ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ: ರೋಗಿಯ ಸ್ಟ್ರೆಚರ್ ತಳ್ಳಿಕೊಂಡು ಹೋಗುತ್ತಿರುವ 70 ವರ್ಷದ ವೃದ್ಧೆಯ ವಿಡಿಯೋ ವೈರಲ್
ರಾಜ್‌ಕೋಟ್: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಗುಜರಾತ್‌ನ ರಾಜ್‌ಕೋಟ್‌ನಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿಯ ನೆರವು ಸಿಗದೆ, 70 ವರ್ಷದ ವೃದ್ಧೆಯೊಬ್ಬರು ತಮ್ಮ ಸಂಬಂಧಿಯ ಸ್ಟ್ರೆಚರ್ ಅನ್ನ ತಾವೇ ಕಷ್ಟಪಟ್ಟು ತಳ್ಳಿಕೊಂಡು ಹೋಗಿರುವ ಮನಕಲಕುವ ದೃಶ್ಯ ವೈರಲ್ ಆಗಿದೆ.
ಈ ಘಟನೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಲಭ್ಯವಿರುವ ಮೂಲಭೂತ ಸಹಾಯ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯು ಇಡೀ ಸೌರಾಷ್ಟ್ರ ಪ್ರಾಂತ್ಯದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ. ಕೇವಲ ರಾಜ್‌ಕೋಟ್ ಮಾತ್ರವಲ್ಲದೆ, ಸುತ್ತಮುತ್ತಲಿನ ಹಲವು ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ರೋಗಿಗಳು, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಮೂಲಸೌಕರ್ಯ ಹಾಗೂ ವಾರ್ಡ್ ಬಾಯ್ ಕೊರತೆ ಎಷ್ಟರ ಮಟ್ಟಿಗಿದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.
ರೋಗಿಗಳನ್ನ ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಅಥವಾ ಪರೀಕ್ಷಾ ಕೊಠಡಿಗಳಿಗೆ ಸ್ಥಳಾಂತರಿಸಲು ಅಗತ್ಯವಿರುವ ಸ್ಟ್ರೆಚರ್ ಹಾಗೂ ಸಿಬ್ಬಂದಿ ನಿರ್ವಹಣೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಬಡ ರೋಗಿಗೆ ಸಹಾಯವಾಗಿದ್ದ ಆಸ್ಪತ್ರೆಯೇ, ಇದೀಗ ತೀವ್ರ ನಿರ್ಲಕ್ಷ್ಯದ ತಾಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಸುಮಾರು 70 ವರ್ಷ ವಯಸ್ಸಿನ ವೃದ್ಧೆಯೊಬ್ಬರು ತಮ್ಮ ಸಂಬಂಧಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ, ತಾವೇ ಖುದ್ದಾಗಿ ಅದನ್ನು ತಳ್ಳಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ.
