Medicine Price: ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ 41 ಔಷಧಿಗಳ ಬೆಲೆ ಕಡಿಮೆ ಮಾಡಿದ ಸರ್ಕಾರ
ಮಧುಮೇಹ, ಹೃದಯ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ 41 ಔಷಧಿಗಳು ಮತ್ತು ಆರು ಸೂತ್ರೀಕರಣಗಳ (formulations) ಬೆಲೆಯನ್ನು ಸರ್ಕಾರ ಕಡಿಮೆ ಮಾಡಿದೆ.
ಆಂಟಾಸಿಡ್‌ಗಳು, ಮಲ್ಟಿವಿಟಮಿನ್‌ಗಳು ಮತ್ತು ಆ್ಯಂಟಿಬಯೋಟಿಕ್‌ಗಳ ಬೆಲೆ ಕಡಿಮೆಯಾಗಿದೆ ಎಂದು ಫಾರ್ಮಾಸ್ಯುಟಿಕಲ್ಸ್ ಇಲಾಖೆ ಮತ್ತು ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‌ಪಿಪಿಎ) ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ.

ವಿವಿಧ ಔಷಧಿಗಳ ಬೆಲೆ ಇಳಿಕೆಯ ಮಾಹಿತಿಯನ್ನು ಡೀಲರ್‌ಗಳು ಮತ್ತು ದಾಸ್ತಾನುಗಾರರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಲುಪಿಸುವಂತೆ ಫಾರ್ಮಾ ಕಂಪನಿಗಳಿಗೆ ಸೂಚಿಸಲಾಗಿದೆ.
ಭಾರತದಲ್ಲಿ ಹೆಚ್ಚು ಮಧುಮೇಹಿಗಳು
ಎನ್‌ಪಿಪಿಎಯ 143ನೇ ಸಭೆಯಲ್ಲಿ ಅಗತ್ಯ ಔಷಧಿಗಳ ಬೆಲೆ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಇರುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಬೆಲೆ ಕಡಿತದಿಂದ ಮಧ್ಯಮ ಮತ್ತು ಕೆಳ ವರ್ಗದ ಜನತೆಗೆ ಪ್ರಯೋಜನ ಸಿಗಲಿದೆ. ಭಾರತದಲ್ಲಿ 10 ಕೋಟಿಗೂ ಹೆಚ್ಚು ಮಧುಮೇಹ ರೋಗಿಗಳು ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹ ಪ್ರಕರಣಗಳನ್ನು ಹೊಂದಿರುವ ದೇಶ ಎನಿಸಿಕೊಂಡಿದೆ.
ಕಳೆದ ತಿಂಗಳು, ಫಾರ್ಮಾಸ್ಯುಟಿಕಲ್ಸ್ ಇಲಾಖೆಯು 923 ನಿಗದಿತ ಔಷಧ ಸೂತ್ರೀಕರಣಗಳಿಗೆ ವಾರ್ಷಿಕ ಪರಿಷ್ಕೃತ ಬೆಲೆಗಳನ್ನು ಘೋಷಣೆ ಮಾಡಿತು ಮತ್ತು 65 ಫಾರ್ಮುಲೇಶನ್‌ಗಳಿಗೆ ಪರಿಷ್ಕೃತ ಚಿಲ್ಲರೆ ಬೆಲೆಗಳನ್ನು ಏಪ್ರಿಲ್ 1 ರಿಂದ ಜಾರಿಗೆ ತರುತ್ತದೆ.
ಬೆಲೆ ಎಷ್ಟು ಕಡಿಮೆ?
ಪಿತ್ತಜನಕಾಂಗದಲ್ಲಿ ಗ್ಲೂಕೋಸ್ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಬಳಸುವ ಡಾಪಾಗ್ಲಿಫ್ಲೋಜಿನ್ ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್‌ನಂತಹ ಔಷಧಿಗಳ ಬೆಲೆಗಳನ್ನು ₹ 30 ರಿಂದ ಈಗ ಒಂದು ಟ್ಯಾಬ್ಲೆಟ್‌ಗೆ ₹16ಕ್ಕೆ ನಿಗದಿ ಮಾಡಲಾಗಿದೆ.
ಆಸ್ತಮಾದ ಲಕ್ಷಣಗಳನ್ನು ನಿಯಂತ್ರಿಸಲು ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಬಳಸಲಾಗುವ ಬುಡೆಸೋನೈಡ್ ಮತ್ತು ಫಾರ್ಮೊಟೆರಾಲ್‌ನಂತಹ ಸಂಯೋಜನೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲಾಗಿದೆ ಮತ್ತು ಒಂದು ಡೋಸ್‌ನ ಬೆಲೆಯನ್ನು ₹6.62 ಕ್ಕೆ ಇಳಿಸಲಾಗಿದೆ.
ರಕ್ತದೊತ್ತಡವನ್ನು ಕಡಿಮೆ ಮಾಡಲು ಬಳಸಲಾಗುವ ಹೈಡ್ರೋಕ್ಲೋರೋಥಿಯಾಜೈಡ್ ಮಾತ್ರೆಗಳು ಈಗ ₹ 11.07 ರ ಬದಲಾಗಿ ಒಂದು ಟ್ಯಾಬ್ಲೆಟ್‌ಗೆ ₹ 10.45 ಕ್ಕೆ ಸಿಗಲಿವೆ.












Click it and Unblock the Notifications