ತರಬೇತಿಗಾಗಿ ಭಾರತೀಯ ಸೇನೆಗೆ ಸೇರಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಬ್ಯಾಚ್‌ನ ಅಗ್ನಿವೀರರು
ನವದೆಹಲಿ, ಡಿ. 26: ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಮೊದಲ ಬ್ಯಾಚ್ 'ಅಗ್ನಿವೀರರು' ಸೋಮವಾರ ತರಬೇತಿಗಾಗಿ ಭಾರತೀಯ ಸೇನೆಗೆ ಸೇರಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೈಹಿಕ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳು, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಸೇರಿದಂತೆ ಕಠಿಣ ಪರೀಕ್ಷೆಗಳ ನಂತರ ಸರಿಸುಮಾರು 200 ಅಭ್ಯರ್ಥಿಗಳನ್ನು ಅಗ್ನಿಪಥ್ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ.
ಆಯ್ಕೆಯಾದವರನ್ನು ಡಿಸೆಂಬರ್ 24, 2022 ರಂದು ಭಾರತೀಯ ಸೇನೆಯ ವಿವಿಧ ರೆಜಿಮೆಂಟ್‌ಗಳ ಸುಮಾರು 30 ತರಬೇತಿ ಕೇಂದ್ರಗಳಿಗೆ ಶ್ರೀನಗರದ ಸೇನಾ ನೇಮಕಾತಿ ಕಚೇರಿಯಿಂದ ಕಳುಹಿಸಲಾಗಿದೆ. ಅಭ್ಯರ್ಥಿಗಳು 25 ಮತ್ತು 30 ಡಿಸೆಂಬರ್ 2022 ರ ನಡುವೆ ತರಬೇತಿಗಾಗಿ ದಾಖಲಾಗಿದ್ದು. ಅವರ ತರಬೇತಿಯು 2023ರ ಜನವರಿ 1 ರಿಂದ ಜಾರಿಗೆ ಬರಲಿದೆ.

ಜೂನ್ 14 ರಂದು ಅಗ್ನಿಪಥ್ ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆಯಡಿ ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಸೈನಿಕರಿಗೆ ನಾಲ್ಕು ವರ್ಷಗಳ ಅವಧಿಗೆ ತರಬೇತಿ ನೀಡಲಾಗುವುದು, ನಂತರ ಅವರಲ್ಲಿ ಶೇ.25ರಷ್ಟು ಸೈನಿಕರನ್ನು ಮಾತ್ರ ಕಾಯಂ ಸೇವೆಗೆ ನಿಯೋಜಿಸಲಾಗುವುದು.
ಈ ನಿಯಮಗಳ ಪ್ರಕಾರ, ಹದಿನೇಳೂವರೆಯಿಂದ 21 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಯುವಜನತೆಯನ್ನು ನಾಲ್ಕು ವರ್ಷಗಳ ಅಧಿಕಾರಾವಧಿಗೆ ಸೇನೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ನಂತರ ಯೋಜನೆಯಲ್ಲಿ ಆಯ್ಕೆಯಾದವರಲ್ಲಿ ಶೇಕಡಾ 25 ರಷ್ಟು ಜನರಿಗೆ ಖಾಯಂ ಉದ್ಯೋಗ ದೊರೆಯಲಿದೆ.

ಉಳಿದ ಶೇಕಡಾ ಎಪ್ಪತೈದು ಪ್ರತಿಶತ ಜನರಿಗೆ 11.71 ಲಕ್ಷ ರೂಪಾಯಿ ಪಿಂಚಣಿ ನೀಡಲಾಗುವುದು. ಇದರಿಂದ ರಕ್ಷಣಾ ಬಜೆಟ್‌ನಲ್ಲಿನ ಪಿಂಚಣಿ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಸರ್ಕಾರ ತಿಳಿಸಿತ್ತು.
ಈ ಯೋಜನೆ ಘೋಷಣೆಯಾದ ಬೆನ್ನಲ್ಲೇ ಅಗ್ನಿಪಥ್ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಹಿಂಸಾತ್ಮಕ ಪ್ರತಿಭಟನೆಗಳಿಗೂ ಸಾಕ್ಷಿಯಾಯಿತು. ಬಳಿಕ ಸರ್ಕಾರವು ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.












Click it and Unblock the Notifications