ಪ್ಯಾಕ್ ಆದ ಎಲ್ಲ ಆಹಾರಗಳ ಪರೀಕ್ಷೆ - ಥ್ಯಾಂಕ್ಯು ಮ್ಯಾಗಿ
ನವದೆಹಲಿ, ಜೂ. 16: ನಾವು ಇಷ್ಟು ದಿನ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಎಲ್ಲ ಪ್ಯಾಕೆಟ್ ಆಹಾರಗಳಲ್ಲಿ ಏನೇನು ಅಡಗಿ ಕುಳಿತಿತ್ತೋ ಅವೆಲ್ಲ ಬಹಿರಂಗವಾಗಲು ಕಾಲ ಹತ್ತಿರವಾಗಿತ್ತಿದೆ. ಎಲ್ಲ ಪ್ಯಾಕೆಟ್ ಆಹಾರಗಳ ಗುಣಮಟ್ಟ ಪರಿಶೀಲನೆಗೆ ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ ಮುಂದಾಗಿದೆ. ಇದಕ್ಕೆ ಕಾರಣವಾಗಿದ್ದು ಮ್ಯಾಗಿ. ಹಾಗಾಗಿ ಅದಕ್ಕೊಂದು ಧನ್ಯವಾದ ಹೇಳಿಯೇ ಸುದ್ದಿಯನ್ನು ನೋಡೋಣ
ಮ್ಯಾಗಿ ನ್ಯೂಡಲ್ಸ್ ವಿವಾದದ ಪರಿಣಾಮ ಎಚ್ಚೆತ್ತುಕೊಂಡಿರುವ ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಎಲ್ಲ ಬಗೆಯ ಸಂಸ್ಕರಿತ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗೆ ಸೂಚಿಸಿದೆ.
ಸಂಸ್ಕರಿತ ಆಹಾರ ಪದಾರ್ಥಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಎಲ್ಲ ರಾಜ್ಯಗಳ ಆಹಾರ ಸುರಕ್ಷಾ ಆಯುಕ್ತರಿಗೆ ಎಫ್ಎಸ್‌ಎಸ್‌ಎಐ ತಿಳಿಸಿದೆ.[ಇಷ್ಟಕ್ಕೂ ಮ್ಯಾಗಿ ನಿಜಕ್ಕೂ ಅಷ್ಟೊಂದು ಭಯಂಕರವೇ?]

ಮಾರುಕಟ್ಟೆಯಲ್ಲಿ ಸಾವಿರಾರು ವಿಧದ ಸಂಸ್ಕರಿತ ಆಹಾರ ಪದಾರ್ಥಗಳು ಲಭ್ಯವಿವೆ. ಅವುಗಳಲ್ಲಿ ಕೆಲವನ್ನು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿದ್ದರೆ, ಬಹಳಷ್ಟು ಸಂಸ್ಥೆಗಳು ಪಟ್ಟಿಯಿಂದ ಹೊರಗೆ ಉಳಿದಿವೆ. ಇಂಥವುಗಳ ಗುಣಮಟ್ಟ ಮತ್ತು ಹಾನಿಕಾರಕ ಅಂಶಗಳ ಬಗ್ಗೆ ಯಾವುದೇ ಖಾತ್ರಿ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲವನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಎಫ್ಎಸ್‌ಎಸ್‌ಎಐ ಇತ್ತೀಚೆಗೆ ಇಲ್ಲಿ ನಡೆದ ರಾಜ್ಯಗಳ ಆಹಾರ ಸುರಕ್ಷಾ ಆಯುಕ್ತರ ಸಭೆಯಲ್ಲಿ ಚರ್ಚೆ ಮಾಡಿ ಸೂಚನೆ ನೀಡಿದೆ.
ಯಾವ ಆಹಾರ ಪದಾರ್ಥಗಳನ್ನು ಯಾವ ಬಗೆಯ ಪರೀಕ್ಷೆಗೆ ಒಳಪಡಿಸಬೇಕು ಎಂಬ ಕರಡನ್ನು ಸಿದ್ಧಮಾಡಿಕೊಳ್ಳಲಾಗುವುದು. ಹಾನಿಕಾರಕ ಅಂಶ ಕಂಡುಬಂದರೆ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. [ಇತರೆ ಫಾಸ್ಟ್ ಫುಡ್ ಉತ್ಪನ್ನಕ್ಕೂ ಭೀತಿ]
ಕೇವಲ ನ್ಯೂಡಲ್ಸ್ ಮಾತ್ರವಲ್ಲದ, ಕೇಕ್ ಮತ್ತು ಮಸಾಲಾ ವಸ್ತುಗಳನ್ನು ಈ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಏಪ್ರಿಲ್ 30 ರ ವರೆಗೆ ಕೆಲ ಕಾರಣಗಳಿಂದ ತಿರಸ್ಕರಿಸಲ್ಪಟ್ಟ 500 ಆಹಾರ ಉತ್ಪನ್ನಗಳ ಪಟ್ಟಿಯನ್ನು ಎಲ್ಲ ರಾಜ್ಯಗಳ ಪ್ರಾಧಿಕಾರಕ್ಕೆ ನೀಡಲಾಗಿದ್ದು ಅವುಗಳ ಬಳಕೆ ತಡೆಯಬೇಕು ಎಂದು ಸೂಚನೆ ನೀಡಿದೆ.












Click it and Unblock the Notifications