ಲೋಕಸಭೆ ಚುನಾವಣೆ: ನಾಲ್ಕು ಹಂತಗಳಲ್ಲಿ ಮತದಾನದ ಪ್ರಮಾಣ ಎಷ್ಟೆಷ್ಟು?
ನವದೆಹಲಿ, ಮೇ 4: ಲೋಕಸಭೆ ಚುನಾವಣೆಗೆ ಈಗಾಗಲೇ ನಾಲ್ಕು ಹಂತಗಳಲ್ಲಿ ಮತದಾನವಾಗಿದೆ. ಇನ್ನೂ ಮೂರು ಹಂತಗಳು ಬಾಕಿ ಉಳಿದಿದ್ದು, ಈ ನಾಲ್ಲು ಹಂತಗಳಲ್ಲಿ ನಡೆದ ಚುನಾವಣೆಗಳಲ್ಲಿ ಒಟ್ಟು ಎಷ್ಟು ಪ್ರಮಾಣದ ಮತದಾನ ದಾಖಲಾಗಿದೆ ಎಂಬ ನಿಖರ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ.
ಮೊದಲ ಹಂತದಲ್ಲಿ ಅತೀ ಹೆಚ್ಚು ಪ್ರಮಾಣದ ಮತದಾನ ದಾಖಲಾಗಿದ್ದರೆ, ನಾಲ್ಕನೇ ಹಂತದಲ್ಲಿ ಅತೀ ಕಡಿಮೆ ಪ್ರಮಾಣದ ಮತದಾನ ದಾಖಲಾಗಿದೆ.
ಇನ್ನೂ ಮೂರು ಹಂತಗಳಲ್ಲಿ ಮತದಾನ ನಡೆಯಬೇಕಿದ್ದು, ಮೇ 6, 12, 19 ರಂದು ಕ್ರಮವಾಗಿ 5,6, 7ನೇ ಹಂತದ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಬಹುಮತ(272) ಗಳಿಸಲಿದ್ದಾರೆ ಎಂಬ ಚಿತ್ರಣ ಅಂದು ಲಭ್ಯವಾಗಲಿದೆ.

ಹಂತ: 1- 69.5%
ಮೊದಲನೇ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ ಏಪ್ರಿಲ್ 11 ರಂದು ಮತದಾನವಾಗಿತ್ತು. ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಉತ್ತರಾಖಂಡ್, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಮಣಿಪುರ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ನಡೆದ ಚುನಾವಣೆಯಲ್ಲಿ 69.5% ರಷ್ಟು ಮತದಾನ ದಾಖಲಾಗಿತ್ತು.

ಹಂತ: 2 -69.44%
13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 97 ಕ್ಷೇತ್ರಗಳಲ್ಲಿ ಏಪ್ರಿಲ್ 18 ರಂದು ಮತದಾನ ನಡೆದಿತ್ತು. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಛತ್ತೀಸ್ ಗಢ, ಮಣಿಪುರ, ಒಡಿಶಾ, ಪಾಂಡಿಚೇರಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಗಳಲ್ಲಿ ನಡೆದ ಚುನಾವಣೆಯಲ್ಲಿ 69.44% ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.

ಹಂತ: 3- 68.4%
ಮೂರನೇ ಹಂತದಲ್ಲಿ 14 ರಾಜ್ಯಗಳ 115 ಕ್ಷೇತ್ರಗಳಲ್ಲಿ ಏಪ್ರಿಲ್ 23 ರಂದು ಮತದಾನವಾಗಿತ್ತು. ಕರ್ನಾಟಕ, ಗುಜರಾತ್, ಕೇರಳ, ಗೋವಾ, ದಾದ್ರಾ ಮತ್ತು ಹವೇಲಿ ದಮನ್ ಮತ್ತು ದಿಯುಅಸ್ಸಾಂ, ಬಿಹಾರ, ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ 68.4% ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.

ಹಂತ: 4- 65.51%
ನಾಲ್ಕನೇ ಹಂತದ ಚುನಾವಣೆಗೆ 9 ರಾಜ್ಯಗಳ 71 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಗಳಲ್ಲಿ ಏಪ್ರಿಲ್ 29 ರಂದು ಮತದಾನ ನಡೆದಿದ್ದು, 65.51%, ಮತದಾನದ ಪ್ರಮಾಣ ದಾಖಲಾಗಿದೆ.












Click it and Unblock the Notifications