₹8 ಕೋಟಿ ಸೈಬರ್ ವಂಚನೆ, ಮನನೊಂದು ಗುಂಡು ಹಾರಿಸಿಕೊಂಡ ಮಾಜಿ ಐಪಿಎಸ್ ಅಧಿಕಾರಿ
ಸೈಬರ್ ವಂಚಕರು ನಾನಾ ಮಾರ್ಗಗಳನ್ನು ಅನುಸರಿಸಿ, ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಜಾಲ ಎಲ್ಲೆಡೆ ಸಕ್ರಿಯವಾಗಿದ್ದು, ಮುಗ್ಧ ಜನರ ದಾರಿ ತಪ್ಪಿಸಿ ಹಣ ಲೂಟಿ ಮಾಡುತ್ತಿದ್ದಾರೆ. ಆದರೆ ಇದೇ ಈ ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ್ದ ಪಂಜಾಬ್‌ನ ಮಾಜಿ ಐಪಿಎಸ್ ಅಧಿಕಾರಿ ಅಮರ್ ಸಿಂಗ್ ಚಾಹಲ್ ಪಟಿಯಾಲದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ತನಿಖೆ ವೇಳೆ 25 ಪುಟಗಳ ಡೆತ್‌ನೋಟ್ ಸಿಕ್ಕಿದ್ದು, ಇದರಲ್ಲಿ ಆನ್‌ಲೈನ್ ವಂಚನೆಗೆ ಒಳಗಾದ ಬಗ್ಗೆ ಚಾಹಲ್ ಅವರ ಹತಾಶೆ ಮತ್ತು ಅವಮಾನವನ್ನು ಉಲ್ಲೇಖಿಸಿದ್ದಾರೆ. ಆ ಪತ್ರದಲ್ಲಿರುವಂತೆ ಬರೋಬ್ಬರಿ 8 ಕೋಟಿ ರೂಪಾಯಿ ವಂಚನೆಯಾಗಿದ್ದು, ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿರುವುದಾಗಿ ಬರೆದಿದ್ದಾರೆ. ಕೊನೆಗೆ ಸೈಬರ್ ವಂಚನೆಗೊಳಗಾದ ಅಮರ್ ಸಿಂಗ್ ಚಾಹಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಚಾಹಲ್ ಅವರು ಈ ವಂಚನೆಗೆ ಒಳಗಾಗಿದ್ದಾರೆ. ಒಂದು ಕಂಪನಿಯೊಂದಿಗೆ ಚಾಹಲ್ ಸಂಪರ್ಕದಲ್ಲಿದ್ದರು. ಹಲವಾರು ಜನರು ಇದೇ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಚಾಹಲ್ ಯಾದವ್‌ಗೆ ಬರೆದ ಪತ್ರದಲ್ಲಿ 1 ಕೋಟಿ ರೂಪಾಯಿ ಹೂಡಿಕೆ ಮಾಡಿ, ಉಳಿದ ಹಣವನ್ನು ಸ್ನೇಹಿತರು ಮತ್ತು ಸಂಬಂಧಿಕರಿಂದ ಎರವಲು ಪಡೆದು, ಮೂರು ಬ್ಯಾಂಕ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಕಂಪನಿಗೆ ಪಾವತಿ ಮಾಡಿರುವುದಾಗಿ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಯ ರಿವಾಲ್ವರ್ ಬಳಸಿ ಆತ್ಮಹತ್ಮೆ ಯತ್ನ
ಪಂಜಾಬ್‌ನ ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಆಗಿರುವ ಅಮರ್ ಸಿಂಗ್ ಚಾಹಲ್ ಸೋಮವಾರ ಪಟಿಯಾಲದ ತಮ್ಮ ನಿವಾಸದಲ್ಲಿ ಭದ್ರತಾ ಸಿಬ್ಬಂದಿಯ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ್ದು, ಅವರ ಸ್ಥಿತಿ ಸದ್ಯ ಗಂಭೀರವಾಗಿದೆ. ಪಟಿಯಾಲ ಪೊಲೀಸರ ಪ್ರಕಾರ, ಚಾಹಲ್ ಅವರ ಎದೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ತಂಡಗಳು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಹಲ್ ಅವರ ಮನೆಯಿಂದ ಒಂದು ಡೆತ್‌ನೋಟ್ ವಶಪಡಿಸಿಕೊಂಡಿವೆ ಎಂದು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ಹೇಳಿದ್ದಾರೆ.
ಪ್ರಧಾನಿ ಮೋದಿಗೂ ಪತ್ರ
ಮಾಹಿತಿ ಬಂದ ತಕ್ಷಣವೇ ನಾವು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋದೆವು. ಅವರು ಇನ್ನೂ ಉಸಿರಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ವಿಷಯದ ಬಗ್ಗೆ ಚಾಹಲ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಪತ್ರ ಬರೆದಿದ್ದರು. ಸದ್ಯ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಈಗ ಅವರ ಜೀವ ಉಳಿಸುವತ್ತ ನಮ್ಮ ಗಮನವಿದೆ ಎಂದು ಶರ್ಮಾ ಹೇಳಿದ್ದಾರೆ.
ಚಾಹಲ್ ಅವರು ತಾವು ಕಳೆದುಕೊಂಡ ಕೋಟ್ಯಂತರ ರೂಪಾಯಿ ಹಣವನ್ನು ವಾಪಸ್ ಪಡೆಯುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಸೈಬರ್ ಅಪರಾಧಿಗಳು ಹೂಡಿಕೆಯ ಮೇಲೆ ಹೆಚ್ಚಿನ ಲಾಭದ ಭರವಸೆ ನೀಡಿ ಈ ಮೊತ್ತವನ್ನು ವಂಚಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಾಮಾನ್ಯ ಜನರು ಮಾತ್ರವಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications