Jharkhand Assembly Elections: ಜಾರ್ಖಂಡ್ ಮೊದಲ ಹಂತದ ಚುನಾವಣೆ ನಾಳೆ, ಮಜವಾಗಿದೆ ಚುನಾವಣಾ ಕಣ!
ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ಕಾವು ಜೋರಾಗಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳು ಚುನಾವಣೆಯ ಹೊಸ್ತಿಲಲ್ಲಿ ನಿಂತಿವೆ. ನಾಳೆ (ನವೆಂಬರ್ 13) ಜಾರ್ಖಂಡ್‌ನಲ್ಲಿ ಮೊದಲ ಹಂತದ ವಿಧಾನಸಭೆ ಮತದಾನ ನಡೆಯಲಿದೆ. ಬುಧವಾರ ಜಾರ್ಖಂಡ್ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಉಪ ಚುನಾವಣೆ ಸಹ ನಡೆಯಲಿದೆ.
ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇನ್ನು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಇದೇ 20ಕ್ಕೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ, ಜಾರ್ಖಂಡ್ ಚಿಕ್ಕ ರಾಜ್ಯ. ಇಲ್ಲಿ ಎರಡು ಹಂತದಲ್ಲಿ ಮತದಾನ ನಡೆಯುತ್ತಿದೆ. ಜಾರ್ಖಂಡ್‌ನಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯೂ ಕಡಿಮೆ ಇದೆ. ಆದರೆ, ಈ ರಾಜ್ಯದಲ್ಲಿ ಭದ್ರತೆಯ ದೃಷ್ಟಿಯಿಂದ ಭಾರತೀಯ ಚುನಾವಣಾ ಆಯೋಗವು ಎರಡು ಹಂತದಲ್ಲಿ ಮತದಾನ ಘೋಷಣೆ ಮಾಡಿದೆ. ಇದರ ಭಾಗವಾಗಿ ನಾಳೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.

ಜಾರ್ಖಂಡ್ ವಿಧಾನಸಭೆಯಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳು ಇವೆ. ಇದರಲ್ಲಿ ನವೆಂಬರ್ 13ಕ್ಕೆ ಮೊದಲ ಹಂತದಲ್ಲಿ ಇಲ್ಲಿನ 15 ಜಿಲ್ಲೆಗಳ 43 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ರಾಜ್ಯದಲ್ಲಿ ಸ್ಥಳೀಯ ಪಕ್ಷದ್ದೇ ಕಾರುಬಾರಿದೆ. ಈ ಬಾರಿ ಭ್ರಷ್ಟಾಚಾರ ಆರೋಪ ಹಾಗೂ ಸಣ್ಣ ಮಟ್ಟಿನ ಆಡಳಿತ ವಿರೋಧ ಅಲೆಯೂ ಇದೆ. ಹೀಗಾಗಿ, ಈ ಬಾರಿ ಮತದಾರರ ಒಲವು ಯಾರ ಕಡೆ ಇದೆ ಎನ್ನುವುದು ಇದೇ 23ಕ್ಕೆ ತಿಳಿಯಲಿದೆ.
ಇನ್ನು ಮೊದಲ ಹಂತದಲ್ಲಿ ಜಾರ್ಖಂಡ್‌ನಲ್ಲಿ ಬರೋಬ್ಬರಿ 683 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ. ಇಲ್ಲಿ ಬಿಜೆಪಿ ಅಷ್ಟು ಭದ್ರ ನೆಲೆಯನ್ನು ಕಂಡುಕೊಂಡಿಲ್ಲವಾದರೂ, ಈ ಬಾರಿ ಭಾರೀ ಪೈಪೋಟಿಯನ್ನು ಕೊಟ್ಟಿದೆ. ಆಡಳಿತರೂಢ ಜಾರ್ಖಂಡ್ ಮುಕ್ತಿ ಮೋರ್ಚ್ ಪ್ರಬಲ ಪೈಪೋಟಿ ನೀಡುತ್ತಿದೆ. ಈ ಪಕ್ಷವು ಇಂಡಿಯಾ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದೆ. ಅಲ್ಲದೇ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಜನತಾ ದಳ ಯುನೈಡೆಟ್ ಇದೆ. ಇನ್ನು ಈ ಪಕ್ಷಗಳಿಗೆ ಎನ್‌ಡಿಎ ಒಕ್ಕೂಟ ಭಾರೀ ಪೈಪೋಟಿ ಕೊಟ್ಟಿದೆ.
ಮೈತ್ರಿ: ಕಾಂಗ್ರೆಸ್ ಪಕ್ಷವು ಜಾರ್ಖಂಡ್‌ನಲ್ಲೂ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿದೆ. ಜಾರ್ಖಂಡ್‌ನಲ್ಲಿ ಮೊದಲ ಹಂತದಲ್ಲಿ 43 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚ್ (ಜೆಎಂಎಂ) ಸೀಟು ಹಂಚಿಕೆ ಮಾಡಿಕೊಂಡಿವೆ. ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ 17 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂ 23 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
ಇನ್ನು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಹ ಐದು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಎನ್‌ಡಿಎ ಮೈತ್ರಿಕೂಟವು 43ರಲ್ಲಿ 36 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಜೆಎಸ್‌ಯು ಪಕ್ಷವು ನಾಲ್ಕು, ಜೆಡಿಯು ಎರಡು ಕ್ಷೇತ್ರಗಳಲ್ಲಿ ಹಾಗೂ ಎಲ್‌ಜೆಪಿ (ಆರ್) ಪಕ್ಷವು ಒಂದು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
ಜಾರ್ಖಂಡ್ ಹಾಗೂ ಮಹಾರಾಷ್ಟ್ರ ಎರಡೂ ವಿಧಾನಸಭೆ ಚುನಾವಣೆಗಳಲ್ಲೂ ಈ ಬಾರಿ ಸಣ್ಣ ಪಕ್ಷಗಳು ಭಾರೀ ಪೈಪೋಟಿಯನ್ನು ನೀಡುತ್ತಿವೆ. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಮಾತ್ರವಲ್ಲ ಇದೇ ಮೊದಲ ಬಾರಿ ಸಣ್ಣ ಪಕ್ಷಗಳು ಸಹ ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications