Narendra Modi: ಮೋದಿ 3.0 ಮೊದಲ ಮನ್ ಕಿ ಬಾತ್, ಹೇಳಿದ್ದೇನು?
ನವದೆಹಲಿ, ಜೂನ್ 30: ಲೋಕಸಭೆ ಚುನಾವಣೆ 2024 ಮುಗಿದು ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದ ಮೇಲೆ ಮೊದಲ ಬಾರಿಗೆ ನರೇಂದ್ರ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಭಾನುವಾರ 'ಮನ್ ಕಿ ಬಾತ್' ತಿಂಗಳ ರೆಡಿಯೋ ಕಾರ್ಯಕ್ರಮದ 111ನೇ ಸಂಚಿಕೆ ಪ್ರಸಾರವಾಯಿತು. ಫೆಬ್ರವರಿ 25ರಂದು ಕೊನೆಯ 'ಮನ್ ಕಿ ಬಾತ್' ಪ್ರಸಾರವಾಗಿತ್ತು. ಬಳಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿತ್ತು.

ನರೇಂದ್ರ ಮೋದಿ ಹೇಳಿದ್ದೇನು?
* ಪ್ರಧಾನಿ ನರೇಂದ್ರ ಮೋದಿ ತಮ್ಮ 111ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಹಲವಾರು ವಿಚಾರಗಳ ಕುರಿತು ಮಾತನಾಡಿದರು. 2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಮತದಾನ ಮಾಡಿದ ಜನರಿಗೆ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು. ವಿಶ್ವದ ಅತಿ ದೊಡ್ಡ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣಾ ಆಯೋಗ ಚುನಾವಣೆಯನ್ನು ನಡೆಸಿದ ರೀತಿಯನ್ನು ಮೋದಿ ಪ್ರಶಂಸೆ ಮಾಡಿದರು.
* ಫೆಬ್ರವರಿ ತಿಂಗಳಿನಿಂದ ಇಲ್ಲಿಯ ತನಕ ನಿಮ್ಮ ಜೊತೆ ನಾನು ಸಂಪರ್ಕದಲ್ಲಿ ಇರಲಾಗಲಿಲ್ಲ. ಆದರೆ ಈ ತಿಂಗಳುಗಳಲ್ಲಿ ಅನೇಕ ಜನರು ನನಗೆ ಸಂದೇಶಗಳನ್ನು ಕಳಿಸಿದ್ದೀರಿ. ನಿಮ್ಮ ಪ್ರತಿಕ್ರಿಯೆಗಳನ್ನು ನೋಡಿದಾಗ ಸಂತಸವಾಗುತ್ತದೆ ಎಂದು ಮೋದಿ ಹೇಳಿದರು.
* ಮನ್ ಕಿ ಬಾತ್ ಸಂಚಿಕೆ ಕೆಲವು ತಿಂಗಳು ಸ್ಥಗಿತಗೊಂಡಿತ್ತು. ಆದರೆ ದೇಶದಲ್ಲಿ, ಸಮಾಜದಲ್ಲಿ ಪ್ರತಿದಿನ ಉತ್ತಮ ಕೆಲಸಗಳು ನಡೆಯುತ್ತಲೇ ಇವೆ. ಜೂನ್ 30 ನಮಗೆ ಬಹಳ ಮಹತ್ವದ ದಿನ ಈ ದಿನವನ್ನು ನಮ್ಮ ಬುಡಕಟ್ಟು ಸಹೋದರ ಸಹೋದರಿಯರು 'ಹೂಲ್ ದಿನ'ವಾಗಿ ಆಚರಿಸುತ್ತಾರೆ ಎಂದರು.
* ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಾನು ಎಲ್ಲಾ ದೇಶವಾಸಿಗಳಿಗೆ ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನು ನೆಡಲು ಕರೆ ನೀಡಿದ್ದೆ. ಇದು ತಾಯಿಗೆ ಗೌರವ ನೀಡುವ ಜೊತೆಗೆ ಪರಿಸರ ಸಂರಕ್ಷಣೆಗೆ ಸಹ ಸಹಾಯಕವಾಗಿದೆ ಎಲ್ಲರೂ ಈ ಕಾರ್ಯವನ್ನು ಮಾಡುತ್ತಿದ್ದೀರಿ ಎಂದು ಭಾವಿಸುವೆ ಎಂದು ಮೋದಿ ಹೇಳಿದರು.
