'ಸ್ವಾಮಿ ವಿವೇಕಾನಂದರು ಈಗಿದ್ದಿದ್ದರೆ ಅವರ ಮೇಲೂ ದಾಳಿಯಾಗುತ್ತಿತ್ತು!'
ತಿರುವನಂತಪುರಂ, ಆಗಸ್ಟ್ 06: 'ಇಂದಿನ ಭಾರತದಲ್ಲಿ ಸ್ವಾಮಿ ವಿವೇಕಾನಂದರು ಇದ್ದಿದ್ದರೆ ಅವರ ಮೇಲೂ ದಾಳಿಯಾಗುತ್ತಿತ್ತು' ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ!
ಕೇರಳದ ತಿರುವನಂತಪುರಂ ನಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಶಶಿ ತರೂರ್, ಇತ್ತೀಚೆಗೆ ಜಾರ್ಖಂಡ್ ನಲ್ಲಿ ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡೆದ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದರು.
"ನನಗೆ ಗೊತ್ತು, ಈ ಸಮಯದಲ್ಲಿ ಭಾರತಕ್ಕೆ ಸ್ವಾಮಿ ವಿವೇಕಾನಂದರೇನಾದರೂ ಬಂದರೆ ಅವರ ಮೇಲೆಯೂ ದಾಳಿ ನಡೆಯುತ್ತದೆ. ಅವರ ಮೇಲೆ ಇಂಜಿನ್ ಆಯ್ಲ್ ಎರಚಲಾಗುತ್ತದೆ. ಅವರನ್ನು ರಸ್ತೆಯಲ್ಲಿಯೇ ಹೊಡೆಯಲಾಗುತ್ತದೆ! ಏಕೆಂದರೆ ಸ್ವಾಮಿ ವಿವೇಕಾನಂದರು ಜನರನ್ನು ಗೌರವಿಸಿ ಎಂದಿದ್ದಾರೆ. ಅಷ್ಟೇ ಅಲ್ಲ, ಮಾನವೀಯತೆ ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ" ಎಂದು ತರೂರ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಅಧ್ಯಾತ್ಮ ಮುಖಂಡ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಜಾರ್ಖಂಡ್ ನಲ್ಲಿ ಇತ್ತೀಚೆಗೆ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಅಷ್ಟೇ ಅಲ್ಲ, ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಕೊಲೆಯ ಪ್ರಕರಣ ಹೆಚ್ಚುತ್ತಿರುವ ಬಗ್ಗೆಯೂ ತರೂರ್ ಕಳವಳ ವ್ಯಕ್ತಪಡಿಸಿದರು.
'ಬಿಜೆಪಿ ಹಿಂದುತ್ವದಲ್ಲಿ ತಾಲಿಬಾನ್ ಸೃಷ್ಟಿಸಲು ನೋಡುತ್ತಿದೆ', 'ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ಭಾರತ ಹಿಂದು ಪಾಕಿಸ್ತಾನವಾಗಲಿದೆ' ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಶಶಿ ತರೂರ್ ಅವರ ವಿವಾದದ ಪಟ್ಟಿಗೆ ಸ್ವಾಮಿ ವಿವೇಕಾನಂದರ ಕುರಿತ ಈ ಹೇಳಿಕೆ ಹೊಸ ಸೇರ್ಪಡೆ ಎನ್ನಿಸಿದೆ.












Click it and Unblock the Notifications