ಆಸ್ಪತ್ರೆಯ ಆವರಣದಲ್ಲಿ ಸಹಾಯಕ್ಕೆ ಯಾವುದೇ ಸಿಬ್ಬಂದಿಯ ನೆರವು ಇಲ್ಲದೆ, ವಯಸ್ಸಾದ ಆ ಮಹಿಳೆಯೇ ಕಷ್ಟಪಟ್ಟು ಆ ಭಾರವಾದ ಸ್ಟ್ರೆಚರ್ ಅನ್ನ ಸಾಗಿಸುತ್ತಿರುವುದು ನೋಡಗರ ಕರುಳು ಹಿಂಡುವಂತಿದೆ. ವಯೋಸಹಜ ಆಯಾಸವಿದ್ದರೂ, ತಮ್ಮವರ ಜೀವ ಉಳಿಸಿಕೊಳ್ಳುವ ಕಾಳಜಿಯಿಂದ ವೃದ್ಧೆ ಪಡುತ್ತಿರುವ ಕಷ್ಟ, ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಗುಜರಾತ್ ಆಸ್ಪತ್ರೆ ನಿರ್ಲಕ್ಷ್ಯ ಹಾಗೂ ಆಡಳಿತ ಮಂಡಳಿ ಕ್ರಮ
ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಆಸ್ಪತ್ರೆ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿವಿಲ್ ಆಸ್ಪತ್ರೆಯ ಲೆಕ್ಕಾಧಿಕಾರಿ ಎಂ.ಎಸ್. ರಾಯ್, "ಇದು ಅತ್ಯಂತ ಆತಂಕಕಾರಿ ಘಟನೆ. ವೃದ್ಧೆ ತಾವೇ ಸ್ಟ್ರೆಚರ್ ತಳ್ಳಿಕೊಂಡು ಹೋಗುತ್ತಿರುವ ಬಗ್ಗೆ ತನಿಖೆ ಆರಂಭಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸೇವೆಗಳನ್ನ ಒದಗಿಸುವ ಜವಾಬ್ದಾರಿ ಹೊತ್ತಿರುವ ಹೊರಗುತ್ತಿಗೆ ಏಜೆನ್ಸಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಏಜೆನ್ಸಿಯ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಯೇ ಎಂಬುದನ್ನು ತನಿಖಾ ವರದಿಯ ನಂತರವೇ ಖಚಿತಪಡಿಸಿಕೊಳ್ಳಲಾಗುವುದು ಎಂದಿದ್ದಾರೆ.
ಹೊಸ ಮಾರ್ಗಸೂಚಿ ಮತ್ತು ಬಿಗಿ ಸಿಬ್ಬಂದಿ ನಿಯೋಜನೆ
ಮುಂದಿನ ದಿನಗಳಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ತಡೆಯಲು ಆಸ್ಪತ್ರೆ ಆಡಳಿತವು ಹೊಸ 'ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್' ಜಾರಿಗೆ ತರಲು ಮುಂದಾಗಿದೆ. ರೋಗಿಗಳನ್ನು ಸಾಗಿಸುವ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿಯನ್ನ ಕಡ್ಡಾಯವಾಗಿ ಎಲ್ಲ ವಿಭಾಗಗಳಲ್ಲೂ ಕಟ್ಟುನಿಟ್ಟಾಗಿ ನಿಯೋಜನೆ ಮಾಡಲಾಗುವುದು.
नंगे पैर स्ट्रेचर खींचती 70 साल की महिला...गुजरात के राजकोट सिविल अस्पताल का एक वीडियो सोशल मीडिया पर वायरल हो रहा है. इसमें करीब 70 साल की एक बुजुर्ग महिला अपने परिजन को स्ट्रेचर पर ले जाती नजर आ रही हैं.वीडियो सामने आने के बाद अस्पताल प्रशासन ने घटना को दुखद बताया है. प्रशासन ने मामले की जांच करने और संबंधित एजेंसी को नोटिस जारी करने की बात कही है.@CollectorRjt #Rajkot #Gujarat #ViralVideo #Zingabad
— zingabad (@zingabad) October 22, 2026
ರೋಗಿಗಳು ಹಾಗೂ ಅವರ ಜೊತೆಗಿರುವ ಕುಟುಂಬದ ಸದಸ್ಯರು, ವಿಶೇಷವಾಗಿ ವಯೋವೃದ್ಧರು ಇಂತಹ ಸಂಕಷ್ಟ ಎದುರಿಸದಂತೆ ಎಚ್ಚರ ವಹಿಸಲಾಗುವುದು ಎಂದು ಆಡಳಿತ ಮಂಡಳಿ ಭರವಸೆ ನೀಡಿದೆ. ಭವಿಷ್ಯದಲ್ಲಿ ಬಡ ರೋಗಿಗಳಿಗೆ ಇಂತಹ ಪರಿಸ್ಥಿತಿ ಬಾರದಂತೆ ಸರ್ಕಾರ ಕೂಡ ಕಟ್ಟುನಿಟ್ಟಿನ ನಿಗಾ ವಹಿಸಬೇಕಿದೆ.


Click it and Unblock the Notifications
