ಗುಜರಾತ್ ಚುನಾವಣೆ: ಗೆಲುವ ನಮ್ಮದೇ ಎಂದ 'ಮೌನ ಪ್ರಚಾರ'ದ ಕಾಂಗ್ರೆಸ್
ಗುಜರಾತ್ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಈ ಬಾರಿ 125 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಗುಜರಾತ್‌ನಲ್ಲಿ ಮುಂದಿನ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಘು ಶರ್ಮಾ ಮಾತನಾಡಿ, ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 125ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ರಾಜ್ಯದಲ್ಲಿ ನಾವು 100 ಪರ್ಸೆಂಟ್ ಸರ್ಕಾರ ರಚಿಸೇ ರಚಿಸುತ್ತೇವೆ. ನಾವು 125ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು. ನಾನು ಸುಮ್ಮನೆ ಈ ಮಾತುಗಳನ್ನು ಹೇಳುತ್ತಿಲ್ಲ. ರಾಜ್ಯದಲ್ಲಿ ನಮ್ಮ ಪಕ್ಷ ಮಾಡಿರುವ ತಳಹದಿಯ ಕಾರ್ಯಗಳ ಆಧಾರದ ಮೇಲೆ ಈ ಮಾತು ಹೇಳುತ್ತಿದ್ದೇನೆ. ನಮ್ಮ ಬೂತ್ ಮಟ್ಟದ ಉಪಸ್ಥಿತಿಯನ್ನು ಬಲಪಡಿಸಲು ನಾವು ಹೆಚ್ಚಿನ ಪ್ರಯತ್ನವನ್ನು ಮಾಡಿದ್ದೇವೆ.
2017ರ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರೀ ಪ್ರಚಾರದಂತಲ್ಲದೆ, ಕಾಂಗ್ರೆಸ್ ಈ ಬಾರಿ ತನ್ನ ಕಾರ್ಯತಂತ್ರವನ್ನು ಬದಲಿಸಿದೆ. ಫೆಬ್ರವರಿ 2022ರಲ್ಲಿ ಗುಜರಾತ್ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ 'ಮೌನ ಪ್ರಚಾರ' ಕಾರ್ಯತಂತ್ರವನ್ನು ಹೆಣದಿದೆ.

ಭಾರತ್ ಜೋಡೋ ಯಾತ್ರೆ 'ಮೌನ ಪ್ರಚಾರ'
ದ್ವಾರಕಾದಲ್ಲಿ ಮೂರು ದಿನಗಳ ಚಿಂತನ ಮಂಥನದ ನಂತರ, ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಜಾರಿಗೆ ತಂದಿದೆ. ಇದರೊಂದಿಗೆ ಬೂತ್ ನಿರ್ವಹಣೆ ಮತ್ತು ಮನೆ-ಮನೆ ಪ್ರಚಾರದ ಮೇಲೆ ಹೆಚ್ಚು ಗಮನಹರಿಸಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸಿದೆ.
ಶರ್ಮಾ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ, ''ಬಿಜೆಪಿ ಕಾರ್ಯತಂತ್ರದ ಪ್ರಕಾರ ನಾವು ಕೆಲಸ ಮಾಡಬೇಕೆಂದು ಬಯಸುತ್ತದೆ. ಆದರೆ ನಾವು ಅವರ ನಿರೂಪಣೆಯನ್ನು ನಿರ್ಮಿಸಲು ಯಾವುದೇ ಅವಕಾಶವನ್ನು ನೀಡುತ್ತಿಲ್ಲ. ಬಿಜೆಪಿಯ ಪಿಚ್‌ನಲ್ಲಿ ನಾವೇಕೆ ಆಡಬೇಕು? ನಮ್ಮದೇ ಕಾರ್ಯತಂತ್ರದ ಆಧಾರದ ಮೇಲೆ ನಾವು ಈ ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ'' ಎಂದಿದ್ದಾರೆ.
"ಪ್ರಧಾನಿಯವರಿಗೂ ಇದು ತಿಳಿದಿದೆ. ಅದಕ್ಕಾಗಿಯೇ ಮೋದಿಜಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹೇಗೆ ಮನೆ ಮನೆಗೆ ಹೋಗಿ ವಿಭಿನ್ನ ತಂತ್ರದೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ" ಎಂದು ಅವರು ಹೇಳಿದರು.

