Mehul Choksi: ವಂಚನೆ ಪ್ರಕರಣ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನ
ನವದೆಹಲಿ, ಏಪ್ರಿಲ್ 14: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. 2018ರಲ್ಲಿ ಮೆಹುಲ್ ಚೋಕ್ಸಿ ಭಾರತ ಬಿಟ್ಟು ಪರಾರಿಯಾಗಿದ್ದ. ಕೆಲವು ದಿನಗಳ ಹಿಂದೆ ಆತ ಬೆಲ್ಜಿಯಂನಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಆತನನ್ನು ಬಂಧಿಸಿ, ಗಡಿಪಾರು ಮಾಡುವಂತೆ ಭಾರತ ಸರ್ಕಾರ ಬೆಲ್ಜಿಯಂಗೆ ಮನವಿ ಮಾಡಿತ್ತು.
65 ವರ್ಷದ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸೋಮವಾರ ಈ ಕುರಿತು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಮೆಹುಲ್ ಚೋಕ್ಸಿ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಇನ್ನೂ ಸಹ ನಡೆಯಬೇಕಿದೆ.

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 13,850 ಕೋಟಿ ರೂ. ಸಾಲವನ್ನು ಪಡೆದಿದ್ದರು. ಅದನ್ನು ಮರು ಪಾವತಿ ಮಾಡದೇ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾಗಿದ್ದರು. ಈ ವಂಚನೆ ಪ್ರಕರಣದ ಕುರಿತು ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆಯನ್ನು ಕೈಗೊಂಡಿವೆ.
ಬಹುಕೋಟಿ ರೂಪಾಯಿ ವಂಚನೆ: ಮೆಹುಲ್ ಚೋಕ್ಸಿ ಬಹುಕೋಟಿ ರೂಪಾಯಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಚೋಕ್ಸಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದವು. ಮುಂಬೈ ಕೋರ್ಟ್ ಚೋಕ್ಸಿ ವಿರುದ್ಧ ಎರಡು ಬಂಧನ ವಾರಂಟ್‌ಗಳನ್ನು ಹೊರಡಿಸಿತ್ತು. ಈ ವಾರೆಂಟ್ ಅನ್ನು ಆಧಾರವಾಗಿಸಿಕೊಂಡು ಬೆಲ್ಜಿಯಂ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಕುರಿತು ಎಎನ್ಐ, ಎಕನಾಮಿಕ್ ಟೈಮ್ಸ್ ವರದಿಗಳನ್ನು ಮಾಡಿವೆ.
ಚೋಕ್ಸಿ ಬಂಧನಕ್ಕಾಗಿ ಮೇ 23, 2018 ಮತ್ತು ಜೂನ್ 15, 2021ರಂದು ಎರಡು ಬಂಧನ ವಾರೆಂಟ್ ಜಾರಿಗೊಳಿಸಲಾಗಿತ್ತು. ಸದ್ಯ ಜೈಲಿನಲ್ಲಿರುವ ಚೋಕ್ಸಿ ಆರೋಗ್ಯ ಸಮಸ್ಯೆ ಮತ್ತು ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಜಾಮೀನು ಮತ್ತು ತಕ್ಷಣ ಬಿಡುಗಡೆಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯೂ ಇದೆ.
ಸದ್ಯ ಲಂಡನ್‌ನಲ್ಲಿರುವ ಮತ್ತು ಭಾರತದ ಹಸ್ತಾಂತರಕ್ಕಾಗಿ ಕಾಯುತ್ತಿರುವ ನಿರವ್ ಮೋದಿ ಮತ್ತು ಚೋಕ್ಸಿ ಪಿಎನ್‌ಬಿಯ ರೂ. 13,850 ಕೋಟಿ ವಂಚನೆ ಪ್ರಕರಣದಲ್ಲಿ ಎರಡು ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಆದ್ದರಿಂದ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಮನವಿಯನ್ನು ಮಾಡಿತ್ತು.
ಚೋಕ್ಸಿ ಮುಂಬೈನ ಬ್ಯಾಂಕ್ ಬ್ರಾಡಿ ಹೌಸ್ ಶಾಖೆಯ ಅಧಿಕಾರಿಗಳಿಗೆ ಲಂಚ ನೀಡಿ, ಲೆಟರ್ಸ್ ಆಫ್ ಅಂಡರಟೇಕಿಂಗ್ ಮತ್ತು ವಿದೇಶಿ ಕ್ರೆಡಿಟ್ ಪತ್ರಗಳನ್ನು ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
2018ರ ಜನವರಿಯಲ್ಲಿ ಪಿಎನ್‌ಬಿಯಲ್ಲಿ ನಡೆದ ವಂಚನೆ ಪ್ರಕರಣ ಬಹಿರಂಗವಾಗಿತ್ತು. ಆದರೆ ಇದಕ್ಕೂ ಕೆಲವು ವಾರಗಳ ಮೊದಲು ಚೋಕ್ಸಿ ಭಾರತ ಬಿಟ್ಟು ಪರಾರಿಯಾಗಿದ್ದ. ಕಳೆದ ತಿಂಗಳು, ಬೆಲ್ಜಿಯಂ ವಿದೇಶಾಂಗ ಸಚಿವಾಲಯ ಎನ್‌ಡಿಟಿವಿಗೆ ಮೆಹುಲ್ ಚೋಕ್ಸಿ ಯುರೋಪಿಯನ್ ದೇಶದಲ್ಲಿ ಇದ್ದಾರೆ ಎಂದು ದೃಢಪಡಿಸಿತ್ತು.
ಈ ಮೊದಲು ಚೋಕ್ಸಿ ಅಂಟಿಗುವಾ ಮತ್ತು ಬರ್ಬುಡಾದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಆರೋಗ್ಯದ ಕಾರಣಕ್ಕೆ ಅವರು ಬೆಲ್ಜಿಯಂಗೆ ಆಗಮಿಸಿದ್ದರು. 2021ರಲ್ಲಿ ಚೋಕ್ಸಿ ಅಂಟಿಗುವಾದಿಂದ ನಾಪತ್ತೆಯಾಗಿದ್ದರು. ಬಳಿಕ ಮತ್ತೊಂದು ದ್ವೀಪ ರಾಷ್ಟ್ರವಾದ ಡೊಮಿನಿಕಾದಲ್ಲಿ ಪತ್ತೆಯಾಗಿದ್ದರು.
2024 ಡಿಸೆಂಬರ್‌ನಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ಮಾತನಾಡಿ ಚೋಕ್ಸಿ ಅವರಂತಹ ಅಪರಾಧಿಗಳ ಸಾಲಗಳನ್ನು ತೀರಿಸಲು ರೂ. 22,280 ಕೋಟಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡು ಮಾರಾಟ ಮಾಡಲಾಗಿದೆ ಎಂದು ಹೇಳಿದ್ದರು.












Click it and Unblock the Notifications