G20 Summit: 'ಇಂಡಿಯಾ' ಹೋಗಿ 'ಭಾರತ' ಬಂತು ಡುಂ.. ಡುಂ.. ಡುಂ..!
ಇಂಡಿಯಾ ಹೆಸರು ಬದಲಾಗಿ ಭಾರತ ಆಗುತ್ತೆ ಅಂತಾ ಕೆಲವು ದಿನಗಳಿಂದ ದೊಡ್ಡ ಚರ್ಚೆ ಶುರುವಾಗಿತ್ತು. ಈಗ ಆ ಮಾತು ನಿಜವಾಗುವ ಕಾಲ ಬಂದೇ ಬಿಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಇಂಡಿಯಾ' ಹೆಸರು ಹೋಗಿ ಈಗ 'ಭಾರತ' ಎಂಬ ಹೆಸರು ಬಂದೇಬಿಟ್ಟಿದೆ. ಜಿ20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಎದುರು ಇದ್ದ ಬೋರ್ಡ್ ಮೇಲೆ 'ಇಂಡಿಯಾ' ಬದಲಾಗಿ 'ಭಾರತ' ಎಂಬ ಹೆಸರು ಕಾಣಿಸಿಕೊಂಡಿದೆ.
ಹೀಗೆ ಇಂಡಿಯಾ ಹೆಸರು ನಾಪತ್ತೆಯಾಗಿದ್ದು, ಭಾರತ ಎಂಬ ಹೆಸರು ರಾರಾಜಿಸಿದೆ. ಆದರೆ ಈ ಬಗ್ಗೆ ವಿರೋಧ ಪಕ್ಷಗಳು ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯೆ ತಿಕ್ಕಾಟ ಶುರುವಾಗಿದೆ. ಒಂದ್ಕಡೆ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ಈ ನಡೆ ಕುರಿತು ಆಕ್ರೋಶ ಹೊರಹಾಕಿದ್ದವು. ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ 'ಇಂಡಿಯಾ' ಎಂದು ಹೆಸರು ಇಟ್ಟಿದ್ದಕ್ಕೆ, ಕೇಂದ್ರ ಸರ್ಕಾರ ಹೆಸರು ಬದಲಿಸುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪ ಹಾಗೂ ಪ್ರತ್ಯಾರೋಪದ ಬಿಸಿ ಜೋರಾಗಿರುವ ಸಮಯದಲ್ಲೇ, ಪ್ರಧಾನಿ ಮೋದಿ ಜಿ20 ಶೃಂಗಸಭೆಯಲ್ಲಿ ಭಾಷಣ ಮಾಡುವಾಗ ಅವ್ರ ಎದುರು ಇದ್ದ ಬೋರ್ಡ್‌ನಲ್ಲಿ ಹೆಸರು 'ಭಾರತ' ಎಂದು ರಾರಾಜಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ 'ಭಾರತ' ಸದ್ದು
ಇದೀಗ 'ಇಂಡಿಯಾ' ಹೆಸರು ಹೋಗಿ ಭಾರತಕ್ಕೆ 'ಭಾರತ' ಎಂಬ ಅಧಿಕೃತ ಹೆಸರು ಮತ್ತೆ ಬರಲಿದೆ. ಇದೇ ಸಂಸತ್ ವಿಶೇಷ ಅಧಿವೇಶನದ ವೇಳೆ ಮೋದಿ ಸರ್ಕಾರ ಭಾರತದ ಹೆಸರಿಗೆ ಅಧಿಕೃತ ಮಾನ್ಯತೆ ನೀಡಲು ಮುಂದಾಗುವ ಸಾಧ್ಯತೆ ಇದೆ. ಶತಮಾನಗಳ ಕಾಲ ಭಾರತಕ್ಕೆ ಇದೇ ಹೆಸರು ಇತ್ತು. ಆದರೆ 'ಇಂಡಿಯಾ' ಎಂಬ ಹೆಸರನ್ನ ಬ್ರಿಟಿಷರು ಕೊಟ್ಟಿದ್ದು ಎಂಬ ಆಕ್ರೋಶ ಬಿಜೆಪಿ ನಾಯಕರದ್ದಾಗಿತ್ತು. ಇದೀಗ ಅಧಿಕೃತವಾಗಿ 'ಇಂಡಿಯಾ' ಹೆಸರಿಗೆ ಗುಡ್ ಬೈ ಹೇಳುವ ಸಮಯ ಹತ್ತಿರವಾಗಿದೆ. ಜಿ20 ಶೃಂಗಸಭೆಯಲ್ಲೇ ಪ್ರಧಾನಿ ಮೋದಿ ಅವರು ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ವಿದೇಶಿ ಪ್ರತಿನಿಧಿಗಳಿಗೆ ಭಾರತದ ಮಾಹಿತಿ!
