ಏಕರೂಪ ನಾಗರಿತ್ವ ಸಂಹಿತೆಯಲ್ಲಿ 'ಹಿಂದೂ ರಾಷ್ಟ್ರ' ಪರಿಕಲ್ಪನೆ ಅಡಗಿದೆ: ಇದು 'ವಂಚನೆ' ಎಂದ ಅಮರ್ತ್ಯ ಸೇನ್
ನವದೆಹಲಿ, ಜುಲೈ 06: ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವ ಪ್ರಯತ್ನಗಳು 'ವಂಚನೆ'ಯಿಂದ ಕೂಡಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಬುಧವಾರ ಹೇಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಕಸರತ್ತಿನಿಂದ ಯಾರಿಗೆ ಲಾಭ ಎಂದು ಅವರು ಪ್ರಶ್ನಿಸಿದ್ದಾರೆ.
ವಿಶ್ವಭಾರತಿಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಕರೂಪ ನಾಗರಿಕತ್ವ ಸಂಹಿತಿ ಜಾರಿಯಿಂದ ಯಾರಿಗೆ ಲಾಭ? ಇದು ಖಂಡಿತವಾಗಿಯೂ 'ಹಿಂದೂ ರಾಷ್ಟ್ರ'ದ ಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ' ಎಂದು ಅವರು ಹೇಳಿದ್ದಾರೆ.

ಇದು ಮೂರ್ಖತನದಿಂದ ಕೂಡಿದ ಕಲ್ಪನೆ
ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗಬಾರದು ಎಂಬ ಹೇಳಿಕೆಗಳನ್ನು ನಾನು ಇಂದು ಪತ್ರಿಕೆಗಳಲ್ಲಿ ನೋಡಿದೆ. ಅಂತಹ ಮೂರ್ಖತನ ಎಲ್ಲಿಂದ ಬಂತು? ನಾವು ಸಾವಿರಾರು ವರ್ಷಗಳಿಂದ ಯುಸಿಸಿ ಇಲ್ಲದೆ ಇದ್ದೇವೆ ಮತ್ತು ಭವಿಷ್ಯದಲ್ಲಿ ಅದು ಇಲ್ಲದೆಯೂ ಇರಬಹುದು ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ತಿಳಿಸಿದ್ದಾರೆ.
'ಹಿಂದೂ ರಾಷ್ಟ್ರ' ಪ್ರಗತಿ ಹೊಂದಲು ಸಾಧ್ಯವಿಲ್ಲ. ಹಿಂದು ರಾಷ್ಟ್ರದ ಮೂಲಕ ನಾವು ಪ್ರಗತಿ ಹೊಂದುತ್ತೇವೆ ಎಂಬ ಪರಿಕಲ್ಪನೆಯೂ ಮೂರ್ಖತನದಿಂದ ಕೂಡಿದೆ. ಇದನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.
'ಖಂಡಿತವಾಗಿಯೂ ಹಿಂದೂ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ' ಎಂದು ಸೇನ್ ಅಭಿಪ್ರಾಯಪಟ್ಟಿದ್ದಾರೆ. ಯುಸಿಸಿಯನ್ನು ಕಾರ್ಯಗತಗೊಳಿಸುವ ಪ್ರಯತ್ನಗಳು ಜನರ ನಡುವೆ ಸಂಘರ್ಷಗಳನ್ನು ಹುಟ್ಟುಹಾಕುತ್ತವೆ. ಸಂಕೀರ್ಣವಾದ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂದು ತಿಳಿಸಿದ್ದಾರೆ.
ಒಬಾಮಾರಿಂದ ನಮಗೆ ಉಪಕಾರ
ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುವ ಮೂಲಕ ಭಾರತವು ಇಬ್ಭಾಗವಾಗಹುದು ಎಂದು ಹೇಳುವ ಮೂಲಕ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ನಮಗೆ ಉಪಕಾರ ಮಾಡಿದ್ದಾರೆ ಎಂದು ಸೇನ್ ತಿಳಿಸಿದ್ದಾರೆ.
ದೇಶದಲ್ಲಿ ವರ್ಗ, ಧರ್ಮ ಮತ್ತು ಲಿಂಗದ ವಿಚಾರಗಳಲ್ಲಿ ಹಲವಾರು ವ್ಯತ್ಯಾಸಗಳಿವೆ ಎಂದು ಹೇಳಿದ್ದಾರೆ.
'ಒಬಾಮಾ ಅದನ್ನು ಎತ್ತಿ ತೋರಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಆದರೆ ನಮ್ಮಲ್ಲಿ ಅನೇಕರು ಅದನ್ನು ಸುಲಭವಾಗಿ ಎತ್ತಿ ತೋರಿಸಬಹುದಿತ್ತು' ಎಂದು ಅವರು ತಿಳಿಸಿದ್ದಾರೆ.
ಏಕರೂಪ ನಾಗರಿಕತ್ವ ಸಂಹಿತೆ ಜಾರಿ ಕುರಿತು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಅದಾದ ಬಳಿಕೆ ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸಿವೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಸಹ ಈ ಸಂಹಿತೆ ಜಾರಿಗೆ ಅಸಮ್ಮತಿ ಸೂಚಿಸಿದೆ. ಆದರೆ, ಬಿಜೆಪಿ ನಾಯಕರ ಆದಷ್ಟು ಬೇಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರವುದಾಗಿ ಹೇಳಿಕೆ ನೀಡಿದ್ದಾರೆ.












Click it and Unblock the Notifications