ತಳ್ಳುಗಾಡಿಯಲ್ಲಿ ಐಸ್ಕ್ರೀಂ ಮಾರುತ್ತಿದ್ದ ಯುವಕ ಈಗ 20,000 ಕೋಟಿ ರೂ. ಕಂಪನಿ ಮಾಲೀಕ! ಸ್ಪೂರ್ತಿದಾಯಕ ಕಥೆ
ಅವರ ಮೊದಲ ಸಂಬಳ ತಿಂಗಳಿಗೆ 65 ರೂಪಾಯಿ. ಅದರಿಂದ ಇಡೀ ತಿಂಗಳ ಖರ್ಚು ಹೋಗಬೇಕು. ಇಂದು ಅದು ಒಂದು ಐಸ್ಕ್ರೀಂ ಕಪ್ ಕೊಳ್ಳಲೂ ಸಾಲದು. ಐದು ದಶಕಗಳ ಹಿಂದೆ, ತಮಿಳುನಾಡಿನ ಒಬ್ಬ ಯುವಕನ ಬದುಕಿನ ಆರಂಭ ಈ 65 ರೂ.ಗಳಿಂದ ಶುರುವಾಯಿತು. ಅವನ ಕೈಯಲ್ಲಿ ದೊಡ್ಡ ಪದವಿ ಇರಲಿಲ್ಲ. ಹಣದ ಬೆಂಬಲ ಇರಲಿಲ್ಲ. ಕುಟುಂಬದ ಹಿನ್ನೆಲೆಯಲ್ಲಿ ಬ್ಯುಸಿನೆಸ್ ಕೂಡ ಇರಲಿಲ್ಲ.
ಆದರೆ ಅವರಲ್ಲಿ ಒಂದು ದೃಢ ನಂಬಿಕೆ ಇತ್ತು. "ನಾನು ಯಾರದ್ದೋ ಕೈಕೆಳಗೆ ಕೆಲಸ ಮಾಡುವುದಲ್ಲ, ಒಂದು ದಿನ ನನ್ನದೇ ಬ್ಯುಸಿನೆಸ್ ಮಾಡಬೇಕು" ಎಂಬ ಅಚಲ ನಿರ್ಣಯ. ಆ ನಿರ್ಣಯವೇ ಆ ಯುವಕನನ್ನು ಮುಂದೆ ಭಾರತದ ದೊಡ್ಡ ಉದ್ಯಮಿಗಳ ಸಾಲಿನಲ್ಲಿ ನಿಲ್ಲಿಸಿತು. ಅವರ ಹೆಸರು ಆರ್.ಜಿ. ಚಂದ್ರಮೋಘನ್.

ನೀವು ಅರುಣ್ ಐಸ್ಕ್ರೀಂ ಸವಿದಿದ್ದೀರಲ್ವಾ? ಆ ಕಂಪನಿಯ ಓನರ್ ಇವರೇ. ಇಂದು ಅವರು ಕಟ್ಟಿರುವ ಹ್ಯಾಟ್ಸನ್ ಅಗ್ರೋ ಪ್ರಾಡಕ್ಟ್ಸ್ (Hatsun Agro Products) ಭಾರತದ ಪ್ರಮುಖ ಖಾಸಗಿ ವಲಯದ ಡೈರಿ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 2026ರ ಜುಲೈ ವೇಳೆಗೆ 20,000 ಕೋಟಿಗೂ ಅಧಿಕವಾಗಿದೆ ಎಂದು ವರದಿಗಳಿವೆ.
ಕುಟುಂಬದ ವ್ಯವಹಾರವೇ ಕೈಕೊಟ್ಟಿತ್ತು
ಚಂದ್ರಮೋಘನ್ ತಮಿಳುನಾಡಿನ ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಅವರ ತಂದೆಗೆ ವ್ಯಾಪಾರ ಮಾಡುವ ಆಸೆ ಇತ್ತು. 1956ರಲ್ಲಿ ಚೆನ್ನೈಗೆ ತೆರಳಿ ಸೆಂಟ್ರಲ್ ರೈಲು ನಿಲ್ದಾಣದ ಸಮೀಪ ದಿನಸಿ ಅಂಗಡಿ ಆರಂಭಿಸಿದರು. ಆದರೆ ವ್ಯಾಪಾರ ಯಾವಾಗಲೂ ನಾವು ಬಯಸಿದಂತೆ ನಡೆಯುವುದಿಲ್ಲವಲ್ಲ. 1968ರ ವೇಳೆಗೆ ಆ ಅಂಗಡಿ ಮುಚ್ಚಬೇಕಾಯಿತು.
ಕುಟುಂಬದ ಕೈಯಲ್ಲಿ ಕಾಸೇನೂ ಉಳಿಯಲಿಲ್ಲ. ಮತ್ತೆ ತಮ್ಮ ಊರಿಗೆ ಹಿಂದಿರುಗಬೇಕಾಯಿತು. ಚಂದ್ರಮೋಘನ್ ಅವರಿಗೆ ಅದು ವ್ಯವಹಾರದ ಮೊದಲ ಕಹಿ ಪಾಠ. ಬ್ಯುಸಿನೆಸ್ ಎಂದರೆ ಕೇವಲ ಹಣ ಗಳಿಸುವುದಲ್ಲ. ಸೋಲನ್ನು ಎದುರಿಸುವ ಧೈರ್ಯವೂ ಬೇಕು ಎಂಬುದು ಮನದಟ್ಟಾಯಿತು. ಅವರಿಗೆ ಕಲಿಕೆಯಲ್ಲಿಯೂ ಮತ್ತೊಂದು ಸೋಲು ಎದುರಾಯಿತು.
ಚಂದ್ರಮೋಘನ್ ಪಾಳಯಂಕೊಟ್ಟೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಕೋರ್ಸ್ಗೆ ಸೇರಿದರು. ಆದರೆ ಗಣಿತದಲ್ಲಿ ಅನುತ್ತೀರ್ಣರಾದರು. ಕಾಲೇಜು ಶಿಕ್ಷಣ ಅವರ ಪಾಲಿಗೆ ಮುಂದುವರಿಯಲಿಲ್ಲ. ಮುಂದೇನು ಎಂಬ ಪ್ರಶ್ನೆ ಅವರ ಸುತ್ತ ಕೋಟೆ ಕಟ್ಟಿತು. ತಂದೆ ಮಗನ ಭವಿಷ್ಯದ ಬಗ್ಗೆ ಚಿಂತಿಸಿದರು. ಕೊನೆಗೆ ಚೆನ್ನೈನಿಂದ ಸುಮಾರು 160 ಕಿ.ಮೀ ದೂರದ ವಿಲುಪುರಂನ ಮರದ ಡಿಪೋವೊಂದರಲ್ಲಿ ಅಪ್ರೆಂಟಿಸ್ ಕೆಲಸ ಕೊಡಿಸಿದರು.
ಸಂಬಳ? ತಿಂಗಳಿಗೆ ಕೇವಲ 65 ರೂ. ಒಂದು ವರ್ಷ ಅಲ್ಲಿ ಕೆಲಸ ಮಾಡಿದರು. ಆರ್ಡರ್ ತೆಗೆದುಕೊಳ್ಳುವುದು, ಗ್ರಾಹಕರೊಂದಿಗೆ ವ್ಯವಹರಿಸುವುದು, ಕೈಕೆಲಸ ಮಾಡುವುದು- ಬ್ಯುಸಿನೆಸ್ ಪಠ್ಯಗಳ ಪುಸ್ತಕದಲ್ಲಿ ಸಿಗದ ಪಾಠಗಳನ್ನು ಅವರು ಅಲ್ಲಿ ಕಲಿತರು.
ಆದರೆ ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ "ಜೀವನಪೂರ್ತಿ 65 ರೂ. ಸಂಬಳಕ್ಕೆ ಕೆಲಸ ಮಾಡಬೇಕೇ?" ಎಂದು ಕೊರೆಯುತ್ತಿತ್ತು. ಉತ್ತರವೂ ಅವರ ಬಳಿಯೇ ಇತ್ತು. ಒಂದು ವರ್ಷದ ನಂತರ ಚೆನ್ನೈಗೆ ಮರಳಿದ ಚಂದ್ರಮೋಘನ್, ಸ್ವಂತ ಉದ್ಯಮ ಆರಂಭಿಸುವ ನಿರ್ಧಾರ ಮಾಡಿದರು. ಆದರೆ ಅವರ ಬಳಿ ಬಂಡವಾಳ ಇರಲಿಲ್ಲ. ಬ್ಯಾಂಕ್ ಸಾಲವಿಲ್ಲ. ದೊಡ್ಡ ಹೂಡಿಕೆದಾರರಿಲ್ಲ. ಬಿಸಿನೆಸ್ ಪ್ಲಾನ್ ಕೂಡ ಇಲ್ಲ. ಇದ್ದದ್ದು ಕುಟುಂಬದ ಬೆಂಬಲ ಮಾತ್ರ.
