ಅಸಾರಾಮ್ ಬಾಪುಗೆ 'ಬೇಲ್' ಇಲ್ಲ, ಜೈಲಿನಲ್ಲೇ ವಾಸ
ನವದೆಹಲಿ, ಸೆ.16: ಅಪ್ರಾಪ್ತ ವಯಸ್ಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತು ಜೈಲು ಸೇರಿರುವ ಸ್ವಯಂಘೋಷಿತ ದೇವಮಾನ ಅಸಾರಾಮ್ ಬಾಪು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಬಾಪು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರಗೊಂಡಿದ್ದು, ಸೆ.30ರ ತನಕ ಜೈಲಿನಲ್ಲೇ ನೆಲೆಸಬೇಕಿದೆ.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜೋಧಪುರದ ಸ್ಥಳೀಯ ಕೋರ್ಟ್ ಸೋಮವಾರ (ಸೆ.16) ಅಸಾರಾಮ್ ಬಾಪು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜಾಮೀನು ನಿರಾಕರಿಸಿದೆ. ರಾಜಸ್ಥಾನ ಹೈಕೋರ್ಟಿನಲ್ಲಿ ಬಾಪು ಅವರ ಮೇಲ್ಮನವಿ ಅರ್ಜಿ ಇಂದು ವಿಚಾರಣೆಗೆ ಬರಲಿದೆ.
ಅಸಾರಾಮ್ ಪರ ಅವರ ಭಕ್ತರು ನಡೆಸುತ್ತಿರುವ ವ್ಯಾಪಕ ಪ್ರತಿಭಟನೆಯೇ ಬಾಪುಗೆ ಮುಳುವಾಗಿದ್ದು, ಬಾಪು ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಹೊರಕ್ಕೆ ಹೋದರೆ ಸಾಕ್ಷ್ಯ ನಾಶಪಡಿಸುವುದರಲ್ಲಿ ಅನುಮಾನವೇ ಇಲ್ಲ. ಈ ಹಿಂದೆ ಕೂಡಾ ಅನೇಕ ಪ್ರಕರಣಗಳಲ್ಲಿ ಸಾಕ್ಷ್ಯ ನಾಶ ಪಡಿಸಿದ ಉದಾಹರಣೆಗಳಿವೆ ಎಂಬ ವಾದವನ್ನು ಮನ್ನಿಸಿದ ಕೋರ್ಟ್ ಅಸಾರಾಮ್ ಅವರಿಗೆ ಜಾಮೀನು ನಿರಾಕರಿಸಿದೆ.
ಇದರ ಜತೆಗೆ ಬಾಪು ಕಡೆ ಭಕ್ತರು ಸಂತಸ್ತ ಬಾಲಕಿಯ ಕುಟುಂಬಕ್ಕೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಬಾಲಕಿಯ ಅಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಇನ್ನಷ್ಟು ನಿದ್ರೆರಹಿತ ರಾತ್ರಿಗಳನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಅಸಾರಾಮ್ ಬಾಪು ಅವರ ಪುರುಷತ್ವ ಪರೀಕ್ಷೆ ನಡೆಸಿದ ಬಗ್ಗೆ ಕಿಡಿಕಾರಿರುವ ಬಾಪು ಅವರ ವಕೀಲ ಕೆಕೆ ಮೆನನ್ ಇದೊಂದು ಷಡ್ಯಂತ್ರವಾಗಿದೆ ಎಂದಿದ್ದಾರೆ.
ಯುವತಿ ಅಪ್ರಾಪ್ತ ವಯಸ್ಕಳು ಎನ್ನುತ್ತಿರುವ ಬಗ್ಗೆ ವರದಿಗಳು ಬಂದಿದೆ. ಯುವತಿಯ ಡಿಎನ್ ಎ ಪರೀಕ್ಷೆ ಮಾಡಿ ಆಕೆ ಅಪ್ರಾಪ್ತ ವಯಸ್ಕಳೆ ಅಲ್ಲವೇ ಎಂಬುದನ್ನು ಮೊದಲು ನಿರ್ಧರಿಸಲಿ ಎಂದಿದ್ದಾರೆ. ಜೋಧಪುರ ಪೊಲೀಸರು ಬಾಪು ವಿರುದ್ಧ Protection of Children against Sexual Offences (POSCO) ಅನ್ವಯ ಕೇಸು ದಾಖಲಿಸುತ್ತಾರೆ ಎಂಬ ಸುದ್ದಿಯೂ ಇದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಾಪು ಒಬ್ಬರೇ ಆರೋಪಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಮ್ ಬಾಪು ಅವರ ಆಪ್ತ ಶಿವ ಎಂಬುವವರನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಶಿವ ಅವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications