G20 Summit in Delhi: ಜಿ20 ಶೃಂಗಸಭೆಗೆ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಜಿನ್‌ಪಿಂಗ್ ಗೈರು
ನವದೆಹಲಿ, ಆಗಸ್ಟ್ 31: ಮುಂದಿನ ವಾರ ಭಾರತದಲ್ಲಿ ನಡೆಯಲಿರುವ ಜಿ 20 ನಾಯಕರ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗೈರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಚೀನಾದ ಪ್ರಿಮಿಯರ್ ( ಅಧ್ಯಕ್ಷರ ನಂತರ ಸ್ಥಾನದಲ್ಲಿರುವ ನಾಯಕ ) ಲಿ ಕಿಯಾಂಗ್ ಅವರು ಬೀಜಿಂಗ್ ಅನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಈ ಕುರಿತು ಇಬ್ಬರು ಭಾರತೀಯ ಅಧಿಕಾರಿಗಳು, ಚೀನಾ ಮೂಲದ ಒಬ್ಬ ರಾಜತಾಂತ್ರಿಕರು ಹಾಗೂ ಜಿ 20 ರಾಷ್ಟ್ರವೊಂದರ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ಭಾರತ ಮತ್ತು ಚೀನಾದ ವಿದೇಶಾಂಗ ಸಚಿವಾಲಯಗಳ ವಕ್ತಾರರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಸುದ್ದಿಸಂಸ್ಥೆ 'ರಾಯಟರ್ಸ್' ವರದಿ ಮಾಡಿದೆ.
ಕಳೆದ ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ಶೃಂಗಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಬೈಡನ್ ಅವರನ್ನು ಜಿನ್‌ಪಿಂಗ್ ಅವರು ಕೊನೆಯ ಬಾರಿ ಭೇಟಿಯಾಗಿದ್ದರು.

ಭಾರತದಲ್ಲಿನ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಮೂಲಕ ಜಗತ್ತಿನ ಎರಡು ಶಕ್ತಿಶಾಲಿ ರಾಷ್ಟ್ರಗಳು ತಮ್ಮ ನಡುವಿನ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಲಿವೆ ಎಂದು ಹೇಳಲಾಗಿತ್ತು. ಈಗ ಜಿ 20 ಶೃಂಗಸಭೆಗೆ ಜಿನ್‌ಪಿಂಗ್ ಗೈರಾಗುವ ಕುರಿತು ವರದಿಯಾಗಿದೆ. ಇದು ಹಲವು ಊಹಾಪೋಹಳಿಗೆ ಕಾರಣವಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನವದೆಹಲಿಗೆ ಬರುವುದಿಲ್ಲವೆಂದು ಖಚಿತಪಡಿಸಿದ್ದಾರೆ. ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಕಳುಹಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಪುಟಿನ್ ಹಾಗೂ ಜಿನ್‌ಪಿಂಗ್ ನಿರ್ಧಾರಗಳು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.
ಜಿ20 ಶೃಂಗಸಭೆ
ಜಿ20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜುಗೊಂಡಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಅನೇಕ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ. ಐಟಿಸಿ ಮೌರ್ಯ, ತಾಜ್ ಪ್ಯಾಲೇಸ್, ಶಾಂಗ್ರಿ-ಲಾ, ದಿ ಇಂಪೀರಿಯಲ್, ಲೆ ಮೆರಿಡಿಯನ್, ಜೆಡಬ್ಲ್ಯೂ ಮ್ಯಾರಿಯೊಟ್ ಸೇರಿದಂತೆ ಪ್ರಮುಖ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿ20 ಶೃಂಗಸಭೆಯ ಮುಖ್ಯ ಸ್ಥಳ, ಹೋಟೆಲ್‌ಗಳು ಮತ್ತು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ 50 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಮ್ ಮಹೋಹರ್ ಲೋಹಿಯಾ ಆಸ್ಪತ್ರೆ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications