ವಿಶ್ವದಲ್ಲಿಯೇ ಹೆಚ್ಚು ಸಂಬಳ ಪಡೆಯೋ ಉದ್ಯೋಗಿ, ಕಳೆದ 15 ವರ್ಷಗಳಿಂದ ತಿಂತಿರೋದು ಒಂದೇ ತಿಂಡಿಯಂತೆ!
ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಗೂಗಲ್‌ನ ಸಿಇಒ ಆಗಿರುವ ಸುಂದರ್ ಪಿಚೈ ಅವರ ವಾರ್ಷಿಕ ಆದಾಯ ನೂರಾರು ಕೋಟಿಗಳಷ್ಟಿದೆ. ಅವರು ಮನಸ್ಸು ಮಾಡಿದರೆ ಪ್ರಪಂಚದ ಅತಿ ದುಬಾರಿ ಮತ್ತು ವಿಧವಿಧವಾದ ಖಾದ್ಯಗಳನ್ನ ಪ್ರತಿದಿನ ಸವಿಯಬಹುದು. ಆದರೆ, ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಗಳಲ್ಲಿ ಒಬ್ಬರಾದ ಅವರು, ಕಳೆದ 15 ವರ್ಷಗಳಿಂದ ತಮ್ಮ ಮುಂಜಾನೆಯ ಉಪಾಹಾರಕ್ಕಾಗಿ ಕೇವಲ ಒಂದೇ ರೀತಿಯ ತಿನಿಸನ್ನ ಸೇವಿಸುತ್ತಿದ್ದಾರೆ ಎಂಬ ವಿಚಾರ ಅಚ್ಚರಿ ಮೂಡಿಸುತ್ತದೆ.
ಹೌದು, ವಾಷಿಂಗ್ಟನ್‌ನಿಂದ ಬಂದಿರುವ ಮಾಹಿತಿಯ ಪ್ರಕಾರ, ಸುಂದರ್ ಪಿಚೈ ಅವರ ಬೆಳಗಿನ ತಿಂಡಿ ಮೆನು 15 ವರ್ಷಗಳಿಂದ ಬದಲಾಗಿಲ್ಲ. ಇದರ ಹಿಂದೆ ಒಂದು ಬಲವಾದ ಮತ್ತು ಆಸಕ್ತಿದಾಯಕ ಕಾರಣ ಅಡಗಿದೆ.

15 ವರ್ಷಗಳಿಂದ ಬದಲಾಗದ ಉಪಾಹಾರ
ಸುಂದರ್ ಪಿಚೈ ಅವರ ಪ್ರತಿದಿನದ ಉಪಾಹಾರದಲ್ಲಿ ಇರುವುದು ಕೇವಲ ಮೊಟ್ಟೆ, ಟೋಸ್ಟ್ ಮತ್ತು ಒಂದು ಕಪ್ ಟೀ. ಅಷ್ಟಕ್ಕೂ ಈ ಕೋಟ್ಯಾಧಿಪತಿ ಸಿಇಒ ಏಕೆ ಒಂದೇ ರೀತಿಯ ಊಟಕ್ಕೆ ಅಂಟಿಕೊಂಡಿದ್ದಾರೆ ಗೊತ್ತಾ? ಪ್ರತಿದಿನ ಮುಂಜಾನೆ ಎದ್ದು "ಇಂದು ಏನು ತಿಂಡಿ ಮಾಡಬೇಕು? ಏನು ತಿನ್ನಬೇಕು?" ಎಂದು ಯೋಚಿಸುತ್ತಾ ಸಮಯ ಮತ್ತು ಶಕ್ತಿಯನ್ನ ವ್ಯರ್ಥ ಮಾಡದಿರಲು.
ಹೌದು, ಬೆಳಗಿನ ಅತ್ಯಮೂಲ್ಯವಾದ ಸಮಯವನ್ನ ಆ ದಿನದ ಪ್ರಮುಖ ಕೆಲಸಗಳ ಬಗ್ಗೆ ಗಮನ ಹರಿಸಲು ಬಳಸಿಕೊಳ್ಳುವ ಉದ್ದೇಶದಿಂದಲೇ ಅವರು ಈ ಸರಳ ದಿನಚರಿಯನ್ನ ಅಳವಡಿಸಿಕೊಂಡಿದ್ದಾರೆ.
ಪಿಚೈ ಅವರ ಇತರ ಹವ್ಯಾಸಗಳು ಮತ್ತು ಇಷ್ಟದ ತಿನಿಸುಗಳು
ಮುಂಜಾನೆ ಎದ್ದ ತಕ್ಷಣ ವಾಲ್ ಸ್ಟ್ರೀಟ್ ಜರ್ನಲ್ ಓದುವ ಅಭ್ಯಾಸ ಹೊಂದಿರುವ ಸುಂದರ್ ಪಿಚೈ, ಆ ಮೂಲಕ ಪ್ರಪಂಚದ ಆಗುಹೋಗುಗಳನ್ನ ತಿಳಿದುಕೊಳ್ಳುತ್ತಾರೆ. ಉಪಾಹಾರ ಒಂದೇ ರೀತಿ ಇದ್ದರೂ, ಅವರು ಬೇರೆ ಬೇರೆ ನಗರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪ್ರಸಿದ್ಧ ಸ್ಥಳೀಯ ಆಹಾರಗಳನ್ನ ಸವಿಯಲು ಇಷ್ಟಪಡುತ್ತಾರೆ.
ವಿಶೇಷವಾಗಿ ಭಾರತಕ್ಕೆ ಬಂದಾಗ, ಬೆಂಗಳೂರಿನ ದೋಸೆ, ದೆಹಲಿಯ ಚೋಲೆ ಭಟೂರೆ ಮತ್ತು ಮುಂಬೈನ ಪಾವ್ ಭಾಜಿಯನ್ನು ಅವರು ಅತ್ಯಂತ ಪ್ರೀತಿಯಿಂದ ಸವಿಯುತ್ತಾರಂತೆ.
ರಾತ್ರಿಯ ವೇಳೆ ಹೆಚ್ಚು ಸಕ್ರಿಯ
ಕೆಲಸದ ವಿಚಾರಕ್ಕೆ ಬಂದರೆ, ಸುಂದರ್ ಪಿಚೈ ಅವರು 'ನೈಟ್ ಔಲ್' ಎಂದೇ ಹೇಳಬಹುದು. ಅವರು ರಾತ್ರಿಯ ವೇಳೆ ಹೆಚ್ಚು ಸಕ್ರಿಯರಾಗಿರುತ್ತಾರೆ. ರಾತ್ರಿ 9 ಗಂಟೆಯ ನಂತರ ಅವರ ಮೆದುಳು ಹೆಚ್ಚು ಚುರುಕಾಗಿ ಕೆಲಸ ಮಾಡಲಾರಂಭಿಸುತ್ತದೆ. ವಿಶೇಷವಾಗಿ ರಾತ್ರಿ 10 ಗಂಟೆಯ ಬಳಿಕ ತಾವು ಅತ್ಯುತ್ತಮವಾಗಿ ಕೆಲಸ ಮಾಡಬಲ್ಲೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಪ್ರತಿದಿನ 6.5 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡುವ ಅವರು, ಆರೋಗ್ಯದ ದೃಷ್ಟಿಯಿಂದ ವಾರದ ದಿನಗಳಲ್ಲಿ ಸಮಯ ಸಿಕ್ಕಾಗಲೆಲ್ಲಾ ಹಾಗೂ ವಾರಾಂತ್ಯದಲ್ಲಿ ವ್ಯಾಯಾಮ ಮಾಡಲು ಮಾತ್ರ ಮರೆಯುವುದಿಲ್ಲ.
ಯಶಸ್ವಿ ವ್ಯಕ್ತಿಗಳ ಸರಳ ದಿನಚರಿಯ ಹಿಂದಿನ ಸೈಕಾಲಜಿ
ಕೇವಲ ಸುಂದರ್ ಪಿಚೈ ಮಾತ್ರವಲ್ಲ, ಜಗತ್ತಿನ ಬಹುತೇಕ ಯಶಸ್ವಿ ಉದ್ಯಮಿಗಳು, ಸೃಜನಶೀಲ ವ್ಯಕ್ತಿಗಳು ಮತ್ತು ನಾಯಕರು ಇಂತಹದೇ ದಿನಚರಿಯನ್ನು ಪಾಲಿಸುತ್ತಾರೆ. ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಅವರಂತಹ ದಿಗ್ಗಜರು ಪ್ರತಿದಿನ ಒಂದೇ ರೀತಿಯ ಬಟ್ಟೆ ಧರಿಸುವುದನ್ನು ನೀವು ಗಮನಿಸಿರಬಹುದು.
ಇದಕ್ಕೆ ಕಾರಣ, ಮನುಷ್ಯನ 'ಡಿಸಿಷನ್ ಫೆಟಿಗ್' (Decision fatigue) ಅಂದರೆ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಮರ್ಥ್ಯ ಕ್ಷೀಣಿಸುವುದು. ಬೆಳಿಗ್ಗೆಯೇ ಯಾವ ಬಟ್ಟೆ ಹಾಕಬೇಕು, ಏನು ತಿನ್ನಬೇಕು ಎಂಬಂತಹ ಸಣ್ಣಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಂಡರೆ, ಇಡೀ ದಿನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.
ಹೀಗಾಗಿಯೇ ತಮ್ಮ ಮೆದುಳಿನ ಸಾಮರ್ಥ್ಯವನ್ನು ವಿಭಜನೆಯಾಗದಂತೆ ತಡೆಯಲು ಅವರು ಎಲ್ಲದರಲ್ಲೂ ಸರಳತೆಯನ್ನ ಕಾಯ್ದುಕೊಳ್ಳುತ್ತಾರೆ.


Click it and Unblock the Notifications