ಇನ್ನು ಪ್ರಧಾನಿ ಮೋದಿ ಅವರ ಎದುರು ಇದ್ದ ಬೋರ್ಡ್ ಮಾತ್ರ ಬದಲಾಗಿಲ್ಲ, ಇದರ ಜೊತೆಗೆ ವಿದೇಶಿ ಪ್ರತಿನಿಧಿಗಳಿಗೆ ನೀಡಿದ್ದ ಜಿ20 ಶೃಂಗಸಭೆಯ ಕಿರುಹೊತ್ತಿಗೆಯಲ್ಲೂ ಭಾರತ್ ಎಂಬ ಪದ ಬಳಸಲಾಗಿದೆ. ಅಲ್ಲದೆ ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಬುಕ್‌ಲೆಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಭಾರತ್ ಎಂಬುದು ದೇಶದ ಅಧಿಕೃತ ಹೆಸರು. ಈ ವಿಚಾರವನ್ನು ಸಂವಿಧಾನದಲ್ಲಿ ಕೂಡ ಉಲ್ಲೇಖಿಸಲಾಗಿದೆ ಎಂದು ತಿಳಿಸಲಾಗಿದೆ. ಹೀಗೆ ಇಡೀ ಜಗತ್ತಿಗೆ ಭಾರತದ ಹೆಸರನ್ನು ಭಾರತ ಎಂದು ತಿಳಿಸುವ ಪ್ರಯತ್ನ ಮಾಡಲಾಗಿದೆ.

1946 ರಿಂದ 48 ರವರೆಗೆ ನಡೆದ ಚರ್ಚೆಗಳಲ್ಲೂ ಬಳಸಲಾಗಿದೆ ಎಂದು ಈ ಕಿರುಹೊತ್ತಿಗೆಯಲ್ಲಿ ಮಾಹಿತಿ ನೀಡಲಾಗಿದೆ. ಈ ಬೆಳವಣಿಗೆ ಗಮನಿಸುತ್ತಿದ್ದರೆ ಸಂಸತ್ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರು ಪೂರ್ತಿ ಹೋಗಿ, 'ಭಾರತ' ಹೆಸರು ರಾರಾಜಿಸುವುದು ಪಕ್ಕಾ ಅಂತಾ ಹೇಳುತ್ತಿದ್ದಾರೆ ಪ್ರಧಾನಿ ಮೋದಿ ಅಭಿಮಾನಿಗಳು. ಆದರೆ ಮತ್ತೊಂದು ಕಡೆ ಇದೇ ವಿಚಾರ ಚರ್ಚೆಗೂ ಕಾರಣವಾಗಿದೆ. ಸಂಸತ್ ವಿಶೇಷ ಅಧಿವೇಶನದ ವೇಳೆ ಇದು ಆಡಳಿತ ಪಕ್ಷ & ವಿಪಕ್ಷಗಳ ನಡುವೆ ಕಿರಿಕ್‌ಗೂ ಕಾರಣವಾಗಬಹುದು.
ಎಲ್ಲೆಲ್ಲೂ 'ಭಾರತ'ದ ಸದ್ದು!
ಇನ್ನು ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ ಜಿ-20 ಶೃಂಗಸಭೆ ಈಗಾಗಲೇ ಶುರುವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿಂದು ಜಿ20 ರಾಷ್ಟ್ರಗಳ ಶೃಂಗಸಭೆ ಆರಂಭವಾಗಿದೆ. ಇಂದು ಬೆಳಗ್ಗೆ 10.30ಕ್ಕೆ ಜಿ20 ಶೃಂಗಸಭೆ ಶುರು ಆಗಿದೆ. ಈಗ ಒನ್ ಅರ್ಥ್ ಎಂಬ ಅಧಿವೇಶನ ನಡೆಯುತ್ತಿದ್ದು, ಎರಡನೇ ಅಧಿವೇಶನ 'ಒಂದು ಕುಟುಂಬ' ಮಧ್ಯಾಹ್ನ 3ಕ್ಕೆ ಆರಂಭವಾಗಲಿದೆ. ಸಂಜೆ 4.45 ರಿಂದ 5.30 ರವರೆಗೂ ಪ್ರಧಾನಿ ಮೋದಿ ಮತ್ತು ವಿವಿಧ ರಾಷ್ಟ್ರಗಳ ಮುಖ್ಯಸ್ಥರ ನಡುವಿನ 'ಪುಲ್-ಸೈಡ್' ಸಭೆ ನಡೆಯಲಿವೆ.
ಇದೆಲ್ಲಾ ಮುಗಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿರುವ ವಿಶೇಷ ಔತಣ ಕೂಟಕ್ಕೆ ಚಾಲನೆ ಸಿಗಲಿದೆ. ಹೀಗೆ ಎಲ್ಲೆಲ್ಲೂ ಇಂಡಿಯಾ ಬದಲಾಗಿ ಭಾರತ ಎಂಬ ಪದ ಬಳಸಲಾಗಿದೆ. ಒಟ್ನಲ್ಲಿ ಎಲ್ಲಾ ಚರ್ಚೆಗಳ ಮಧ್ಯೆ ಇಂಡಿಯಾ ಎಂಬ ಹೆಸರಿಗೆ ಗುಡ್ ಬೈ ಹೇಳಿ, 'ಭಾರತ' ಎಂಬ ಪದಕ್ಕೆ ಮೆರಗು ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಜಿ20 ಶೃಂಗಸಭೆಯಲ್ಲಿ ಪ್ರತಿಯೊಂದು ಕಡೆ ಭಾರತ ಎಂಬ ಪದ ಉಲ್ಲೇಖ ಮಾಡಲಾಗಿದೆ.












Click it and Unblock the Notifications