G20 ಕಾಶ್ಮೀರದ ಸಭೆಗೆ ಬಂದ ಅತಿಥಿಗಳಿಗೆ ದೇಸಿ ಶೈಲಿ ಸ್ವಾಗತ!
ಶ್ರೀನಗರ: ಇಷ್ಟುದಿನ ಕೇವಲ ಗುಂಡಿನ ದಾಳಿ, ಬಾಂಬ್ ಅಟ್ಯಾಕ್‌ಗಳಿಂದ ನಲುಗಿದ್ದ ಕಣಿವೆ ರಾಜ್ಯಕ್ಕೆ ಹೊಸ ಹುರುಪು ಬಂದಿದೆ. ಉಗ್ರರ ಉಪಟಳಕ್ಕೆ ನರಳಿದ್ದ ಕಾಶ್ಮೀರದಲ್ಲಿ ಇಂದಿನಿಂದ ಹೊಸ ಯುಗ ಆರಂಭ ಆಗಿದೆ. ಹೌದು ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆ ಇಂದಿನಿಂದ ಆರಂಭವಾಗಿದೆ. ಸಭೆಗೆ ಆಗಮಿಸಿದ ಅತಿಥಿಗಳಿಗೆ ದೇಸಿ ಶೈಲಿಯಲ್ಲಿ ಪೇಟ ತೊಡಿಸಿ ಭರ್ಜರಿ ಸ್ವಾಗತ ಕೋರಲಾಯಿತು.
ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದು. ಪಾಕಿಸ್ತಾನ ಮತ್ತು ಚೀನಾ ವಿರೋಧದ ನಡುವೆ ಜಿ20ಗೆ ಸೇರಿದ ಹಲವು ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ. ಈ ನಡೆಯು ಪಾಕಿಗಳಿಗೆ ಹಿನ್ನಡೆ ಉಂಟುಮಾಡಿದ್ದು, ಅದ್ಧೂರಿಯಾಗಿ ಸಭೆ ಆಯೋಜನೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಹಲವು ರಾಷ್ಟ್ರಗಳ ಅತಿಥಿಗಳಿಗೆ ಕೇಸರಿ ಪೇಟ ತೊಡಿಸಿ ಸ್ವಾಗತ ಕೋರಲಾಯಿತು.

ಕಣಿವೆ ರಾಜ್ಯಕ್ಕೆ ಹೊಸ ಕಳೆ!
ಅಂದಹಾಗೆ ಇಂದಿನಿಂದ 25ರ ವರೆಗೂ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಗಾಗಿ ಕಾಶ್ಮೀರ ಸಿದ್ಧಗೊಂಡು ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಈ ಮೂಲಕ ಜಿ20 ಒಕ್ಕೂಟದ ಸದಸ್ಯ ರಾಷ್ಟ್ರಗಳ ಅತಿಥಿ ಪಡೆ ಕಾಶ್ಮೀರದ ಸೌಂದರ್ಯ ಸವಿಯುತ್ತಿದ್ದು, ಕಣಿವೆ ರಾಜ್ಯದ ಮೇಲಿನ ಭಾರತದ ಪವರ್ ಏನು ಅನ್ನೋದು ಇಡೀ ಜಗತ್ತಿಗೇ ಇಂದು ಗೊತ್ತಾಗುತ್ತಿದೆ.
ಪಾಕಿಗಳ ಕಿತಾಪತಿ, ಹಲವರು ಎಸ್ಕೇಪ್!
ಪಾಪಿ ಪಾಕಿಸ್ತಾನ ಇಲ್ಲೂ ಕಿರಿಕ್ ಬಿಟ್ಟಿಲ್ಲ. ಈಗಾಗಲೇ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ ಎಸ್ಕೇಪ್ ಆಗಿದೆ. ಕಾಶ್ಮೀರದಲ್ಲಿ ಸಭೆ ನಡೆಯುತ್ತಿರುವ ಕಾರಣ ನಾನು ಬರಲ್ಲ ಅಂತಾ ಚೀನಾ ಹೇಳಿದ್ದು, ಡ್ರ್ಯಾಗನ್ ಜೊತೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಕಾಶ್ಮೀರದ ಸಭೆಗೆ ಚಕ್ಕರ್ ಹಾಕಿವೆ. ಈ ಮೂಲಕ ಪಾಕಿಸ್ತಾನಿ ನಾಯಕರ ಮನ ಒಲಿಸಲು ಈ ಮೂರು ರಾಷ್ಟ್ರಗಳು ಪ್ರಯತ್ನಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಕಾಶ್ಮೀರದ ಮೇಲೆ ಭಾರತಕ್ಕೆ ಇರುವ ಹಿಡಿತವನ್ನ ಒಪ್ಪಲು ಈ ರಾಷ್ಟ್ರಗಳು ಸಿದ್ಧವಿಲ್ಲ ಹೀಗಾಗಿ ಭಾರತ ಕೂಡ ಇವರಿಗೆಲ್ಲಾ G20 ಸಭೆ ಮೂಲಕ ತಕ್ಕ ತಿರುಗೇಟು ನೀಡುತ್ತಿದೆ.

G20 ಒಕ್ಕೂಟದ ಸದಸ್ಯ ರಾಷ್ಟ್ರಗಳು ಇವರು!
ಜಗತ್ತಿನ ಅತ್ಯಂತ ಶಕ್ತಿಶಾಲಿ ಒಕ್ಕೂಟಗಳ ಪೈಕಿ ಜಿ20 ಗುಂಪು ಕೂಡ ಒಂದು. ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಭಾಗವಾಗಿವೆ. ಹೀಗಾಗಿ ಇಡೀ ಜಗತ್ತಿನ ಗಮನ ಈಗ ಭಾರತದ ಮೇಲೆ ನೆಟ್ಟಿದೆ. ಈ ಪೈಕಿ ಈಗ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ಮಹತ್ವದ ಸಭೆಗೆ ಚಕ್ಕರ್ ಹಾಕಿವೆ.
ಅರುಣಾಚಲ ಸಭೆಗೂ ಚೀನಾ ಬಂದಿರಲಿಲ್ಲ
ಈ ಹಿಂದೆ ಅರುಣಾಚಲ ಸಭೆಯಿಂದ ದೂರವಾಗಿದ್ದ ಚೀನಾ, 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದಲೂ ದೂರ ಉಳಿಯಲು ನಿರ್ಧರಿಸಿದೆ. ಈ ಸಭೆ ಕಾಶ್ಮೀರದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನದ ಜೊತೆಗಿನ ಸಂಬಂಧ ಹಾಳಾಗಬಾರದು ಅಂತಾ ಚೀನಾ ಇಂತಹ ನಿರ್ಧಾರ ಕೈಂಡಿದೆ ಎನ್ನುವ ಮಾತು ಕೇಳಿಬಂದಿದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈ ನಡೆ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಮತ್ತಷ್ಟು ಹುಳಿ ಹಿಂಡುತ್ತಿದೆ.

ಒಟ್ನಲ್ಲಿ ಯಾರು ಬರಲಿ, ಯಾರೇ ಬರದಿರಲಿ... ಕಾಶ್ಮೀರ ಭಾರತದ ಮುಕುಟ.. ಭಾರತಕ್ಕೆ ಕಾಶ್ಮೀರವೇ ಕಿರೀಟ ಎನ್ನುವ ಮಾತಂತೂ ಸತ್ಯ. ಬರೋಬ್ಬರಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾಶ್ಮೀರದ ವಿಚಾರದಲ್ಲಿ ಕಿರಿಕ್ ಮಾಡಿದರೂ ಏನೂ ಆಗಿಲ್ಲ. ಈಗ ಆಗಿಬಿಡುತ್ತಾ? ಹಾಗೇ ಪಾಕಿಸ್ತಾನ ಜಿ20 ಸಭೆಯ ವಿಚಾರದಲ್ಲೂ ಹುಳಿ ಹಿಂಡುವ ಕೆಲಸ ಮಾಡಿರುವುದು ವಿಪರ್ಯಾಸವೇ ಸರಿ.












Click it and Unblock the Notifications