ಹಿಂಸೆಗೆ ತಿರುಗಿದ ಗೂರ್ಖಾಲ್ಯಾಂಡ್ ಹೋರಾಟ, ಡಾರ್ಜಿಲಿಂಗ್ ಉದ್ವಿಗ್ನ

Subscribe to Oneindia Kannada

ಡಾರ್ಜಿಲಿಂಗ್, ಜೂನ್ 15: ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯಕ್ಕಾಗಿ ಪಶ್ಚಿಮ ಬಂಗಾಳದ ಗುಡ್ಡಗಾಡು ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟ ಗುರುವಾರ ಹಿಂಸಾಚಾರಕ್ಕೆ ತಿರುಗಿದೆ.

ಗುರುವಾರ ಪಶ್ಚಿಮ ಬಂಗಾಳ ಪೊಲೀಸರು ಗೂರ್ಖಾ ಜನಮುಕ್ತಿ ಮೋರ್ಚಾ ಪಕ್ಷ (ಜಿಜೆಎಂ) ಮುಖಂಡ ಬಿಮಲ್‌ ಗುರುಂಗ್‌ ಕಚೇರಿ ಮೇಲೆ ದಾಳಿ ನಡೆಸಿದ್ದು, ಭಾರೀ ಪ್ರಮಾಣದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.

ಡಾರ್ಜಿಲಿಂಗ್ ಎಸ್ಪಿ ಅಖಿಲೇಶ್ ಚತುರ್ವೇದಿ ನೇತೃತ್ವದ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೌಂಟರ್ ಇನ್ಸರ್ಜೆನ್ಸಿ ಪಡೆ ಬಿಮಲ್ ಗುರುಂಗ್ ಕಚೇರಿ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಗುರುಂಗ್ ಕಚೇರಿಯಲ್ಲಿ ಇರಲಿಲ್ಲ. ಒಂದಷ್ಟು ಸಿಬ್ಬಂದಿಗಳು ಮಾತ್ರ ಇದ್ದರು.

Gorkhaland: Police raids at Bimal Gurung's office, GJM supporters torch police station

ದಾಳಿ ಸಂದರ್ಭ ಕಚೇರಿಯಲ್ಲಿ ಲಾಂಗು, ಮಚ್ಚು, ಬಿಲ್ಲು, ಬಾಣಗಳು ಸಿಕ್ಕಿವೆ. ಜತೆಗೆ ನಾಡ ಬಂದೂಕುಗಳು ಮತ್ತು ಹಣ ಕೂಡಾ ಸಿಕ್ಕಿದೆ. ಬೆನ್ನಿಗೆ ಕಚೇರಿಗೆ ಪೊಲೀಸರು ಬೀಗ ಜಡಿದಿದ್ದಾರೆ. ಇದೇ ವೇಳೆ ಪೊಲೀಸರು ಜಿಜೆಎಂ ನಾಯಕ ಕರುಣಾ ಗುರುಂಗ್ ರನ್ನು ಬಂಧಿಸಿದ್ದಾರೆ.

ದಾಳಿಯ ಬೆನ್ನಿಗೆ ಹೇಳಿಕೆ ನೀಡಿರುವ ಬಿನಯ್ ತಮಂಗ್ ಬಿಲ್ಲು ಬಾಣಗಳು ನಮ್ಮ ಬುಡಕಟ್ಟು ಬಿಲ್ಗಾರಿಕೆ. "ನಾವು ಆಗಾಗ ಸಾಂಪ್ರದಾಯಿಕ ಬಿಲ್ವಿದ್ಯೆ ಸ್ಪರ್ಧೆಗಳನ್ನು ನಡೆಸುತ್ತೇವೆ. ನಮ್ಮ ಸಾಂಪ್ರದಾಯಿಕ ಆಯುಧಗಳನ್ನೇ ಶಸ್ತ್ರಾಸ್ತ್ರ ಎನ್ನುವಂತೆ ಬಿಂಬಿಸಿದ್ದಾರೆ. ಈ ಕಾರಣಕ್ಕೆ ನಮಗೆ ಗೂರ್ಖಾಲ್ಯಾಂಡ್ ಬೇಕು. ನಮ್ಮ ಹಕ್ಕು, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ, ನಮ್ಮ ಸಂಪ್ರದಾಯ.. ಯಾವುದಕ್ಕೂ ಇಲ್ಲಿ ಗೌರವ ಇಲ್ಲ," ಎಂದು ಕಿಡಿಕಾರಿದ್ದಾರೆ.

ಬೆನ್ನಲ್ಲೇ ಜಿಜೆಎಂನ ಕಾರ್ಯಕರ್ತರು ಉಗ್ರ ಪ್ರತಿಭಟನೆಗೆ ಇಳಿದಿದ್ದಾರೆ. ಕಲಿಂಪೊಂಗ್ ಪೊಲೀಸ್ ಠಾಣೆಯನ್ನು ಗೂರ್ಖಾ ಕಾರ್ಯಕರ್ತರು ಹೊತ್ತಿಸಿ ಹಾಕಿದ್ದಾರೆ. ಜತೆಗೆ ಮಾಧ್ಯಮವೊಂದರ ಕಾರಿಗೂ ಪ್ರತಿಭಟನಾಕಾರರು ಬೆಂಕಿ ಹಾಕಿದ್ದಾರೆ.

ಮಾತ್ರವಲ್ಲ ಅನಿರ್ಧಿಷ್ಟಾವಧಿಗೆ ಡಾರ್ಜಿಲಿಂಗ್ ಬಂದಿಗೂ ಜಿಜೆಎಂ ಕರೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಗುರುಂಗ್, "ಪ್ರವಾಸಿಗರು ಸದ್ಯಕ್ಕೆ ದಾರ್ಜಲಿಂಗ್ ಕಡೆ ಬರಬೇಡಿ. ನಾವು ನಮ್ಮ ಹೋರಾಟ ಮುಂದುವರಿಸಲಿದ್ದೇವೆ. ಸಿಆರ್ ಪಿಎಫ್, ಸೇನೆ ಯಾರನ್ನೇ ಕರೆಸಲಿ ಹಿಂದೇಟು ಹಾಕುವುದಿಲ್ಲ," ಎಂದು ಹೇಳಿದ್ದಾರೆ.

ಹತ್ತಿದ ಗೂರ್ಖಾಲ್ಯಾಂಡ್ ಹೋರಾಟದ ಕಿಡಿ

ಕಳೆದ ಹಲವು ದಶಕಗಳಿಂದಲೇ ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಯುತ್ತಾ ಬಂದಿದೆ. ಆಗಾಗ ಇದು ಕಿಡಿ ಹತ್ತಿಕೊಂಡು ಉರಿದು ಮತ್ತೆ ತಣ್ಣಗಾಗುತ್ತಿತ್ತು.

ಆದರೆ ಈ ಬಾರಿ ಈ ಹೋರಾಟ ಹುಟ್ಟಿಕೊಳ್ಳಲು ಮುಖ್ಯ ಕಾರಣ ಇತ್ತೀಚೆಗೆ ಪಶ್ಚಿಮ ಬಂಗಾಳ ಸರಕಾರ ಬೆಂಗಾಲಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯ ಮಾಡಲು ಹೊರಟಿದ್ದು. ಪಶ್ಚಿಮ ಬಂಗಾಳದ ನೀತಿ ವಿರುದ್ಧ ಡಾರ್ಜಿಲಿಂಗ್ ಬೆಟ್ಟ ಗುಡ್ಡಗಳಲ್ಲಿ ಹೋರಾಟದ ಕಿಡಿ ಹತ್ತಿಕೊಂಡಿತು.

ಬೆನ್ನಿಗೆ ಪ್ರತ್ಯೇಕ ರಾಜ್ಯದ ಹೋರಾಟವನ್ನು ತೀವ್ರಗೊಳಿಸಲು ಗೂರ್ಖಾ ಜನಮುಕ್ತಿ ಮೋರ್ಚಾ ಕರೆ ನೀಡಿದೆ. ಇದೀಗ ರಾಷ್ಟ್ರೀಯ ಪಕ್ಷಗಳ ಸ್ಥಳೀಯ ನಾಯಕರೂ ಕೇಂದ್ರ ನಾಯಕರ ಜತೆ ಸಂಪರ್ಕ ಕಡಿದುಕೊಂಡಿದ್ದು ಪ್ರತ್ಯೇಕ ರಾಜ್ಯ ಹೋರಾಟದ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರೂ ಸೇರಿ ಒಟ್ಟಾಗಿ ಜನ ಸೇರಿಸುತ್ತಿದ್ದು ಈ ಬಾರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ಪ್ರತಿಭಟನೆ ಬೆನ್ನಲ್ಲೇ ಬುಧವಾರ ರಾಜ್ಯಪಾಲರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾಗಿ ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (GTA)ಕ್ಕೆ ಸಿ ಮುರುಗನ್ ರನ್ನು ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

ಹೀಗಿದ್ದೂ ಪ್ರತಿಭಟನೆ ನಿಲ್ಲುತ್ತಿಲ್ಲ; ಬದಲಿಗೆ ಹಿಂಸಾ ರೂಪ ಪಡೆದುಕೊಂಡಿದ್ದು ಪರಿಸ್ಥಿತಿ ಕೈ ಮೀರಿ ಬೆಳೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The West Bengal police today raided Gorkha Janamukti Morcha (GJM) chief Bimal Gurung's office in Darjeeling and seized weapons. The police raid at Gurung's office triggered a violent protest by GJM supporters who torched a police station in Kalimpong.
Please Wait while comments are loading...