145 ಮೆಗಾ ಸಾರ್ವಜನಿಕ ಸಭೆ ಮತ್ತು 95 ರ್‍ಯಾಲಿ
ಗುಜರಾತ್‌ನಲ್ಲಿ ಕಾಂಗ್ರೆಸ್ ಐದು ಯಾತ್ರೆಗಳನ್ನು ಆರಂಭಿಸಿದೆ. 5,432 ಕಿ.ಮೀ.ಗಳಷ್ಟು 175 ವಿಧಾನಸಭಾ ಸ್ಥಾನಗಳನ್ನು ಕ್ರಮಿಸಲಿದೆ. ಈ ಯಾತ್ರೆಗಳ ಸಮಯದಲ್ಲಿ ಪಕ್ಷದ ಉನ್ನತ ನಾಯಕರು 145 ಮೆಗಾ ಸಾರ್ವಜನಿಕ ಸಭೆಗಳು ಮತ್ತು 95 ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಎಐಸಿಸಿ ಮಾಧ್ಯಮ ವಿಭಾಗದ ಉಸ್ತುವಾರಿ ಪವನ್ ಖೇರಾ ಸುದ್ದಿಗಾರರೊಂದಿಗೆ ಮಾತನಾಡಿ, ''ನಾವು ಗುಜರಾತ್‌ನಲ್ಲಿ ನಮ್ಮ ವ್ಯಾಪ್ತಿಯನ್ನು ಹೆಚ್ಚಿಸಿದ್ದೇವೆ. ಅಲ್ಲಿ ಐದು ಯಾತ್ರೆಗಳು ನಡೆಯಲಿವೆ. ಅವು ಇಡೀ ರಾಜ್ಯವನ್ನು ಆವರಿಸುತ್ತವೆ. ಇದರೊಂದಿಗೆ ನಾವು ಜನರನ್ನು ನೇರವಾಗಿ ತಲುಪುತ್ತೇವೆ. ಹಿಮಾಚಲ ಮತ್ತು ಗುಜರಾತ್ ಎರಡನ್ನೂ ಗೆಲ್ಲಲಿದ್ದೇವೆ'' ಎಂಬ ಭರವಸೆ ಇದೆ ಎಂದಿದ್ದಾರೆ.

ಸಣ್ಣ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ
ಇದೇ ಸಮಯದಲ್ಲಿ ಕಾಂಗ್ರೆಸ್ ಸಹ ಎನ್‌ಸಿಪಿ ಮತ್ತು ಇತರ ಸಣ್ಣ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದೆ. ''ಮೈತ್ರಿಯ ಅಂತಿಮ ಚಿತ್ರಣವನ್ನು ಎರಡು-ಮೂರು ದಿನಗಳಲ್ಲಿ ತೆರವುಗೊಳಿಸಲಾಗುವುದು. ನಾವು ನಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದೇವೆ ಮತ್ತು ಸೂಕ್ತ ಸಮಯದಲ್ಲಿ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ'' ಎಂದು ಶರ್ಮಾ ಹೇಳಿದರು.
ಗುಜರಾತ್‌ನಲ್ಲಿ ಒಟ್ಟು 182 ವಿಧಾನಸಭಾ ಸ್ಥಾನಗಳಿದ್ದು, ಸರ್ಕಾರ ರಚಿಸಲು 92 ಸ್ಥಾನಗಳ ಅಗತ್ಯವಿದೆ. 2017ರಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಕಾಂಗ್ರೆಸ್ 79 ಸ್ಥಾನಗಳನ್ನು ಪಡೆದುಕೊಂಡಿತ್ತು. 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಸ್ಥಾನಗಳ ಸಂಖ್ಯೆಯು ಪಕ್ಷವು ಸುಮಾರು ಮೂರು ದಶಕಗಳಲ್ಲಿ ಗಳಿಸಿದ ಅತ್ಯಧಿಕ ಸ್ಥಾನವಾಗಿದೆ.

'ಗುಜರಾತ್‌ನಲ್ಲಿ ಕಾಂಗ್ರೆಸ್ ಗೆಲುವು ಖಂಡಿತ'
ಸಾಮಾನ್ಯವಾಗಿ ಗುಜರಾತ್ ಕದನ ಎರಡು ಪಕ್ಷಗಳ ನಡುವೆ ಇರುತ್ತದೆ. ಆದರೆ, ಈ ವರ್ಷ ಆಮ್ ಆದ್ಮಿ ಪಕ್ಷ ಕಣಕ್ಕಿಳಿದಿರುವುದು ತ್ರಿಕೋನ ಕದನವಾಗಿ ಮಾರ್ಪಟ್ಟಿದೆ. ಆದರೆ ಇದರಿಂದ ವಿಚಲಿತರಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಪವನ್ ಖೇರಾ, ''ಎಎಪಿ ಜಾಹೀರಾತಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ'' ಎಂದಿದ್ದಾರೆ. ''ಎಎಪಿ ಮತ್ತು ಎಐಎಂಐಎಂ ಬಿಜೆಪಿಯ ಬಿ-ಟೀಮ್. ಅವರಿಗೆ ಮತದಾರರಿಲ್ಲ; ಸಂಬಳದ ಕೆಲಸಗಾರರು ಮಾತ್ರ'' ಎಂದು ಶರ್ಮಾ ವ್ಯಂಗ್ಯವಾಡಿದ್ದಾರೆ.












Click it and Unblock the Notifications