ಕೋಮಾಕ್ಕೆ ಜಾರಿದ ಛತ್ತೀಸ್ ಗಢದ ಮಾಜಿ ಸಿಎಂ ಅಜಿತ್ ಜೋಗಿ
ರಾಯ್ ಪುರ್, ಮೇ 10: ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಕೋಮಾಕ್ಕೆ ಜಾರಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರದಂದು ಹೃದಯಾಘಾತಕ್ಕೊಳಗಾಗಿದ್ದರು ಎಂದು ಅವರ ಪುತ್ರ ಅಮಿತ್ ಜೋಗಿ ತಿಳಿಸಿದ್ದಾರೆ.
ನಂತರ ತೀವ್ರವಾಗಿ ಅಸ್ವಸ್ಥಗೊಂಡ ಅಜಿತ್ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಶ್ರೀ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಮುಂದಿನ 48 ಗಂಟೆಗಳಲ್ಲಿ ಚಿಕಿತ್ಸೆಯ ಮುಂದಿನ ಹಂತದ ಬಗ್ಗೆ ನಿರ್ಧರಿಸಲಾಗುವುದು, ಸದ್ಯಕ್ಕೆ ಯಾವುದೇ ಔಷಧೋಪಚಾರಕ್ಕೆ ಅವರ ದೇಹ ಸ್ಪಂದಿಸುತ್ತಿಲ್ಲ ಎಂದು ವೈದಾಧಿಕಾರಿ ಹೇಳಿದ್ದಾರೆ. 2004ರಲ್ಲಿ ಅಪಘಾತಕ್ಕೊಳಗಾಗಿದ್ದ ಅಜಿತ್ ಅವರು ಗಾಲಿಕುರ್ಚಿಯಲ್ಲಿ ಹೆಚ್ಚು ಕಾಲ ಕಳೆಯಬೇಕಾಗಿತ್ತು.
74ವರ್ಷ ವಯಸ್ಸಿನ ಅಜಿತ್ ಜೋಗಿ ಅವರು ಐಪಿಎಸ್ ಹಾಗೂ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. 1986ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದರು. ಪಕ್ಷದಲ್ಲಿ ಊಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿ, 2016ರಲ್ಲಿ ಕಾಂಗ್ರೆಸ್ ತೊರೆದು, ಹೊಸ ಪಕ್ಷ ಸ್ಥಾಪನೆ ಮಾಡಿದರು. ಮಾಯಾವತಿ ಅವರ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರು. ಆದರೆ, ಕಾಂಗ್ರೆಸ್ಸಿನ ಭೂಪೇಶ್ ಬಘೇಲ್ ಅವರು ಮುಖ್ಯಮಂತ್ರಿಯಾದರು.