Ambani vs Adani: ಷೇರು ಮಾರ್ಕೆಟ್ ಅಬ್ಬರ: ಇವರೇ ನೋಡಿ ಭಾರತ, ಏಷ್ಯಾದ ಶ್ರೀಮಂತ ವ್ಯಕ್ತಿ
ದೇಶದಲ್ಲಿ ಲೋಕಸಭಾ ಚುನಾವಣೆಗಳ ಕಾವು ಏರಿದೆ. ಯಾರು ಗದ್ದುಗೆಗೆ ಏರಲಿದ್ದಾರೆ ಎಂಬ ಪೈಪೋಟಿ ಸಹ ನಡೆಯುತ್ತಿದೆ. ಈ ಬೆನ್ನಲ್ಲೆ ದೇಶದ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಯನ್ನು ಯಾರು ಪಡೆಯಬಹುದು ಎಂದು ಒಂದು ಚರ್ಚೆ ಇತ್ತಿಚಿಗೆ ನಡೆಯುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಈ ರೇಸ್‌ನಲ್ಲಿ ರಿಲಯನ್ಸ್ ಕಂಪನಿಯ ಮಾಲಿಕ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ನಡುವೆ ಬಿರುಸಿನ ಪೈಪೋಟಿ ನಡೆದಿತ್ತು.
ಈಗ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈಗ ರಿಲಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಅವರನ್ನು ಬಿಟ್ಟು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ಇವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರಾಗಿದ್ದಾರೆ.

ಶುಕ್ರವಾರ ಅದಾನಿ ಸಮೂಹದ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರೊಂದಿಗೆ, ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳೀಕರಣವು ದಾಖಲೆಯ ಗರಿಷ್ಠ 17.88 ಲಕ್ಷ ಕೋಟಿ ರೂ. ತಲುಪಿದೆ. ಅದಾನಿ ಎಂಟರ್‌ಪ್ರೈಸಸ್ ಸೇರಿದಂತೆ ನಾಲ್ಕು ಸಮೂಹ ಕಂಪನಿಗಳ ಷೇರುಗಳನ್ನು ಖರೀದಿಸಲು ಅಮೆರಿಕದ ಬ್ರೋಕರೇಜ್ ಸಂಸ್ಥೆ ಜೆಫರೀಸ್ ಸಲಹೆ ನೀಡಿತ್ತು.
ಅದಾನಿ ಗ್ರೂಪ್ ಷೇರುಗಳ ಜಿಗಿತ
ಶುಕ್ರವಾರದಂದು ಅದಾನಿ ಸಮೂಹದ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ.6.84 ಅಥವಾ ರೂ.218.35ರಷ್ಟು ಏರಿಕೆಯಾಗಿ ರೂ.3411.45ಕ್ಕೆ ತಲುಪಿದೆ. ಅದಾನಿ ಪೋರ್ಟ್ಸ್ ಷೇರುಗಳು, ಅದಾನಿ ಪವರ್ ಷೇರುಗಳು, ಅದಾನಿ ಎನರ್ಜಿ, ಅದಾನಿ ಗ್ರೀನ್, ಅದಾನಿ ಟೋಟಲ್, ಅದಾನಿ ವಿಲ್ಮರ್ ಷೇರುಗಳು ನಿವ್ವಳ ಏರಿಕೆ ಆಗಿದ್ದರಿಂದ ಅದಾನಿ ಸಂಪತ್ತು ವೃದ್ಧಿಸಿದೆ.
ಒಂದೇ ದಿನ ಹೆಚ್ಚಾಯಿತು ಮೌಲ್ಯ
ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ ಒಂದೇ ದಿನದಲ್ಲಿ 5.45 ಬಿಲಿಯನ್ ಡಾಲರ್ ಅಂದರೆ 45,500 ಕೋಟಿ ರೂ. ಏರಿಕೆ ಕಂಡಿದೆ. ಇದರೊಂದಿಗೆ ಅವರ ಸಂಪತ್ತು111 ಶತಕೋಟಿ ಡಾಲರ್‌ಗೆ ಏರಿದೆ. ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಈ ವರ್ಷ ಇದುವರೆಗೆ 26.8 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಇದರೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಟಾಪ್ 10ರಲ್ಲಿ ಯಾರಿಗೆ ಸ್ಥಾನ?
ವಿಶ್ವದ ಅಗ್ರ ಹತ್ತು ಬಿಲಿಯನೇರ್‌ಗಳಲ್ಲಿ ಎಂಟು ಮಂದಿಯ ನಿವ್ವಳ ಮೌಲ್ಯವು ಶುಕ್ರವಾರ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ 207 ಶತಕೋಟಿ ಡಾಲರ್‌ನೊಂದಿಗೆ ಮೊದಲ ಸ್ಥಾನದಲ್ಲಿ ಉಳಿದಿದ್ದಾರೆ. ಎಲೋನ್ ಮಸ್ಕ್ (203 ಬಿಲಿಯನ್ ಡಾಲರ್) ಎರಡನೇ ಸ್ಥಾನದಲ್ಲಿದ್ದಾರೆ. ಜೆಫ್ ಬೆಜೋಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಬಿಲ್ ಗೇಟ್ಸ್, ಸೆರ್ಗೆ ಬ್ರಿನ್, ಸ್ಟೀವ್ ಬಾಲ್ಮರ್, ವಾರೆನ್ ಬಫೆಟ್, ಮತ್ತು ಲ್ಯಾರಿ ಎಲಿಸನ್ ಕ್ರಮವಾಗಿ ಉಳಿದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications