Farmer Property: ಕುಟುಂಬದಲ್ಲಿ ರೈತ ಮೃತಪಟ್ಟರೆ ಆಸ್ತಿ ಮತ್ತು ಸರ್ಕಾರಿ ಸೌಲಭ್ಯಗಳು ಯಾರಿಗೆ ಸಿಗುತ್ತವೆ? ಇಲ್ಲಿದೆ ವಿವರ
Farmer Property: ಸಾಮಾನ್ಯವಾಗಿ ಕುಟುಂಬದ ಹಿರಿಯ ರೈತ ಮೃತಪಟ್ಟರೆ, ಅವರ ಪಾಲಿನ ಆಸ್ತಿ ಹಕ್ಕುಗಳು ಹಾಗೂ ಸರ್ಕಾರಿ ಸೌಲಭ್ಯಗಳು ಯಾರಿಗೆ ಸಿಗುತ್ತವೆ ಎನ್ನುವ ಪ್ರಶ್ನೆಗಳು ಇದ್ದೇ ಇರುತ್ತವೆ. ಹಾಗಾದ್ರೆ ಇದಕ್ಕೆಲ್ಲಾ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕುಟುಂಬದಲ್ಲಿ ಹಿರಿಯ ರೈತ ಮೃತರಾದಾಗ ಜಮೀನಿನ ಹಕ್ಕುಗಳು ಹಾಗೂ ಸರ್ಕಾರಿ ಯೋಜನೆಯ ಹಣ ಯಾರಿಗೆ ತಲುಪುತ್ತದೆ ಎಂಬ ಕುರಿತು ಗೊಂದಲ ಇರುತ್ತದೆ. ಸಾಮಾನ್ಯವಾಗಿ ಆಸ್ತಿಯು ಹಿರಿಯ ಮಗ ಅಥವಾ ಪತ್ನಿಯ ಹೆಸರಿಗೆ ವರ್ಗಾವಣೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಕಾನೂನಾತ್ಮಕವಾಗಿ ಇದಕ್ಕೆ ಸ್ಪಷ್ಟ ನಿಯಮಗಳಿವೆ.

ಯಾರಿಗೆಲ್ಲಾ ಸಮಾನ ಹಕ್ಕಿರುತ್ತದೆ?
ಮೃತ ರೈತನ ಹೆಸರಿನಲ್ಲಿರುವ ಆಸ್ತಿಯ ಹಕ್ಕುಗಳು ಅವರು ಬರೆದಿಟ್ಟ ವಿಲ್ ಮೇಲೇ ನಿರ್ಧಾರವಾಗುತ್ತವೆ. ಒಂದು ವೇಳೆ ರೈತ ಯಾವುದೇ ವಿಲ್ ಬರೆಯದೆ ಮೃತಪಟ್ಟರೆ, 'ಹಿಂದೂ ಉತ್ತರಾಧಿಕಾರ ಕಾಯ್ದೆ'ಯ ಪ್ರಕಾರ ಪ್ರಥಮ ದರ್ಜೆ ವಾರಸುದಾರರಿಗೆ ಆಸ್ತಿ ಸೇರುತ್ತದೆ. ಮೃತನ ಪತ್ನಿ, ಮಕ್ಕಳು (ಗಂಡು ಮತ್ತು ಹೆಣ್ಣು) ಹಾಗೂ ಆತನ ಜೀವಂತ ತಾಯಿಗೆ ಆಸ್ತಿ ಮೇಲೆ ಸಮಾನ ಹಕ್ಕಿರುತ್ತದೆ ಎಂದು ಕನ್ನಡ ನ್ಯೂಸ್ ವರದಿ ಮಾಡಿದೆ.
ಆಸ್ತಿಯ ಸಮಾನ ಹಂಚಿಕೆ
ಆಸ್ತಿಯು ಕೇವಲ ಪತ್ನಿಗಾಗಲಿ ಅಥವಾ ಹಿರಿಯ ಮಗನಿಗಾಗಲಿ ಸಂಪೂರ್ಣವಾಗಿ ಸೇರುವುದಿಲ್ಲ. ಉದಾಹರಣೆಗೆ ಮೃತ ರೈತನಿಗೆ ಪತ್ನಿ, ಒಬ್ಬ ಮಗ, ಒಬ್ಬ ಮಗಳು ಮತ್ತು ತಾಯಿ ಇದ್ದರೆ, ಜಮೀನು ಈ ನಾಲ್ಕೂ ಜನರಿಗೆ ಸಮಾನವಾಗಿ ಭಾಗವಾಗುತ್ತದೆ. 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಷ್ಟೇ ಸಮಾನ ಹಕ್ಕು ಹೆಣ್ಣುಮಕ್ಕಳಿಗೂ ಇರುತ್ತದೆ. ಮಗಳು ಮದುವೆಯಾಗಿದ್ದರೂ ಅಥವಾ ಇಲ್ಲದಿದ್ದರೂ ಆಕೆಗೆ ಹುಟ್ಟಿನಿಂದಲೇ ಆಸ್ತಿಯಲ್ಲಿ ಸಮಾನ ಉತ್ತರಾಧಿಕಾರದ ಹಕ್ಕಿರುತ್ತದೆ.
ಸರ್ಕಾರಿ ಯೋಜನೆಗಳ ಸೌಲಭ್ಯ ವರ್ಗಾವಣೆ ವಿಧಾನ
ಪಿಎಂ-ಕಿಸಾನ್‌ನಂತಹ ಸರ್ಕಾರಿ ಯೋಜನೆಗಳ ಹಣವು ಮೃತನ ಕುಟುಂಬಕ್ಕೆ ಸ್ವಯಂಚಾಲಿತವಾಗಿ ಜಮೆಯಾಗುವುದಿಲ್ಲ. ರೈತ ಮೃತಪಟ್ಟ ತಕ್ಷಣ ಅವರ ಪತ್ನಿ ಅಥವಾ ಮಕ್ಕಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ಜಮೀನಿನ ವಾರಸುದಾರರು ಮೊದಲು ಕಂದಾಯ ಇಲಾಖೆಯಲ್ಲಿ ಪಹಣಿ ಹಾಗೂ ಉತ್ತರಾಧಿಕಾರತ್ವದ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ.
ಭೂಮಿಯ ಹಕ್ಕು ಹೊಸ ವಾರಸುದಾರರ ಹೆಸರಿಗೆ ಬದಲಾದ ನಂತರ, ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮರಣ ಪ್ರಮಾಣಪತ್ರ ಹಾಗೂ ಹೊಸ ಪಹಣಿ ಸಲ್ಲಿಸಬೇಕಾಗುತ್ತದೆ. ನಿಯಮಗಳ ಪ್ರಕಾರ ಹೊಸ ಫಲಾನುಭವಿಯು (ಪತ್ನಿ ಅಥವಾ ಮಕ್ಕಳು) ಸರಿಯಾದ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನೆಗಳನ್ನ ಪಡೆಯಬಹುದು.


Click it and Unblock the Notifications
