Vijay - Trisha: ಅಂದು ಎಂ.ಜಿ.ಆರ್ - ಜಯಲಲಿತಾ ಜೋಡಿ; ಇಂದು ತ್ರಿಷಾ - ವಿಜಯ್ ಜೋಡಿ: ಜಗದೀಶ್ ಕೊಪ್ಪ ಬರಹ
Vijay - Trisha: ಈ ಪಂಚರಾಜ್ಯಗಳ ಚುನಾವಣೆ ಎಲ್ಲರ ನಿರೀಕ್ಷೆ ಮತ್ತು ಸಮೀಕ್ಷೆಗಳನ್ನು ತಲೆಕೆಳಕಾಗಿಸಿದೆ ಈ ಬಗ್ಗೆ ಪತ್ರಕರ್ತ ಜಗದೀಶ್ ಕೊಪ್ಪ ಅವರ ಬರಹ ಇಲ್ಲಿದೆ.
ಈ ಪಂಚರಾಜ್ಯಗಳ ಚುನಾವಣೆ ಎಲ್ಲರ ನಿರೀಕ್ಷೆ ಮತ್ತು ಸಮೀಕ್ಷೆಗಳನ್ನು ತಲೆಕೆಳಕಾಗಿಸಿದೆ. ತಮಿಳುನಾಡು ಫಲಿತಾಂಶ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿದೆ. ನಾನು ಮಧುರೈ ನಗರಕ್ಕೆ ಹೋದಾಗಲೆಲ್ಲಾ ಮೀನಾಕ್ಷಿ ದೇಗುಲಕ್ಕೆ ಸಮೀಪದ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತೇನೆ. ಹೋಟೆಲ್ ಮಾಲೀಕ ಸನ್ ಟಿ.ವಿ. ಚಾನಲ್ ಗಳನ್ನು ಮಧುರೈ ಜಿಲ್ಲೆಯಾದ್ಯಂತ ವಿತರಿಸುವ ವ್ಯಕ್ತಿ. ಹಾಗಾಗಿ ನನಗೆ ತೀರಾ ಪರಿಚಿತ. ಈ ಸ್ಥಳವು ಮಧುರೈ ಸೆಂಟ್ರಿಲ್ ವಿಧಾನ ಸಭೆಗೆ ಸೇರುವ ಕ್ಷೇತ್ರವಾಗಿದೆ..

ಪಳನಿವೇಲು ತ್ಯಾಗರಾಜ್ ಅವರು ಪಿ.ಟಿ.ಆರ್. ಹೆಸರಿನಲ್ಲಿ ಪ್ರಸಿದ್ಧರು ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞರು. ಇವರ ತಾತ ಮತ್ತು ತಂದೆ ಇಬ್ಬರೂ ಮಧುರೈ ನಗರದ ಶ್ರೀಮಂತ ಮನೆತನ ಮತ್ತು ಸ್ಥಳೀಯ ಆಡಳಿತದ ಮೇಲೆ ನಿಯಂತ್ರಣ ಹೊಂದಿದ್ದರು. ಮೀನಾಕ್ಷಿ ದೇವಾಲಯದಲ್ಲಿ ವರ್ಷಕ್ಕೆ ಮೂರು ನಾಲ್ಕು ಬಾರಿ ನಡೆಯುವ ವಿಶೇಷ ಉತ್ಸವಗಳಿಗೆ ಪ್ರಥಮ ಪೂಜೆ ಇವರ ಕುಟುಂಬದಿಂದ ನಡೆಯುತ್ತದೆ. ಕರುಣಾನಿಧಿ ಆಡಳಿತದಲ್ಲಿ ಸಚಿವರಾಗಿದ್ದ ತ್ಯಾಗರಾಜನ್ ತಂದೆಯವರ ನಿಧನಾನಂತರ, ಮೀನಾಕ್ಷಿ ದೇವಾಲಯದ ಪೂಜೆಗಾಗಿ ಅಮೇರಿಕಾದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿ ತ್ಯಾಗರಾಜನ್ ಮಧುರೈಗೆ ವಾಪಸ್ ಬಂದರು. ಇವರ ಪತ್ನಿ ಅಮೆರಿಕಾ ಮೂಲದ ಮಹಿಳೆ ಹಾಗೂ ತ್ಯಾಗರಾಜನ್ ಸಹಪಾಠಿ ಮತ್ತು ಅರ್ಥಶಾಸ್ತ್ರದ ಲ್ಲಿ ಪಿ.ಹೆಚ್.ಡಿ. ಪದವೀಧರೆ.
