ಮಧ್ಯಪ್ರದೇಶದಲ್ಲಿ ಮತ್ತೊಂದು ರೈಲು ಅಪಘಾತ: ತಪ್ಪಿತು ಭಾರೀ ಅನಾಹುತ
ಜಬಲ್‌ಪುರ, ಜೂನ್ 07: ಒಡಿಶಾದ ಬಾಲಾಸೂರ್ ಬಳಿ ನಡೆದ ರೈಲು ದುರಂತದ ನಂತರ ದೇಶದ ಬೇರೆಲ್ಲಿಯೇ ರೈಲು ಅವಘಡಗಳು ಜರುಗಿದರೂ ಬಹುಬೇಗ ಮುನ್ನೆಲೆಗೆ ಬರುತ್ತಿವೆ. ಇದೀಗ ಮಧ್ಯಪ್ರದೇಶದಲ್ಲಿ ಎಲ್‌ಪಿಜಿ ಗ್ಯಾಸ್ ತುಂಬಿದ್ದ ಗೂಡ್ಸ್ ರೈಲಿನ ಬೋಗಿಗಳು ಸಹ ಕಳಿ ತಪ್ಪಿರುವ ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ ಜಬಲ್‌ಪುರದ ಶಹಪುರ ಭಿಟೋನಿಯಲ್ಲಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಹಳಿ ಬಿಟ್ಟು ಸರಿದಿರುವ ರೈಲು ಬೋಗಿಗಳು ಬಾಗಿರುವಂತೆ ದೃಶ್ಯದಲ್ಲಿ ಕಾಣಸುತ್ತವೆ. ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಈ ಕುರಿತು ಬುಧವಾರ ಬೆಳಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ನೀಡಿರುವ ಮಾಹಿತಿಯ ಪ್ರಕಾರ, ಗೂಡ್ಸ್ ರೈಲಿನಿಂದ ಸರಕು ಇಳಿಸಲು ನಿಲ್ಲಿಸುವ ವೇಳೆ ಮಂಗಳವಾರ ರಾತ್ರಿ 11.30 ಗಂಟೆಗೆ ಬೋಗಿಗಳು ಹಳಿ ತಪ್ಪಿಗೆ ಎಂದು ಎಎನ್‌ಐ ವರದಿ ಮಾಡಿದೆ. ಒಂದು ವೇಳೆ ಎಲ್‌ಪಿಜಿ ತುಂಬಿದ ಬೋಗಿಗಳು ಉರುಳಿ ಬಿದ್ದಿದ್ದರೆ ಅಪಾರ ಹಾನಿ ಉಂಟಾಗುತ್ತಿತ್ತು. ಸ್ವಲ್ಪದರಲ್ಲಿಯೇ ಸಂಭವನೀಯ ಅಪಘಾತ ತಪ್ಪಿದೆ ಎಂದು ತಿಳಿದು ಬಂದಿದೆ.
ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿ
ಘಟನೆ ನಡೆದ ಶಹಪುರ ಭಿಟೋನಿ ರೈಲು ನಿಲ್ದಾಣದ ಪಕ್ಕದಲ್ಲೇ ಭಾರತ್ ಪೆಟ್ರೋಲಿಯಂ ಡಿಪೋ ನಿಲ್ದಾಣವಿದೆ. ಇದರಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಂಗ್ರಹಣೆ ಮಾಡಲಾಗುತ್ತದೆ. ಬೋಗಿಗಳು ಹಳಿ ತಪ್ಪಿದ ನಂತರ ರೈಲ್ವೆ ಅಧಿಕಾರಿಗಳು ಬಂದು ಪರಿಶೀಲಿಸಿದರು. ಇದರಿಂದಾಗಿ ಶಹಪುರ ಸುತ್ತಮುತ್ತ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪರಿಶೀಲನೆ ನಡೆಸಿದ ಅಧಿಕಾರಿಗಳು ಇತರ ರೈಲುಗಳ ಸಂಚಾರದಲ್ಲಿ ಯಾವುದೇ ತೊಂದರೆ, ಅಡಚಣೆ ಉಂಟಾಗಿಲ್ಲ. ಮುಖ್ಯ ಲೈನ್ ನಲ್ಲಿ ಎಂದಿನಂತೆ ಪ್ರಯಾಣಿಕರ ರೈಲು ಸಂಚಾರ ಸ್ಥಗಿತಗೊಂಡಿಲ್ಲ ಎಂದರು.

ಜಬಲ್‌ಪುರದ ರೈಲ್ವೆ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ರೈಲ್ವೆ ಬೋಗಿಗಳ ಮರುಸ್ಥಾಪನೆ ಕಾರ್ಯ ನಡೆದಿದೆ. ಫಿಟ್‌ನೆಸ್ ಸೈಡಿಂಗ್ ಮಾಲೀಕರಿಂದ ಪ್ರಮಾಣಪತ್ರವನ್ನು ನೀಡಲಾಗಿದೆ. ಘಟನೆಯಲ್ಲಿ ಯಾವುದೇ ನಷ್ಟವಾಗಿಲ್ಲ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಮಾಹಿತಿ ನೀಡಿದೆ.
ತ್ರಿವಳಿ ರೈಲು ಅಪಘಾತ: ಎಂದಿನಂತೆ ಮಾರ್ಗದಲ್ಲಿ ರೈಲು ಸಂಚಾರ
ಇತ್ತೀಚೆಗೆ ಜೂನ್ 2ರಂದು ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲುಗಳ ದುರಂತದ ಬೆನ್ನಲ್ಲೆ ವಿವಿಧೆ ರೈಲ್ವೆ ಸಣ್ಣಪುಟ್ಟ ಅಪಘಾತಗಳು ಮುನ್ನೆಲೆಗೆ ಬರುತ್ತಿರುವ. ಈ ಮೂರು ರೈಲುಗಳ ಡಿಕ್ಕಿಯಲ್ಲಿ ಕನಿಷ್ಠ 275 ಜನರು ಸಾವನ್ನಪ್ಪಿದ್ದಾರೆ. ಸುಮಾರು 1,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಅಪಘಾತವು ಸಿಗ್ನಲಿಂಗ್ ಪ್ರದರ್ಶನದಲ್ಲಿ ಉಂಟಾದ ಲೋಪದಿಂದ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಹೇಳಿದೆ.
ದುರಂತದ ಪ್ರಾಥಮಿಕ ವರದಿಯು ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಹಳಿಗಳಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳನ್ನು ಒಳಗೊಂಡ ಮೂರು ಮಾರ್ಗಗಳ ಅಪಘಾತ ಸಂಭವಿಸಿದೆ. ಜನರ ರಕ್ಷಣಾ ಕಾರ್ಯ ಮುಗಿಯುತ್ತಿದ್ದಂತೆ , ಹಳಿಗಳ ಮರುಸ್ಥಾಪನೆ ಮಾಡಿ ಎಂದಿನಂತೆ ರೈಲು ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಸೋಮವಾರದಿಂದ ಒಡಿಶಾ ರೈಲು ದುರಂತ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.












Click it and Unblock the Notifications