ಅವರ ತಂದೆ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡರು. ಪೂರ್ವಿಕರ ಜಮೀನನ್ನು 13,000 ರೂಪಾಯಿಗೆ ಮಾರಿದರು. ಇದು ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿ ಮಗನ ಕನಸಿಗೆ ಹಾಕಿದ ಹಣ. ಆ 13,000 ರೂ. ಮುಂದೆ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರದ ಬೀಜವಾಗುತ್ತದೆ ಎಂದು ಆಗ ಯಾರಿಗೂ ಗೊತ್ತಿರಲಿಲ್ಲ.
250 ಚದರ ಅಡಿಯಿಂದ ಆರಂಭವಾದ 'ಅರುಣ್'
1970ರಲ್ಲಿ ಚಂದ್ರಮೋಘನ್ಗೆ ಆಗ ಇನ್ನೂ ಇಪ್ಪತ್ತರ ಹರೆಯ. ಚೆನ್ನೈನ ರಾಯಪುರಂನಲ್ಲಿ ಕೇವಲ 250 ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದರು. ಒಂದು ಸಣ್ಣ ಐಸ್ ತಯಾರಿಕಾ ಯಂತ್ರ ಖರೀದಿಸಿದರು. ನಾಲ್ವರು ಕೆಲಸಗಾರರನ್ನು ನೇಮಿಸಿಕೊಂಡರು. ದಿನಕ್ಕೆ ಸುಮಾರು 10,000 ಐಸ್ಕ್ರೀಂ ತಯಾರಿಸುವ ಸಾಮರ್ಥ್ಯವಿತ್ತು.
ಬ್ರ್ಯಾಂಡ್ಗೆ 'ಅರುಣ್' ಎಂದು ಹೆಸರಿಟ್ಟರು. ಆಗ ಚಂದ್ರಮೋಘನ್ ಸ್ವತಃ ಐಸ್ಕ್ರೀಂ ಮಾರುತ್ತಿದ್ದರು. ಕೆಲವೊಮ್ಮೆ ತಳ್ಳುಗಾಡಿಯಲ್ಲಿ ಐಸ್ಕ್ರೀಂ ತುಂಬಿಕೊಂಡು ಚೆನ್ನೈನ ಬೀದಿಗಳಲ್ಲಿ ಸುತ್ತುತ್ತಿದ್ದರು. ಅವರು ಆಗ ಉಳಿಯಲು ಹೋರಾಡುತ್ತಿದ್ದ ಒಬ್ಬ ಯುವಕ. ಇಂದು ದೊಡ್ಡ ಬ್ರ್ಯಾಂಡ್ಗಳ ಹಿಂದೆ ಇರುವ ಭವ್ಯ ಕಾರ್ಖಾನೆಗಳು, ದೊಡ್ಡ ಜಾಹೀರಾತುಗಳು, ವಿತರಕರ ಜಾಲ ನೋಡಿದಾಗ ಈ ಆರಂಭವನ್ನು ಕಲ್ಪಿಸಿಕೊಳ್ಳುವುದು ಕಷ್ಟ.
ಐಸ್ಕ್ರೀಂ ಮಾರುತ್ತಾ ಭವಿಷ್ಯ ಕಂಡರು
ಮುಂದಿನ ಸುಮಾರು ಹತ್ತು ವರ್ಷ ಚಂದ್ರಮೋಘನ್ ಐಸ್ಕ್ರೀಂ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಆದರೆ ಅವರು ಸದಾ ಐಸ್ಕ್ರೀಂ ಮಾರುವುದರ ಜೊತೆಗೆ ಗ್ರಾಹಕರು ಏನು ಬಯಸುತ್ತಾರೆ? ಯಾವ ವಸ್ತು ಹೆಚ್ಚು ದಿನ ಮಾರಾಟವಾಗುತ್ತದೆ? ಯಾವುದು ಋತುಮಾನಕ್ಕೆ ಮಾತ್ರ ಸೀಮಿತ? ಎಂಬುದನ್ನೆಲ್ಲ ಗಮನಿಸುತ್ತಿದ್ದರು.
ಆಗ ಅವರಿಗೆ ಒಂದು ದೊಡ್ಡ ಅವಕಾಶ ಕಾಣಿಸಿತು- ಹಾಲು. ಐಸ್ಕ್ರೀಂ ಒಂದು ಸೀಸನ್ನಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತದೆ. ಆದರೆ ಹಾಲು? ಅದು ಪ್ರತಿದಿನ ಬೇಕು. ಭಾರತದಂತಹ ದೇಶದಲ್ಲಿ ಹಾಲಿಗೆ ಎಂದಿಗೂ ಬೇಡಿಕೆ ಇರುತ್ತದೆ. ಆದರೆ ಹಾಲಿನ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆ ಆಗ ಇನ್ನೂ ಸಾಕಷ್ಟು ಅಸಂಘಟಿತವಾಗಿತ್ತು. ಚಂದ್ರಮೋಘನ್ ಅಲ್ಲಿ ಅವಕಾಶವನ್ನು ಕಂಡರು.
ಹಾಲು ಸಂಸ್ಕರಣೆಯ ವ್ಯವಹಾರಕ್ಕೆ ಪಾದಾರ್ಪಣೆ
1980ರ ದಶಕದಲ್ಲಿ ಅವರು ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಂಡರು. ಹಾಲು ಸಂಸ್ಕರಣೆಯ ವ್ಯವಹಾರಕ್ಕೆ ಕಾಲಿಟ್ಟರು. ಐಸ್ಕ್ರೀಂ ಕಾರ್ಖಾನೆ ನಿಧಾನವಾಗಿ ಡೈರಿ ಘಟಕವಾಗಿ ಬದಲಾಯಿತು. ಅರುಣ್ ಬ್ರ್ಯಾಂಡ್ನ ಅಡಿಯಲ್ಲಿ ಐಸ್ಕ್ರೀಂ ಮಾತ್ರವಲ್ಲ, ಬೆಣ್ಣೆ, ತುಪ್ಪ, ಮೊಸರು ಸೇರಿದಂತೆ ಹಲವು ಉತ್ಪನ್ನಗಳು ಬಂದವು.
ಇದು ತಕ್ಷಣ ಯಶಸ್ಸು ತಂದುಕೊಡಲಿಲ್ಲ. ಚಂದ್ರಮೋಘನ್ ನಿಧಾನವಾಗಿ ರೈತರೊಂದಿಗೆ ಸಂಬಂಧ ಬೆಳೆಸಿದರು. ಹಾಲಿನ ಪೂರೈಕೆ ವ್ಯವಸ್ಥೆ ಕಟ್ಟಿದರು. ಚಿಲ್ಲರೆ ವ್ಯಾಪಾರಿಗಳೊಂದಿಗೆ ಸಂಪರ್ಕ ಬೆಳೆಸಿದರು. ವಿತರಣೆ ಜಾಲವನ್ನು ವಿಸ್ತರಿಸಿದರು. ಒಂದು ದೊಡ್ಡ ಬ್ಯುಸಿನೆಸ್ ವ್ಯವಸ್ಥೆಯನ್ನೇ ಕಟ್ಟಿದರು.
ಇಂದು ಹ್ಯಾಟ್ಸನ್ ಅಗ್ರೋ ಪ್ರಾಡಕ್ಟ್ಸ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ. 2026ರ ಜುಲೈ ವೇಳೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ ರೂ. 20,000 ಕೋಟಿಗೂ ಅಧಿಕವಾಗಿದೆ ಎಂದು ವರದಿಯಾಗಿದೆ. ಫೋರ್ಬ್ಸ್ ಪ್ರಕಾರ ಚಂದ್ರಮೋಘನ್ ಅವರ ವೈಯಕ್ತಿಕ ಸಂಪತ್ತು ಸುಮಾರು 1.6 ಬಿಲಿಯನ್ ಡಾಲರ್.


Click it and Unblock the Notifications
