
ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿದ ನಟ ಪ್ರಭಾಸ್ ಅಭಿಮಾನಿಗಳು; ಬೆಂಕಿ ಅವಘಡ
ಅಮರಾವತಿ, ಅ. 24: ಸೋಮವಾರ ನಟ ಪ್ರಭಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಆದರೆ ಆಂಧ್ರಪ್ರದೇಶದ ಚಿತ್ರಮಂದಿರದೊಳಗೆ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿದೆ.
ಚಿತ್ರಮಂದಿರದೊಳಗೆ ನಟ ಪ್ರಭಾಸ್ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು ಪಟಾಕಿ ಸಿಡಿಸಿದ ಕಾರಣ ಬೆಂಕಿ ಹತ್ತಿಕೊಂಡು ಅವಘಡ ಸಂಭವಿಸಿದೆ. ಪ್ರಭಾಸ್ ಹುಟ್ಟುಹಬ್ಬದ ಕಾರಣ 'ಬಿಲ್ಲಾ' ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಅಭಿಮಾನಿಗಳು ಪಟಾಕಿಗಳನ್ನು ಹಚ್ಚಿದ್ದರಿಂದ ಹಲವಾರು ಸೀಟುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಜನರು ಭಯಭೀತರಾಗಿದ್ದಾರೆ.
'ಆದಿಪುರುಷ': ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್ ಭಯೋತ್ಪಾದಕ ರೀತಿ ಕಾಣುತ್ತಾರೆ- ಬಿಜೆಪಿ ಆಕ್ರೋಶ
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್‌ಗೆ ಇದು 43 ನೇ ಹುಟ್ಟುಹಬ್ಬ. ಹೀಗಾಗಿ ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟರಮಣ ಥಿಯೇಟರ್‌ನಲ್ಲಿ ಬಾಹುಬಲಿ ಮತ್ತು ಸಾಹೋ ಖ್ಯಾತಿಯ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಬಿಲ್ಲಾ ಸಿನಿಮಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಬೆಂಕಿ ಕಾಣಿಸಿಕೊಂಡ ತಕ್ಷಣ ಅಭಿಮಾನಿಗಳ ಗುಂಪು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು. ಕೆಲವರು ಅದನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸೆರೆಹಿಡಿಯುವಲ್ಲಿ ನಿರತರಾಗಿದ್ದರು ಮತ್ತು ಕೆಲವರು ಸುರಕ್ಷಿತವಾಗಿರಲು ಪ್ರಯತ್ನಿಸುತ್ತಿದ್ದರು.
ಘಟನೆಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮತ್ತೊಂದೆಡೆ, ಪ್ರಭಾಸ್ ತಮ್ಮ ಚಿಕ್ಕಪ್ಪ ಕೃಷ್ಣಂ ರಾಜು ಅವರ ನಿಧನದಿಂದಾಗಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.
'ಈಶ್ವರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಕೊಟ್ಟ ಪ್ರಭಾಸ್ ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ. ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ.

ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ರಾಮಾಯಣದ ಕಥೆಯನ್ನು ಹೇಳಲಾಗುತ್ತಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ K' ಹಾಗೂ ಪ್ರಶಾಂತ್ ನೀಲ್ ಸಾರಥ್ಯದ 'ಸಲಾರ್' ಸಿನಿಮಾ ಚಿತ್ರೀಕರಣ ನಡೀತಿದೆ. ಸೆಪ್ಟೆಂಬರ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಸಿನಿಮಾ ತೆರೆಗೆ ಬರಲಿದೆ.