕ ಜನರು ಬಂದಿದ್ದರಿಂದ ಅಪಘಾತದ ಸಮಯದಲ್ಲಿ ಸೇತುವೆಯು ತುಂಬಿ ತುಳುಕುತ್ತಿತ್ತು" ಎಂದು ಸೇತುವೆಯ ಪಕ್ಕದಲ್ಲೇ ವಾಸವಾಗಿರುವ ಸುಪ್ರಾನ್ ಹೇಳಿದ್ದಾರೆ.
"ಕೇಬಲ್‌ಗಳು ಮುರಿದುಹೋದವು. ಸೇತುವೆಯು ಒಂದು ಸೆಕೆಂಡ್‌ನಲ್ಲಿ ಕುಸಿದುಬಿತ್ತು. ಜನರು ಪರಸ್ಪರ ಒಬ್ಬರ ಮೇಲೊಬ್ಬರು ಬಿದ್ದರು. ಹಲವು ಮಂದಿ ನೇರ ನದಿಗೆ ಬಿದ್ದರು. ಕೆಲವರು ಸೇತುವೆಯ ಸೈಡ್ ಬಾರ್‌ಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು" ಎಂದಿದ್ದಾರೆ. ಜೊತೆಗೆ ಸ್ಥಳೀಯ ಅಧಿಕಾರಿಗಳು ಮೊದಲ ಬಾರಿಗೆ ಇಷ್ಟೊಂದು ಜನರನ್ನು ತೂಗು ಸೇತುವೆಯ ಮೇಲೆ ಹೋಗಲು ಏಕೆ ಅನುಮತಿಸಿದರು..? ಎಂದು ಪ್ರಶ್ನಿಸಿದ್ದಾರೆ.
"ನಾವು ಸಾಧ್ಯವಾದಷ್ಟು ಜನರನ್ನು ಉಳಿಸಲು ಪ್ರಯತ್ನಿಸಿದ್ದೇವೆ. ಈಜಲು ಸಮರ್ಥರಾದ ಜನರನ್ನು ದಡಕ್ಕೆ ಎಳೆದಿದ್ದೇವೆ. ಹೆಚ್ಚಿನ ಜನರು ನದಿಯ ಮಧ್ಯದಲ್ಲಿ ಬಿದ್ದಿದ್ದರಿಂದ ಅವರನ್ನು ಉಳಿಸಲು ನಮಗೆ ಸಾಧ್ಯವಾಗಲಿಲ್ಲ. ಸ್ಥಳೀಯ ಅಧಿಕಾರಿಗಳು ಅಪಘಾತದ ಸ್ಥಳವನ್ನು ತಲುಪಲು ಹೆಚ್ಚಿನ ಸಮಯ ತೆಗೆದುಕೊಂಡರು" ಎಂದು ರಂಜನ್‌ಭಾಯ್ ಪಟೇಲ್ ಎಂದು ಗುರುತಿಸಿಕೊಂಡ ಇನ್ನೊಬ್ಬ ಸ್ಥಳೀಯ ನಿವಾಸಿ ಹೇಳಿದ್ದಾರೆ.

ನದಿಯಲ್ಲಿ ಬಿದ್ದಿದ್ದ ಹಲವರನ್ನು ರಕ್ಷಿಸಿದ ಸ್ಥಳೀಯ ನಿವಾಸಿಗಳು
ಸೇತುವೆ ಕುಸಿತದ ನಂತರ ಮೊರ್ಬಿಯ ವಿವಿಧ ಭಾಗಗಳಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ಜನರು ನದಿಗೆ ಬಿದ್ದವರಿಗೆ ಸಹಾಯ ಮಾಡಲು ಧಾವಿಸಿದ್ದಾರೆ. ಮೊರ್ಬಿಯ ಬಿಜೆಪಿಯ ಮಾಜಿ ಶಾಸಕ ಕಾಂತಿ ಅಮೃತಿಯಾ ಕೂಡ ಸ್ಥಳೀಯ ರಕ್ಷಣಾ ತಂಡಗಳನ್ನು ಸೇರಿಕೊಂಡು ರಕ್ಷಣಾ ಕಾರ್ಯಚರಣೆಗೆ ಸಾಥ್ ನೀಡಿದ್ದರು.
"ಸಮೀಪದಲ್ಲಿ ವಾಸಿಸುವ ಎಲ್ಲಾ ನಿವಾಸಿಗಳು ರಕ್ಷಣೆಗಾಗಿ ಬಂದು ಹಲವರನ್ನು ರಕ್ಷಿಸಿದರು. 1979 ರ ಅಣೆಕಟ್ಟು ಒಡೆದು ನಡೆದ ದುರಂತ ಘಟನೆಯ ನಂತರ ಮೊರ್ಬಿಯಲ್ಲಿ ನಡೆದ ಮತ್ತೊಂದು ದುರ್ಘಟನೆ ಇದಾಗಿದೆ. ಈ ಸೇತುವೆಯು ಜನದಟ್ಟಣೆಯಿಂದಾಗಿ ಕುಸಿದಿದೆ. ಬೆಳಕಿನ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು" ಎಂದು ಸ್ಥಳೀಯರು ಹೇಳಿದ್ದಾರೆ.
1979 ರ ಮಚ್ಚು ಅಣೆಕಟ್ಟಿನ ದುರಂತವನ್ನು ಮತ್ತೆ ಈ ಸೇತುವೆ ಕುಸಿತ ದುರಂತ ನೆನಪಿಸಿದೆ. ಅಂದಿನ ಮಚ್ಚು ಅಣೆಕಟ್ಟು ಒಡೆದು ಪ್ರವಾಹದಿಂದಾಗಿ ಸಾವಿರಾರು ಸ್ಥಳೀಯ ನಿವಾಸಿಗಳು ಪ್ರಾಣ ಕಳೆದುಕೊಂಡಿದ್ದರು.












Click it and Unblock the Notifications