IAS ಹುದ್ದೆ ಬಿಟ್ಟು ರಾಜಕೀಯಕ್ಕೆ ಎಂಟ್ರಿಕೊಟ್ಟ ದಿವ್ಯಾ ಮಿತ್ತಲ್: ಮಂಗಳೂರು ಮಾಜಿ ಡಿಸಿ ಸೆಂಥಿಲ್‌ನಂತೆ ಬಿಜೆಪಿಗೆ ಸೆಡ್ಡು

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿನ ಭ್ರಷ್ಟಾಚಾರ ಹಾಗೂ ಸರ್ಕಾರದಲ್ಲಿರುವ ಲೋಪಗಳ ವಿರುದ್ಧ ಸಿಡಿದೆದ್ದಿರುವ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್, ತಮ್ಮ 13 ವರ್ಷಗಳ ಸುದೀರ್ಘ ಆಡಳಿತ ಸೇವೆಗೆ ಗುಡ್ ಬೈ ಹೇಳಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಅವರು, ಇದೀಗ ಯಾವುದೇ ರಾಜಕೀಯ ಪಕ್ಷ ಸೇರದೆ ಸ್ವತಂತ್ರವಾಗಿ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ.

ಮಂಗಳೂರು ಡಿಸಿ ಸಶಿಕಾಂತ್ ಸೆಂಥಿಲ್ ರಾಜೀನಾಮೆ ನೆನಪಿಸಿದ ದಿವ್ಯಾ ನಡೆ

ಐಎಎಸ್ ಅಧಿಕಾರಿಯಾಗಿದ್ದುಕೊಂಡು ರಾಜೀನಾಮೆ ನೀಡಿ ರಾಜಕೀಯಕ್ಕೆ ಬರುತ್ತಿರುವ ದಿವ್ಯಾ ಮಿತ್ತಲ್ ಅವರ ಈ ನಡೆಯು, ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್ ಅವರನ್ನು ನೆನಪಿಸುತ್ತದೆ. ಸೆಂಥಿಲ್ ಅವರು ಪ್ರಜಾಪ್ರಭುತ್ವದ ಮೇಲಿನ ಆತಂಕ ವ್ಯಕ್ತಪಡಿಸಿ ಸೆಪ್ಟೆಂಬರ್ 6, 2019 ರಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ 2020ರಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.

Former IAS Officer Divya Mittal Enters Politics to Fight for Youth Education and Systemic Change

ಹಾಗೆ, 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದಿಂದ ಸ್ಪರ್ಧಿಸಿ, 5.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಸಂಸದರಾಗಿದ್ದಾರೆ.

ಸಶಿಕಾಂತ್ ಸೆಂಥಿಲ್ ಅವರು ತಮ್ಮದೇ ಆದ ರೀತಿಯಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟಕ್ಕಿಳಿದು ಇಂದು ಸಂಸತ್ ಮೆಟ್ಟಿಲೇರಿದ್ದರೆ, ಇತ್ತ ದಿವ್ಯಾ ಮಿತ್ತಲ್ ಅವರು ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷವನ್ನು ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುವಜನತೆ, ಕೃತಕ ಬುದ್ಧಿಮತ್ತೆ ಮತ್ತು ಶಿಕ್ಷಣದ ಕಡೆಗೆ ಗಮನ

ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವುದು ಕೇವಲ ಅಧಿಕಾರದ ಆಸೆಗಾಗಿ ಅಲ್ಲ, ಬದಲಾಗಿ ಯುವಜನತೆಯ ಭವಿಷ್ಯದ ಹಿತದೃಷ್ಟಿಗಾಗಿ ಎಂದು ದಿವ್ಯಾ ಮಿತ್ತಲ್ ಹೇಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ದಿವ್ಯಾ ಮಿತ್ತಲ್, ಇಂದಿನ ಯುವಜನರ ಭವಿಷ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

"ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವು ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯನ್ನ ಸಂಪೂರ್ಣವಾಗಿ ಬದಲಾಯಿಸಲಿದೆ. ನಮ್ಮ ಮಕ್ಕಳು ಬೆಳೆಯುತ್ತಿರುವ ಈ ಜಗತ್ತಿನ ಭವಿಷ್ಯದ ಬಗ್ಗೆ ನಾವು ಯಾಕೆ ಚರ್ಚಿಸುತ್ತಿಲ್ಲ?" ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದಾಗಿ ಯುವಜನರು ಎದುರಿಸುತ್ತಿರುವ ನಿರಾಶೆಯನ್ನ ಅವರು ಒತ್ತಿ ಹೇಳಿದ್ದು, ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಲ್ಲಿ ಓದಿ ಲಂಡನ್‌ನಲ್ಲಿ ಕೆಲಸ ಮಾಡಿದ್ದ ಅವರು, ಶಿಕ್ಷಣದಿಂದ ಮಾತ್ರವೇ ಸಾಮಾನ್ಯ ಕುಟುಂಬದ ಮಕ್ಕಳು ಮುಂದೆ ಬರಲು ಸಾಧ್ಯ ಎಂಬುದನ್ನ ಪ್ರತಿಪಾದಿಸಿದ್ದಾರೆ.