ತ್ಯಾಗರಾಜನ್ ಸ್ಟಾಲಿನ್ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವರಾಗಿ, ಡಿ.ಎಂ.ಕೆ ಸರ್ಕಾರವನ್ನು ಮುನ್ನಡೆಸಿದವರು. ಇವರ ಕುರಿತು ಮಧುರೈ ನಗರದಲ್ಲಿ ಅಪಾರ ಗೌರವಿದೆ. ಇವರು ಈ ಚುನಾವಣೆಯಲ್ಲಿ ವಿಜಯ್ ಪಕ್ಷದ ಅಭ್ಯರ್ಥಿಗಿಂತ ಹತ್ತೊಂಬತ್ತು ಸಾವಿರ ಹಿಂದೆ ಇದ್ದಾರೆ. ಇವರ ಸೋಲನ್ನು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇತ್ತೀಚಿಗೆ ಇಂಗ್ಲೀಷ್ ಟಿ.ವಿ.ಗೆ ಮಾತನಾಡುತ್ತಾ, ನಟ ವಿಜಯ್ ಘೋಷಣೆ ಮಾಡಿರುವ ಪ್ರಣಾಳಿಕೆಗಳಿಗೆ ವಾರ್ಷಿಕ ಒಂದೂವರೆ ಲಕ್ಷ ಕೋಟಿ ಹಣ ಬೇಕಾಗುತ್ತದೆ ಎಂದು ವಿವರಿಸಿ, ಕರ್ನಾಟಕದ ಗ್ಯಾರಂಟಿ ಯೋಜನೆಗಳಿಗೆ ಅವರತ್ತು ಸಾವಿರ ಕೋಟಿ ಒದಗಿಸಲು ಇಲ್ಲಿನ ಸರ್ಕಾರ ತಿಣಕಾಡುತ್ತಿರುವ ಪರಿ, ಸಾಲ ಮಾಡುತ್ತಿರುವ ವಿಧಾನವನ್ನು ವಿವರಿಸಿದ್ದರು.
ಇನ್ನು ಈ ನಟ ವಿಜಯ್ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಎಂಟು ಗ್ರಾಂ ಚಿನ್ನ, ನಿರುದ್ಯೋಗಿಗಳಿಗೆ ವಾರ್ಷಿಕ ಹದಿನೈದು ಸಾವಿರ, ಮಹಿಳೆಯರಿಗೆ ಮಾಸಿಕ ಎರಡೂವರೆಸಾವಿರ, ಕೃಷಿ ಸಾಲ ಮನ್ನಾ ಹೇಗೆ ನಿರ್ವಹಿಸುತ್ತಾನೆ. ಹಿಂದ ಎಂ.ಜಿ.ಆರ್. ಜಯಲಲಿತಾ ಇದ್ದ ಹಾಗೆ ಈಗ ತಮಿಳುನಾಡಿನಲ್ಲಿ ವಿಜಯ್- ತ್ರಿಶಾ ಜೋಡಿ ಮುನ್ನೆಲೆಗೆ ಬಂದಿದೆ. ಈದಿನ ನೇರವಾಗಿ ತಿರುಪತಿಯಿಂದ ಪೂಜೆ ಮಾಡಿಸಿಕೊಂಡು ವಿಜಯ್ ಮನೆಗೆ ತ್ರಿಶಾ ಮಧ್ಯಾಹ್ನ ಬಂದು ಸಾರ್ವಜನಿಕವಾಗಿ ವಿಜಯ್ ಜೊತೆ ಗುರುತಿಸಿಕೊಂಡಿದ್ದಾಳೆ. ಈ ಸಂಬಂಧದಿಂದಾಗಿ, ವಿಜಯ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು, ಪತ್ನಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ನಾವು, ನಮ್ಮ ಅಪ್ಪಂದಿರು, ಎಂ.ಜಿ.ಆರ್. ಜಯಲಲಿತಾ ಜೋಡಿಯನ್ನು ಸಿನಿಮಾ ಮತ್ತು ರಾಜಕೀಯದಲ್ಲಿ ನೋಡಿದ್ದೆವು. ಈಗ ನಮ್ಮ ಮಕ್ಕಳು, ಮೊಮ್ಮಕ್ಕಳು ಈ ಜೋಡಿಯನ್ನು ನೋಡಬೇಕಾಗಿದೆ.
ಇನ್ನು ಮುಂದೆ ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿದ್ದ ಅರಾಜಕತೆ, ಎನ್ ಕೌಂಟರ್, ಬುಲ್ಡೋಜರ್ ಸಂಸ್ಕೃತಿಯನ್ನು ನಾವು ಪಶ್ಚಿಮ ಬಂಗಾಳದಲ್ಲಿ ನೋಡಬೇಕಿದೆ. ಅದೇ ರೀತಿ ಈ ನಟನ ಹುಚ್ಚಾಟಗಳು ಹೇಗಿರುತ್ತವೆ ಕಾದು ನೋಡಬೇಕಿದೆ.
ಬರಹ: ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತ














Click it and Unblock the Notifications