ಗೋವಾ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಿಷೇಧ!
Recommended Video

ಪಣಜಿ, ಸೆ. 18: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವವರಿಗೆ ಜೈಲು ಶಿಕ್ಷೆ ವಿಧಿಸಲು ಇಲ್ಲಿನ ಮನೋಹರ್ ಪಾರಿಕ್ಕರ್ ಸರ್ಕಾರ ಮುಂದಾಗಿದೆ. ಇನ್ಮುಂದೆ ರಸ್ತೆ ಬದಿಯಲ್ಲಿ ಕುಳಿತು ಬಿಯರ್ ಕುಡಿದರೆ ನೇರ ಜೈಲಿಗೆ ಸೇರಬೇಕಾಗುತ್ತದೆ.
ಈ ಬಗ್ಗೆ ಅಕ್ಟೋಬರ್ ತಿಂಗಳ ವೇಳೆಗೆ ಕಾನೂನು ಜಾರಿಗೆ ತರಲಾಗುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವವರಿಗೆ ತಕ್ಕಶಾಸ್ತಿಯಾಗಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಹೇಳಿದ್ದಾರೆ.

1964ರ ಗೋವಾ, ದಮನ್ ಡಿಯು ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈಗಾಗಲೇ ಬೀಚ್ ಹಾಗೂ ಕೆಲವು ಪ್ರದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವುದು ಕಂಡು ಬಂದಲ್ಲಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ. ಐಪಿಸಿ ಸೆಕ್ಷನ್ 34ರ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ಸರ್ಕಾರ ಮುಂದಾಗಿದೆ.
ಈ ಹಿಂದೆ ಮೇ ತಿಂಗಳಿನಲ್ಲಿ ನಡೆದ ಕಾಲುನ್ ಗೇಟ್ ಪೊಲೀಸ್ ಠಾಣೆಯಲ್ಲಿ ನಡೆದ ಸಾರ್ವಜನಿಕರ, ಪ್ರವಾಸೋದ್ಯಮ ಪ್ರತಿನಿಧಿಗಳ ಹಾಗೂ ಪೊಲೀಸರ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.
ಸಾರ್ವಜನಿಕರು ಕೂಡ ಪೊಲೀಸರಿಗೆ ಅಗತ್ಯ ಮಾಹಿತಿ ನೀಡಿದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಇತರರಿಗೆ ತೊಂದರೆಯುಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಪೊಲೀಸ್ ಇಲಾಖೆ ಹೇಳಿದೆ.
ರಾತ್ರಿ ಹೊತ್ತು ಪ್ರವಾಸಿಗರು ಬೀಚ್ ಗಳಲ್ಲಿ ಕುಳಿತುಕೊಂಡು ಮದ್ಯ ಸೇವಿಸುತ್ತಿರುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ(ಒನ್ಇಂಡಿಯಾ ಸುದ್ದಿ)












Click it and Unblock the Notifications