ಮಿರ್ಜಾಪುರದ ಲಹುರಿಯಾದಾ ಘಟನೆ ಹಾಗೂ ಆಡಳಿತದ ವೈಫಲ್ಯ

ತಮ್ಮ ಆಡಳಿತದ ಅನುಭವಗಳನ್ನು ಹಂಚಿಕೊಂಡ ದಿವ್ಯಾ, ಮಿರ್ಜಾಪುರದ ಲಹುರಿಯಾದಾ ಪ್ರದೇಶದ ಶಾಲೆಯೊಂದರ ಉದಾಹರಣೆ ನೀಡಿದರು. ಆ ಗ್ರಾಮದಲ್ಲಿ 5ನೇ ತರಗತಿಯವರೆಗೂ ಮಾತ್ರ ಶಾಲೆಯಿದ್ದ ಕಾರಣ, ಮುಂದಿನ ತರಗತಿಗಳನ್ನು ಆರಂಭಿಸುವಂತೆ ಮಹಿಳೆಯೊಬ್ಬರು ಮನವಿ ಮಾಡಿದ್ದರು. ಕಡತಗಳನ್ನ ಪರಿಶೀಲಿಸಿದಾಗ ಆ ಶಾಲೆ ಮೇಲ್ದರ್ಜೆಗೇರಲು ಅನುಮೋದನೆ ಸಿಕ್ಕಿ ಮೂರು ವರ್ಷಗಳೇ ಕಳೆದಿದ್ದವು. ಆದರೆ, ಕಾಮಗಾರಿ ಮಾತ್ರ ಶುರುವಾಗಿರಲಿಲ್ಲ.

"ಸಮಸ್ಯೆ ಇರುವುದು ಸಂಪನ್ಮೂಲಗಳ ಕೊರತೆಯಿಂದಲ್ಲ, ಬದಲಾಗಿ ಮಾಡಬೇಕು ಎನ್ನುವ ಇಚ್ಛಾಶಕ್ತಿಯ ಕೊರತೆಯಿಂದ" ಎಂದ ದಿವ್ಯಾ, ಕೇವಲ ಒಂದು ಜಮೀನಿನ ಹಕ್ಕು ಪಡೆಯಲು ಜನಸಾಮಾನ್ಯರು ಮೇಲಿನವರ ಶಿಫಾರಸ್ಸಿಗೆ ಕಾಯುವಂತಾಗಿರುವ ವ್ಯವಸ್ಥೆಯನ್ನ ಅವರು ಕಟುವಾಗಿ ಟೀಕಿಸಿದ್ದಾರೆ.

ಇದರ ಜೊತೆಗೆ, ಗ್ರಾಮೀಣ ಭಾಗದ ರಸ್ತೆಗಳ ಕಳಪೆ ಸ್ಥಿತಿ, ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುವುದು ಮತ್ತು ಗುಂಡಿ ಬಿದ್ದ ರಸ್ತೆಗಳಿಂದಾಗುವ ಅಪಘಾತಗಳ ಬಗ್ಗೆಯೂ ಧ್ವನಿ ಎತ್ತಿರುವ ಅವರು, ಇಂತಹ ಸಾವುಗಳನ್ನ ಕೇವಲ ಅಪಘಾತ ಎಂದು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶವನ್ನೇ ತಮ್ಮ 'ಕರ್ಮಭೂಮಿ' ಎಂದು ಕರೆದಿರುವ ಅವರು, ಪ್ರಸ್ತುತ ಯಾವುದೇ ಪಕ್ಷಕ್ಕೆ ಸೇರದೇ ಜನಶಕ್ತಿಯ ಮೂಲಕ ಹೊಸ ರಾಜಕೀಯ ವೇದಿಕೆ ಸೃಷ್ಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಭ್ರಷ್ಟ ವ್ಯವಸ್ಥೆಯ ಕಣ್ಣಿಗೆ ಕಣ್ಣಿಟ್ಟು ನೋಡಿ, ಹಿಂಜರಿಕೆಯಿಲ್ಲದೆ ಗುರಿಯತ್ತ ಹೆಜ್ಜೆ ಇಡುವುದು ಖಂಡಿತ ಕಷ್ಟದ ಹಾದಿ. ಆದರೆ ಇದು ಅಸಾಧ್ಯವೇನಲ್ಲ. ಕಾಲ ಇಂತಹ ನಿರ್ಧಾರಗಳಿಗಾಗಿ ಕಾಯುತ್ತದೆ, ಕಠಿಣ ಪರೀಕ್ಷೆಗಳನ್ನು ನೀಡುತ್ತದೆ ಮತ್ತು ಕೊನೆಗೆ ಕಾಲವೇ ಬೆಂಬಲವಾಗಿ ನಿಲ್ಲುತ್ತದೆ ಎಂಬ ನಂಬಿಕೆ ದಿವ್ಯಾ ಮಿತ್ತಲ್ ಅವರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+