ವಿನಾಶಕಾರಿ 'ಫನಿ' ಹಾದಿಯಲ್ಲಿ ಆತಂಕದಲ್ಲಿರುವ ಕೋಟಿಗೂ ಹೆಚ್ಚು ಜೀವಗಳು
ನವದೆಹಲಿ, ಮೇ 01: ವಿನಾಶಕಾರಿ ರೂಪ ತಾಳಿ ರಾಜ್ಯಗಳ ಮೇಲೆ ಧಾವಿಸಿ ಬರುತ್ತಿರುವ ಫನಿ ಚಂಡಮಾರುತ ಭಾರಿ ಹಾನಿಯನ್ನು ಉಂಟು ಮಾಡಲಿದೆ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಫನಿ ಚಂಡಮಾರುತದಿಂದ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ರಾಜ್ಯಗಳು ಹಾನಿಯನ್ನು ಎದುರಿಸಲಿವೆ ಎಂದು ಅಂದಾಜಿಸಲಾಗಿದ್ದು, ಕನಿಷ್ಟ ಒಂದು ಕೋಟಿ ಜನರಿಗೆ ಫನಿ ಒಂದಲ್ಲಾ ಒಂದು ರೀತಿಯ ಹಾನಿಯನ್ನು ಮಾಡಲಿದೆ, ಜೀವ ಹಾನಿ ಸಂಭವಿಸುವ ಸಾರ್ಧಯತೆಯೂ ಇದೆ ಎನ್ನಲಾಗಿದೆ.
200 ಕಿ.ಮೀ ವೇಗದಲ್ಲಿ ಫನಿ ಚಂಡಮಾರುತವು ತೀರದತ್ತ ಧಾವಿಸುತ್ತಿದ್ದು, ಮೇ 3 ರ ವೇಳೆಗೆ ಮತ್ತಷ್ಟು ವೇಗವೃದ್ಧಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚಂಡಮಾರುತದ ತೀವ್ರತೆಯಿಂದಾಗಿ ಈಗಾಗಲೇ ಒರಿಸ್ಸಾ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗಿದೆ. ತೀರದಲ್ಲಿನ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಕೆಲವು ಕಡೆ ನಡೆಯುತ್ತಿದೆ.
ಭಾರಿ ಮಳೆಯಿಂದ ಒರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಭೂ ಕುಸಿತ ಸಹ ಸಂಭವಿಸುವ ಆತಂಕವನ್ನು ಹೊರಹಾಕಲಿದೆ. ಫನಿ ಇಂದಾಗಿ ರಾಜ್ಯಕ್ಕೆ ದೊಡ್ಡ ಹಾನಿಯಿಲ್ಲದಿದ್ದರೂ ಸಹ ತಮಿಳುನಾಡು ಗಡಿ ಭಾಗಗಳಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಫನಿ ಚಂಡಮಾರುತದ ಭೀಕರತೆ ಮನಗಂಡಿರುವ ಕೇಂದ್ರ ಸರ್ಕಾರವು ಮುಂಗಡ ಪರಿಹಾರವನ್ನು ನೀಡಿದ್ದು 1086 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ.












Click it and Unblock the Notifications