Maha Kumbh Mela 2025: ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ಕುಂಭಮೇಳದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಲ್ಲಿನ ಶಂಕರಾಚಾರ್ಯ ಮಾರ್ಗದ ಸೆಕ್ಟರ್ 18ರ ಯಮುನಾಪುರಂ ವಲಯದಲ್ಲಿ ಈ ದುರಂತ ನಡೆದಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಅಧಿಕಾರಿಗಳು ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಅಗ್ನಿ ಅವಘಡದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಅಂದಾಜು ಮಾಡುತ್ತಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಘಟನಾ ಸ್ಥಳದಿಂದ ಇನ್ನೂ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ಇಲ್ಲಿನ ಹಳೆಯ ಜಿಟಿ ರಸ್ತೆಯ ತುಳಸಿ ಚೌರಾಹಾ ಬಳಿಯ ಕ್ಯಾಂಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅಗ್ನಿಶಾಮಕ ದಳದವರು ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಖಾಕ್ ಚೌಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗೇಶ್ ಚತುರ್ವೇದಿ ಮಾಹಿತಿ ನೀಡಿದ್ದಾರೆ.
ಮಹಾಕುಂಭಮೇಳ ಕ್ಷೇತ್ರದ ಶಂಕರಾಚಾರ್ಯ ಮಾರ್ಗದ ಸೆಕ್ಟರ್ 18ರಲ್ಲಿ ಸಂಭವಿಸಿದ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿಯ ಹಿಂದಿನ ಕಾರಣ ಪತ್ತೆ ಹಚ್ಚಲಾಗುತ್ತಿದೆ. ಎಂದು ಎಸ್‌ಪಿ ಸಿಟಿ ಸರ್ವೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಈ ಅಗ್ನಿ ಅವಘಡದಲ್ಲಿ ಸುಮಾರು 22 ಟೆಂಟ್‌ಗಳು ಸುಟ್ಟು ಕರಕಲಾಗಿವೆ. ಆದರೆ ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಜೀವಹಾನಿ ವರದಿಯಾಗಿಲ್ಲ. ಇಲ್ಲಿನ ಇಸ್ಕಾನ್ ಟೆಂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಏಕಕಾಲದಲ್ಲಿ ಅದು ಹಲವಾರು ಟೆಂಟ್‌ಗಳಿಗೂ ವ್ಯಾಪಿಸಿ ಹೊತ್ತಿ ಉರಿದಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ ವಿವರಿಸಿದ್ದಾರೆ.
ಮಹಾಕುಂಭ ಮೇಳದಲ್ಲಿ ಈ ಹಿಂದೆಯೂ ಅಗ್ನಿ ಅವಘಡ ಸಂಭವಿಸಿತ್ತು. ಸದ್ಯ ಕೋಟ್ಯಂತರ ಮಂದಿ ಕುಂಭಮೇಳ ನಿಮಿತ್ತ ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದಾರೆ. ಸತತ ಎರಡು ಬಾರಿ ಅಗ್ನಿ ಅವಘಡ ಉಂಟಾಗಿ ಅಲ್ಲಿರುವ ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ಬಾರಿ ಯಾವುದೇ ಜೀವಹಾನಿ ಸಂಭವಿಸದಿರುವುದು ಆತಂಕ ದೂರ ಮಾಡಿದೆ. ವಾರದ ಅಂಗ ಅಲ್ಲಿ ಪ್ರಯಾಗರಾಜ್‌ನ ತೆರೆದ ಪ್ರದೇಶದಲ್ಲಿ 15 ಡೇರೆಗಳು ಬೆಂಕಿಗೆ ಆಹುತಿಯಾಗಿವೆ. ಚಟ್ನಾಗ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜನವರಿ 29 ರಂದು ಮಹಾ ಕುಂಭ ಮೇಳ ನಡೆಯುತ್ತಿದ್ದ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಸ್ಫೋಟದಿಂದ ಬೆಂಕಿ ಹೊತ್ತುಕೊಂಡು ಹಲವರು ಗಾಯಗೊಂಡಿದ್ದರು. ಬಳಿಕ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿದಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ. ಈ ಘಟನೆ ಸಂಬಂಧ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಮೂರನೇ ಬಾರಿಗೆ ಮಹಾಕುಂಭ ಮೇಳದಲ್ಲಿ ಅನಾಹುತ ಸಂಭವಿಸಿದೆ.












Click it and Unblock the Notifications