* ಪ್ಯಾರಿಸ್ ಒಲಂಪಿಕ್ 2024 ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ. ನಮ್ಮ ಕ್ರೀಡಾಪುಟಗಳನ್ನು ಬೆಂಬಲಿಸಲು ನೀವು ಕಾದು ಕುಳಿತಿದ್ದೀರಿ. ನಾನು ಸಹ ಭಾರತ ತಂಡಕ್ಕೆ ಶುಭ ಕೋರುತ್ತೇನೆ. ಹಿಂದಿನ ಒಲಂಪಿಕ್‌ನಲ್ಲಿ ನಮ್ಮ ಕ್ರೀಡಾಪಟುಗಳ ಪ್ರದರ್ಶನ ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ ಎಂದು ಮೋದಿ ನೆನಪಿಸಿಕೊಂಡರು.
* ನಾವು ಪ್ಯಾರಿಸ್ ಒಲಂಪಿಕ್ ಸಂದರ್ಭದಲ್ಲಿ #cheer4bharat ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಭಾರತ ತಂಡವನ್ನು ಬೆಂಬಲಿಸೋಣ. ತಂಡಗಳು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲಿವೆ ಎಂಬ ದೃಢವಾದ ನಂಬಿಕೆ ಇದೆ ಎಂದು ಮೋದಿ ಹೇಳಿದರು.
* ಈ ತಿಂಗಳು ವಿಶ್ವವು 10ನೇ ಯೋಗ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡೆ. ಕಾಶ್ಮೀರದಲ್ಲಿ ಯುವಕರ ಜತೆಗೆ ಸಹೋದರಿಯರು ಕೂಡ ಯೋಗ ದಿನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಯೋಗ ದಿನಾಚರಣೆ ನಡೆಯುತ್ತಿದ್ದಂತೆ ಹೊಸ ದಾಖಲೆಗಳೂ ಸೃಷ್ಟಿಯಾಗುತ್ತಿವೆ ಎಂದು ಮೋದಿ ಬಣ್ಣಿಸಿದರು.
* ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಅಲ್ ಹನೂಫ್ ಸಾದ್ ಜಿ ಎಂಬ ಸಾಮಾನ್ಯ ಮಹಿಳೆ ಯೋಗ ದಿನವನ್ನು ಮುನ್ನಡೆಸಿದರು. ಸೌದಿ ಮಹಿಳೆಯೊಬ್ಬರು ಯೋಗಾಸನದ ನಿರ್ದೇಶನಗಳನ್ನು ನೀಡಿರುವುದು ಇದೇ ಮೊದಲು. ಈಜಿಪ್ಟ್‌ನಲ್ಲಿ ಈ ಬಾರಿ ಯೋಗ ದಿನದಂದು ಫೋಟೋ ಸ್ಪರ್ಧೆ ಏರ್ಪಡಿಸಲಾಗಿತ್ತು. ನೈಲ್ ನದಿಯ ದಡದಲ್ಲಿ, ಕೆಂಪು ಸಮುದ್ರದ ಕಡಲತೀರಗಳಲ್ಲಿ ಮತ್ತು ಪಿರಮಿಡ್‌ಗಳ ಮುಂದೆ ಲಕ್ಷಾಂತರ ಜನರು ಯೋಗ ಮಾಡುವ ಚಿತ್ರಗಳು ವೈರಲ್ ಆಗಿವೆ ಎಂದರು.
* ಶ್ರೀಲಂಕಾದ ಯುನೆಸ್ಕೋ ಪಾರಂಪರಿಕ ತಾಣವಾದ ಗಾಲೆ ಕೋಟೆಯಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಭೂತಾನ್‌ನ ಥಿಂಪುವಿನಲ್ಲಿಯೂ ಯೋಗ ದಿನಾಚರಣೆಯ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ನನ್ನ ಸ್ನೇಹಿತ ಪ್ರಧಾನಿದಾಶೋ ಶೆರಿಂಗ್ ಟೊಬ್ಗೆ ಕೂಡ ಭಾಗವಹಿಸಿದ್ದರು. ಯೋಗ ದಿನದಂದು ಭಾಗವಹಿಸಿದ ಎಲ್ಲ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.











Click it and Unblock the Notifications