G20 Summit 2023 Leaders List: ಜಿ20 ಶೃಂಗಸಭೆಗೆ ಪಾಲ್ಗೊಳ್ಳುವ -ಗೈರಾಗುವ ನಾಯಕರ ಪಟ್ಟಿ ಇಲ್ಲಿದೆ
ನವದೆಹಲಿ, ಸೆಪ್ಟಂಬರ್ 08: ಬಹುನಿರೀಕ್ಷೆಯ ಜಿ20 ಶೃಂಗಸಭೆಯು ಇದೇ ವಾರಾಂತ್ಯದಲ್ಲಿ ಸೆ.9 ಮತ್ತು 10ಎಂದು ರಾಷ್ಟ್ರ ರಾಜಧಾನಿಯ ದೆಹಲಿಯಲ್ಲಿ ನಡೆಯಲಿದೆ. ಈ ಸಂಬಂಧ ಅಗತ್ಯ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಶೃಂಗಸಭೆ ಸಲುವಾಗಿ ವಿಶ್ವದ ಕೆಲವು ಶಕ್ತಿಶಾಲಿ ಹಾಗೂ ಪ್ರಭಾವಿ ನಾಯಕರುಗಳು ಭಾರತಕ್ಕೆ ಆಗಮಿಸಲಿದ್ದಾರೆ. ಅಮೆರಿಕಾ (US) ಅಧ್ಯಕ್ಷ ಜೋ ಬೈಡೆನ್, ಇಂಗ್ಲೆಂಡ್ (UK) ಪ್ರಧಾನಿ ರಿಷಿ ಸುನಕ್ ಸೇರಿದಂತೆ ಇನ್ನಿತರ ರಾಷ್ಟ್ರಗಳ ಮುಖ್ಯಸ್ಥರು ವರ್ಷದ ಪ್ರಮುಖ ಜಾಗತಿಕ ಕೂಟಗಳಲ್ಲಿ ಒಂದಾಗಲಿದ್ದಾರೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಆರ್ಥಿಕ ಕುಸಿತ, ಇಂದನ ಬೆಲೆ ಸೇರಿದಂತೆ ಜಾಗತಿಕ ವಿಚಾರಗಳ ಕುರಿತು ಎರಡು ದಿನ ಚರ್ಚೆ ನಡೆಸಲಿದ್ದಾರೆ.

ಹಾಗಾದರೆ ಭಾರತದಲ್ಲಿಯ ನಡೆಯುತ್ತಿರುವ ಇಂಥಹ ಮಹತ್ವ ಸಮ್ಮೇಳನಕ್ಕೆ ಯಾವ ಗಣ್ಯರು ಹಾಜರಾಗುತ್ತಾ, ಯಾರು ಗೈರಾಗುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿ ತಿಳಿಯಬಹುದಾಗಿದೆ.
G20 ಶೃಂಗಸಭೆಯಲ್ಲಿ ಭಾಗವಹಿಸುವವರ ವಿವರ
ಅಮೆರಿಕಾ (US) ಜೋ ಬೈಡೆನ್ ಅವರು ಇಂದು ಸೆ. 8ರಂದು ನವದೆಹಲಿಗೆ ಆಗಮಿಸಲಿದ್ದಾರೆ. ಅವರು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಅವರು ಸಭೆಯಲ್ಲಿ ಉಕ್ರೇನ್‌ನಲ್ಲಿನ ಯುದ್ಧದ ಸಾಮಾಜಿಕ ಪರಿಣಾಮ, ಶುದ್ಧ ಶಕ್ತಿಯ ಪರಿವರ್ತನೆ, ಹವಾಮಾನ ಬದಲಾವಣೆಗಳ ವಿರುದ್ಧದ ಹೋರಾಟ ಹಾಗೂ ಬಡತನದ ನೀಗಿಸಲು ಬಹುಪಕ್ಷೀಯ ಬ್ಯಾಂಕುಗಳ ಸಾಮರ್ಥ್ಯ ಹೆಚ್ಚಳ ವಿಚಾರಗಳ ಕುರಿತು ಅವರು ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

* ಇಂಗ್ಲೆಂಡ್ (UK) ಅಧ್ಯಕ್ಷ ರಿಷಿ ಸುನಕ್ ಅವರು ಪ್ರಧಾನ ಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಸ್ವದೇಶ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರು ನವದೆಹಲಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
* ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ಆಗಮನ ಸಹ ಖಚಿತವಾಗಿದೆ. G7 ನ ಪ್ರಸ್ತುತ ಅಧ್ಯಕ್ಷರಾಗಿ ಉಕ್ರೇನ್ ಯುದ್ಧಕ್ಕಾಗಿ ರಷ್ಯಾ ವಿರುದ್ಧ ಅವರು ಟೀಕಿಸುವ ಸಾಧ್ಯತೆಗಳು ಇವೆ.
* ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ. ಆದರೆ G20 ಶೃಂಗಸಭೆಗಾಗಿ ನಾಳೆ ಸೆಪ್ಟೆಂಬರ್ 9ಕ್ಕೆ ಅವರು ಆಗಮಿಸಲಿದ್ದಾರೆ ಎಂದು ಅವರು ಕಚೇರಿ ಮಾಹಿತಿ ನೀಡಿದೆ.
* ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದು ಪಕ್ಕಾ ಆಗಿದೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳು ಇವೆ.
* ಭಾರತ, ಇಂಡೋನೇಷ್ಯಾ ಹಾಗೂ ಫಿಲಿಪೈನ್ಸ್ ಒಳಗೊಂಡ ಮೂರು ದೇಶಗಳ ಪ್ರವಾಸದ ಭಾಗವಾಗಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸದರಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
* ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸಹ ನಾಳೆ ರಾಷ್ಟ್ರ ರಾಜಧಾನಿಗೆ ಬಂದಿಳಿಯಲಿದ್ದಾರೆ. ರಷ್ಯಾ ಹಾಗೂ ಚೀನಾದ ಅನುಪಸ್ಥಿತಿಯ ಹೊರತಾಗಿಯೂ ಶೃಂಗಸಭೆ ಮಹತ್ವ ಪಡೆದುಕೊಂಡಿದೆ.
* ಅಧ್ಯಕ್ಷ ಯೂನ್ ಸುಕ್ ಯೋಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಉತ್ತರ ಕೊರಿಯಾದ ಪರಮಾಣು ಬೆದರಿಕೆ, ಕ್ಷಿಪಣಿ ಪ್ರಚೋದನೆ ಇನ್ನಿತರ ಕುರಿತು ಸದಸ್ಯರ ರಾಷ್ಟ್ರಗಳ ನಾಯಕರನ್ನು ಒತ್ತಾಯಿಸುವ ಸಾಧ್ಯತೆಯಿದೆ.
* ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಹಾಗೂ ಟರ್ಕಿ ದೇಶದ ಅಧ್ಯಕ್ಷರಾದ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಸಹ ಶೃಂಗಸಭೆಗೆ ಹಾಜರಿರಲಿದ್ದಾರೆ.
ಶೃಂಗಸಭೆಗೆ ಗೈರಾಗುವವರ ಮಾಹಿತಿ
* ಶೃಂಗಸಭೆಯಲ್ಲಿ ಗೈರು ಆಗುವವರ ಪೈಕಿ ಗಮನಾರ್ಹ ವ್ಯಕ್ತಿ ಎಂದರೆ ಅದು ಚೀನಾ ಅಧ್ಯಕ್ಷ ಲ್ಲಿ ಕ್ಸಿ ಜಿನ್‌ಪಿಂಗ್. ಚೀನಾ ಅಧ್ಯಕ್ಷರ ಅನುಪಸ್ಥಿತಿಯಲ್ಲಿ, ಸ್ಟೇಟ್ ಕೌನ್ಸಿಲ್‌ನ ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು ದೇಶದ ನಿಯೋಗವನ್ನು ಮುನ್ನಡೆಸಲಿದ್ದಾರೆ. ಚೀನಾ ಗೈರಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
* ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಈ ವರ್ಷ G20 ಶೃಂಗಸಭೆ ಬರಬೇಕಿತ್ತು. ಆದರೆ ರಷ್ಯಾ ಉಕ್ರೇನ್ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ರಷ್ಯಾದ ಅಧ್ಯಕ್ಷರಿಗೆ ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳ ಆರೋಪ ಹೊರಿಸಿ ಬಂಧನ ವಾರಂಟ್ ಹೊರಡಿಸಿದೆ. ಹೀಗಾಗಿ ಅವರು ಗೈರಾಗಲಿದ್ದು, ಅವರ ಪರವಾಗಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹಾಜರಿರಲಿದ್ದಾರೆ.
* ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ಅವರಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಗುರುವಾರ ನಡೆಸಿದ ಆರೋಗ್ಯ ತಪಾಸಣೆಯಲ್ಲಿ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ಗೊತ್ತಾಗಿದೆ. ಈ ಸಂಬಂಧ ಅವರು ಈ ಬಾರಿಗೆ ಜಿ20 ಶೃಂಗಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
* ಮೆಕ್ಸಿಕೋ ದೇಶದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಈ ಸಮ್ಮೇಳನಕ್ಕೆ ಹಾಜರಾಗುವುದಿಲ್ಲ ಎಂದು ಅವರ ಕಚೇರಿ ಮಾಹಿತಿ ನೀಡಿದೆ.
ಶೃಂಗಸಭೆಯಲ್ಲಿ ಪಾಲ್ಗೊಳ್ಳುವ G20 ಅಲ್ಲದ ಸದಸ್ಯರ ಪಟ್ಟಿ
ಜಿ20 ರಾಷ್ಟ್ರಗಳ ಸದಸ್ಯರ ಜೊತೆಗೆ ಬಾಂಗ್ಲಾದೇಶ, ಈಜಿಪ್ಟ್, ಒಮನ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಸಿಂಗಾಪುರ, UAE ಹಾಗೂ ಸ್ಪೇನ್ ದೇಶಗಳ ನಾಯಕರು ಸಹ ಭಾರತದ ಆಹ್ವಾನದ ಮೇರೆಗೆ ನವದೆಹಲಿಗೆ ಆಗಮಿಸಲಿದ್ದಾರೆ.
ಇವರೊಂದಿಗೆ ಶೃಂಗಸಭೆಯಲ್ಲಿ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್‌ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಉನ್ನತ ಆಡಳಿತಗಾರರು ಸಹ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications