ಯುಪಿ ಉದ್ಯೋಗಿಗಳಿಗೆ ಯೋಗಿ ಸರ್ಕಾರದಿಂದ ಗುಡ್ ನ್ಯೂಸ್- 4 ಪರ್ಸೆಂಟ್ ಡಿಎ ಹೆಚ್ಚಳ..!
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಇಂದು ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ನೌಕರರಿಗೆ ಶೇ 4ರಷ್ಟು ಡಿಎ ಹೆಚ್ಚಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಇದರಿಂದ 19 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಹೀಗಾಗಿ ಯೋಗಿ ಸರ್ಕಾರದ ಇತ್ತೀಚಿನ ಆದೇಶಗಳ ಬಗ್ಗೆ ಒಕ್ಕೂಟಗಳು ಸಂತೋಷಗೊಂಡಿವೆ.
ಯೋಗಿ ಆದಿತ್ಯನಾಥ್ ಸರ್ಕಾರ ಈ ವರ್ಷದ ಜನವರಿ 1 ರಲ್ಲಿ ಯುಪಿಯಲ್ಲಿ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯವಾಗುವಂತೆ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುವುದಾಗಿ ಹೇಳಿತ್ತು. ಈ ಹೆಚ್ಚಳದ ನಂತರ ಯುಪಿಯಲ್ಲಿ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಶೇಕಡಾ 38 ರಿಂದ 42 ಕ್ಕೆ ಏರಿಕೆಯಾಗಲಿತ್ತು. ಸದ್ಯ ಡಿಎ ಹೆಚ್ಚಳ ಪ್ರಸ್ತಾವನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಯುಪಿಯಲ್ಲಿ ಇತ್ತೀಚಿನ ಡಿಎ-ಡಿಆರ್ ಹೆಚ್ಚಳದಿಂದ 16 ಲಕ್ಷ ರಾಜ್ಯ ಉದ್ಯೋಗಿಗಳು ಮತ್ತು 11.5 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

ವಾಸ್ತವವಾಗಿ ಈ ವರ್ಷದ ಮಾರ್ಚ್ 24 ರಂದು ಕೇಂದ್ರ ಸರ್ಕಾರ ನೌಕರರು ಮತ್ತು ಪಿಂಚಣಿದಾರರಿಗೆ ಡಿಎಯನ್ನು 42 ಪ್ರತಿಶತಕ್ಕೆ ಹೆಚ್ಚಿಸಿ ಅನುಮೋದನೆ ನೀಡಿತು. ಈ ಹಿನ್ನಲೆಯಲ್ಲಿ ಯೋಗಿ ಸರ್ಕಾರ ಯುಪಿಯಲ್ಲಿ ಡಿಎ ಹೆಚ್ಚಿಸಲು ನಿರ್ಧರಿಸಿದ್ದಾರೆ. ಜನವರಿ 1 ರಿಂದ ಏಪ್ರಿಲ್ 30 ರವರೆಗೆ ಸರ್ಕಾರಿ ನೌಕರರಿಗೆ ಹೆಚ್ಚಿದ ಡಿಎ ಅವರ ಜಿಪಿಎಫ್ ಖಾತೆಗೆ ಹೋಗುತ್ತದೆ. ಮೇ ತಿಂಗಳಲ್ಲಿ ಹೆಚ್ಚಿಸಿದ ಡಿಎಯನ್ನು ಮೇ ತಿಂಗಳ ಸಂಬಳದೊಂದಿಗೆ ಜೂನ್‌ನಲ್ಲಿ ನಗದು ರೂಪದಲ್ಲಿ ಪಾವತಿಸಲಾಗುತ್ತದೆ.
ಯುಪಿಯಲ್ಲಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರು ನೌಕರರ ಬಗ್ಗೆ ಸಕಾರಾತ್ಮಕವಾಗಿಯೇ ಇದ್ದಾರೆ. ನೌಕರರ ಸವಲತ್ತುಗಳ ಬಗ್ಗೆ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಡಿಎ ಹೆಚ್ಚಳ ನಿರ್ಧಾರವೂ ಜಾರಿಯಾಗಿದ್ದು, ನೌಕರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ತಿಂಗಳು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಬಾರಿ ಯೋಜಿತ ರೀತಿಯಲ್ಲಿ ಒಬಿಸಿ ಕೋಟಾ ಜಾರಿ ಜತೆಗೆ ಸಿಎಂ ಯೋಗಿ ಆದಿತ್ಯನಾಥ್ ತಮ್ಮದೇ ಆದ ರಣತಂತ್ರ ರೂಪಿಸಿದ್ದರು. ಚುನಾವಣೆ ನಡೆದ ಎಲ್ಲಾ ಪಾಲಿಕೆಗಳನ್ನು ತನ್ನದಾಗಿಸಿಕೊಂಡ ಕೇಸರಿ ಪಕ್ಷ, ಪಂಚಾಯ್ತಿಯಲ್ಲೂ ಕಾಲಿಡುತ್ತಿದೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 17 ಪಾಲಿಕೆಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಇದರೊಂದಿಗೆ ಈ 17 ಪಾಲಿಕೆಗಳ ಮೇಯರ್ ಹುದ್ದೆಗಳನ್ನೆಲ್ಲ ಬಿಜೆಪಿ ವಶಪಡಿಸಿಕೊಳ್ಳಲಿದೆ. ಅದೇ ರೀತಿ ನಗರ ಪಂಚಾಯತ್, ನಗರ ನಿಗಮ, ನಗರ ಪಾಲಿಕೆ ಪರಿಷತ್ತಿನಲ್ಲಿ ಬಿಜೆಪಿ ಮುಂದುವರಿದಿದೆ. ಝಾನ್ಸಿ, ಅಯೋಧ್ಯೆ, ಬರೇಲಿ, ಸಹರಾನ್‌ಪುರ, ಘಾಜಿಯಾಬಾದ್, ಮಥುರಾ, ಮೊರಾದಾಬಾದ್ ಮತ್ತು ಇತರೆ ಪಾಲಿಕೆಗಳನ್ನು ಬಿಜೆಪಿ ಗೆದ್ದಿದೆ.
ಯುಪಿ ನಗರ ಸಭೆಗಳಲ್ಲಿ 199 ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ 98ರಲ್ಲಿ ಬಿಜೆಪಿ ಗೆದ್ದಿದೆ. ಸಮಾಜವಾದಿ ಪಕ್ಷ 38, ಬಿಎಸ್ಪಿ 18 ಮತ್ತು ಕಾಂಗ್ರೆಸ್ 6 ಸ್ಥಾನ ಪಡೆದಿವೆ. ಈ ಸ್ಥಾನಗಳಲ್ಲಿ ಆಯಾ ಪಕ್ಷಗಳು ಅಧ್ಯಕ್ಷ ಸ್ಥಾನಗಳನ್ನು ಪಡೆಯಲಿವೆ.












Click it and Unblock the Notifications