ವಿಪಕ್ಷಗಳ ನಿರ್ಧಾರಕ್ಕೆ ಸೊಪ್ಪು ಹಾಕದ ದೊಡ್ಡಗೌಡ್ರು; ಹೊಸ ಸಂಸತ್ ಉದ್ಘಾಟನೆಯಲ್ಲಿ ಭಾಗಿಯಾಗಲು ನಿರ್ಧಾರ
ಇದೇ ಮೇ 28, ಭಾನುವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಿರ್ಧರಿಸಿದ್ದಾರೆ.
ಈ ಮೂಲಕ ಸಂಸತ್ ಭವನ ಕಾರ್ಯಕ್ರಮವನ್ನು ಬಹಿಷ್ಕರಿಸಿರುವ ಕಾಂಗ್ರೆಸ್ ಸೇರಿದಂತೆ 19ಕ್ಕೂ ಹೆಚ್ಚು ವಿಪಕ್ಷಗಳ ನಿರ್ಧಾರಕ್ಕೆ ಮಣ್ಣಿನ ಮಗ ಎಚ್.ಡಿ. ದೇವೇಗೌಡರು ಸೊಪ್ಪು ಹಾಕಿಲ್ಲ ಎನ್ನುವುದು ಗೊತ್ತಾಗಿದೆ.

ಇಂದು (ಗುರುವಾರ) ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಎಲ್ಲಾ ಶಾಸಕರ ಅಭಿಪ್ರಾಯವನ್ನು ಆಲಿಸಲಾಯಿತು. ಈ ವೇಳೆ ಶಾಸಕರು ಹಾಗೂ ನಾಯಕರು ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವಂತೆ ಸಲಹೆ ನೀಡಿದ್ದಾರೆ.
ಪಕ್ಷದ ನಾಯಕರ ಸಲಹೆಯ ಹಿನ್ನಲೆಯಲ್ಲಿ ಎಚ್.ಡಿ. ದೇವೇಗೌಡರು ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಮಾಜಿ ಪ್ರಧಾನಿಗಳ ಜೊತೆ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಕೂಡ ಭಾಗಿಯಾಗಲಿದ್ದಾರೆ.
ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನ ಉದ್ಘಾಟನೆ ಮಾಡಲಿದ್ದಾರೆ. ನರೇಂದ್ರ ಮೋದಿ ಉದ್ಘಾಟನೆಗೆ ಆಕ್ಷೇಪ ವ್ಯಕ್ತಪಡಿಸಿರುವ 19 ವಿಪಕ್ಷಗಳು ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕಿತ್ತು ಎಂದು ಒತ್ತಾಯಿಸಿವೆ.

ಸಂಸತ್ ಭವನ ಉದ್ಘಾಟನೆಗೂ ಮುನ್ನ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
ಇದೇ ಮೇ 28ರಂದು ಹೊಸ ಸಂಸತ್ ಭವನ ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎರಡು ದಿನಕ್ಕೂ ಮುನ್ನ (ಗುರುವಾರ) ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಭಾರತದ ರಾಷ್ಟ್ರಪತಿಗಳಿಂದಲೇ ನೂತನ ಸಂಸತ್ ಭವನ ಉದ್ಘಾಟಿಸುವಂತೆ ಲೋಕಸಭೆ ಸಚಿವಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.
ನೂತನ ಸಂಸತ್ ಭವನ ಕಟ್ಟಡವನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಬೇಕು, ಪ್ರಧಾನಮಂತ್ರಿ ಅಲ್ಲ ಎಂದು ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಎನ್‌ಸಿಪಿ, ಎಡಪಕ್ಷಗಳು ಸೇರಿದಂತೆ 19 ವಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ ಬೆನ್ನಲ್ಲೇ ಪಿಐಎಲ್ ಹಾಕಲಾಗಿದೆ.
ರಾಷ್ಟ್ರಪತಿ ಅವರಿಂದ ಉದ್ಘಾಟನೆ ಮಾಡಿಸದೆ, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿರುವುದು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ ಎಂದು ವಕೀಲ ಜಯ ಸುಕಿನ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ಸದನವನ್ನು ಕರೆಯುವ ಮತ್ತು ಮುಂದೂಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುತ್ತದೆ. ಸಂಸತ್ತು ಅಥವಾ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುವುದರಿಂದ ಅವರಿಂದಲೇ ಲೋಕಾರ್ಪಣೆ ಮಾಡಬೇಕೆಂದು ಮನವಿ ಮಾಡಲಾಗಿದೆ.
ರಾಷ್ಟ್ರಪತಿ ಸಂಸತ್ತಿನ ಅವಿಭಾಜ್ಯ ಅಂಗ. ಕಟ್ಟಡದ ಶಿಲಾನ್ಯಾಸ ಸಮಾರಂಭದಿಂದಲೂ ರಾಷ್ಟ್ರಪತಿಯನ್ನು ದೂರವಿಟ್ಟಿದ್ದೇಕೆ? ಇದೀಗ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲ.
ಕೇಂದ್ರ ಸರಕಾರದ ಈ ನಿರ್ಧಾರ ಸರಿಯಲ್ಲ ಎಂದು ದೂರಲಾಗಿದೆ. ಲೋಕಸಭಾ ಸಚಿವಾಲಯ, ಗೃಹ ಸಚಿವಾಲಯ, ಕಾನೂನು ಸಚಿವಾಲಯಗಳನ್ನು ಅರ್ಜಿದಾರರು ಈ ಪ್ರಕರಣದಲ್ಲಿ ಎದುರಾಳಿ ಕಕ್ಷಿದಾರರನ್ನಾಗಿ ಮಾಡಿದ್ದಾರೆ.












Click it and Unblock the Notifications