ಗರೀಬ್ ಕಲ್ಯಾಣ್ ಯೋಜನೆ: 80 ಕೋಟಿ ಜನರಿಗೆ ಇನ್ನೂ 3 ತಿಂಗಳು ಉಚಿತ ಪಡಿತರ ವಿತರಣೆ
ನವದೆಹಲಿ, ಸೆಪ್ಟೆಂಬರ್ 28: ಕೋವಿಡ್ ಅವಧಿಯಲ್ಲಿ ಆರಂಭಿಸಲಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಕೇಂದ್ರ ಸರ್ಕಾರ ಇನ್ನೂ ಮೂರು ತಿಂಗಳವರೆಗೂ ವಿಸ್ತರಿಸಿದೆ. ಈ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ನಿರ್ಧಾರದಿಂದ ದೇಶದ 80 ಕೋಟಿ ಜನರಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತ ಆಹಾರ ಧಾನ್ಯ ಸಿಗಲಿದೆ.
ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಸರ್ಕಾರ ಮುಂದಿನ ಮೂರು ತಿಂಗಳ ಕಾಲ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ದೇಶದ 80 ಕೋಟಿ ಜನರಿಗೆ ಈ ನಿರ್ಧಾರದ ಲಾಭ ಸಿಗಲಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. "ಹಬ್ಬದ ಋತುವಿನ ದೃಷ್ಟಿಯಿಂದ ಮೂರು ತಿಂಗಳ ಕಾಲ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈಗ ಜನರು ಡಿಸೆಂಬರ್ 2022 ರವರೆಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯಲಿದ್ದಾರೆ," ಎಂದು ಅನುರಾಗ್ ಠಾಕೂರ್ ಹೇಳಿದರು.

ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ
ಕೇಂದ್ರ ಸರ್ಕಾರದ ಈ ನಿರ್ಧಾರ ದೇಶದ 80 ಕೋಟಿ ಜನರಿಗೆ ದೊಡ್ಡ ಸುದ್ದಿಯಾಗಿದೆ. ಕೊರೊನಾ ಅವಧಿಯಲ್ಲಿ ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ ಯೋಜನೆಯನ್ನು ಸರ್ಕಾರ ಆರಂಭಿಸಿದ್ದು ಗೊತ್ತೇ ಇದೆ. ಕೋವಿಡ್ ಅವಧಿ ಮುಗಿದ ನಂತರವೂ ಮೂರು ತಿಂಗಳು ಉಚಿತ ಪಡಿತರವನ್ನು ವಿಸ್ತರಿಸಲಾಗುತ್ತಿದೆ. ಈ ಯೋಜನೆಯಡಿ ದೇಶದ 80 ಕೋಟಿ ಬಡವರು ಪ್ರತಿ ತಿಂಗಳು ಗೋಧಿ ಮತ್ತು ಅಕ್ಕಿಯನ್ನು ಹಾಗೂ ಬೆಳೆ ಉಚಿತವಾಗಿ ಪಡೆಯುತ್ತಾರೆ.

ಆಹಾರ ಸಚಿವಾಲಯವು ವಿಸ್ತರಣೆಯನ್ನು ಪ್ರಸ್ತಾಪಿಸಿತ್ತು
ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್, ಆಹಾರ ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದರಲ್ಲಿ ಯೋಜನೆಯನ್ನು ಮುಂದಿನ 3 ತಿಂಗಳು ವಿಸ್ತರಿಸಲು ತಿಳಿಸಲಾಗಿದೆ ಎಂದು ಹೇಳಿದರು. ಈ ಯೋಜನೆಯನ್ನು ಮುಂದುವರಿಸಲು ಸರ್ಕಾರವು ಪ್ರತಿ ವರ್ಷವು $ 18 ಶತ ಕೋಟಿ ಹಣವನ್ನು ಖರ್ಚು ಮಾಡಬೇಕಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು1 ಕೆಜಿ ಬೇಳೆ
ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಗೆ 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಒಂದು ಕೆಜಿ ಬೆಳೆ ಧಾನ್ಯವು ಉಚಿತವಾಗಿ ನೀಡಲಾಗುತ್ತದೆ. ಇದು ಈಗಾಗಲೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುತ್ತಿರುವ ಸಬ್ಸಿಡಿ ಪಡಿತರಕ್ಕೆ ಹೆಚ್ಚುವರಿಯಾಗಿದೆ. ಈ ಯೋಜನೆಯನ್ನು ಕೋವಿಡ್ ಅವಧಿಯಲ್ಲಿ ಪ್ರಾರಂಭಿಸಲಾಯಿತು.

ಮೂರು ನಿಲ್ದಾಣಗಳನ್ನು ನವೀಕರಿಸಲಾಗುವುದು
ಇದಲ್ಲದೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇ 4ರಷ್ಟು ಹೆಚ್ಚಿಸಲು ಮೋದಿ ಸಂಪುಟ ನಿರ್ಧರಿಸಿದೆ. ಇದಲ್ಲದೇ ಮೂರು ರೈಲು ನಿಲ್ದಾಣಗಳ ನವೀಕರಣದ ಬಗ್ಗೆಯೂ ಮಾಹಿತಿ ನೀಡಲಾಯಿತು. ನವದೆಹಲಿ, ಅಹಮದಾಬಾದ್ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ಈ ಮೂರು ನಿಲ್ದಾಣಗಳ ಪುನರಾಭಿವೃದ್ಧಿಗೆ 10 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.












Click it and Unblock the Notifications