ಪ್ರಕಾಶ್ ಸಿಂಗ್ ಬಾದಲ್‌ಗೆ ಕುಟುಂಬಸ್ಥರ ಅಂತಿಮ ನಮನ
ಚಂಡೀಗಢ: ಪಂಜಾಬ್ ಜನ ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ವಿದಾಯ ಹೇಳಿದ್ದಾರೆ. 5 ಬಾರಿ ಪಂಜಾಬ್ ಮುಖ್ಯಮಂತ್ರಿ ಪಟ್ಟಕ್ಕೇರಿದ್ದ ಪ್ರಕಾಶ್ ಸಿಂಗ್ ಬಾದಲ್‌ಗೆ ಕುಟುಂಬ ಸದಸ್ಯರು ನಮಿಸಿದ್ದಾರೆ. ಹಾಗೇ ಪಂಜಾಬ್‌ನಲ್ಲಿ ಇಂದು ಸರ್ಕಾರಿ ರಜೆ ಘೋಷಿಸಲಾಗಿತ್ತು. ಶಿರೋಮಣಿ ಅಕಾಲಿದಳ ಕಚೇರಿಯಲ್ಲಿ ದುಖಃ ಮಡುಗಟ್ಟಿತ್ತು, ಬಾದಲ್ ಕುಟುಂಬಸ್ಥರು ಕಣ್ಣೀರು ಹಾಕಿ ಬಾದಲ್‌ರನ್ನ ಬೀಳ್ಕೊಟ್ಟರು.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು. ಪ್ರಧಾನಿ ಮೋದಿ ಜೊತೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಹರಿಯಾಣದ ಮಾಜಿ ಸಿಎಂ ಒ.ಪಿ. ಚೌತಾಲಾ, ಚರಣ್‌ಜಿತ್ ಸಿಂಗ್ ಚನ್ನಿ, ಪಟಿಯಾಲ ಸಂಸದ ಪರ್ಣೀತ್ ಕೌರ್, ಬಾದಲ್ ಅವರ ಅಳಿಯ ಆದೇಶ್ ಪರ್ತಾಪ್ ಸಿಂಗ್ ಕೈರೋನ್, ಕೇಂದ್ರ ಸಚಿವ ಸೋಮ್ ಪ್ರಕಾಶ್ ಬಲ್‌ಬೀರ್ ಸಿಂಗ್ ಸಿಧು ಮುಂತಾದವರು ಅಂತಿಮ ನಮನ ಸಲ್ಲಿಸಿದ್ದರು.

ಅಮೃತಸರದಲ್ಲಿ ಬಾದಲ್ ಅಂತ್ಯಸಂಸ್ಕಾರ
ಪ್ರಕಾಶ್ ಸಿಂಗ್ ಬಾದಲ್ ಅವರ ಅಂತ್ಯಸಂಸ್ಕಾರವನ್ನು ಅಮೃತಸರದಲ್ಲಿ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾದಲ್ ಅವರ ಪಾರ್ಥಿವ ಶರಿರವನ್ನ ಸಾರ್ವಜನಿಕ ದರ್ಶನಕ್ಕೆ ಇರಿಸಿದ್ದ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿದ್ರು. ಹೀಗಾಗಿ ಅಂತ್ಯಸಂಸ್ಕಾರ ಸಮಯ ಒಂದಷ್ಟು ತಡವಾಗಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಭದ್ರತೆ ಹೆಚ್ಚಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನ ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.
ಆಸ್ಪತ್ರೆಯಲ್ಲಿ ಅಸುನೀಗಿದ್ದ ಬಾದಲ್
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಏಪ್ರಿಲ್ 21 ರಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದರು. ಈ ಸುದ್ದಿ ದೇಶಾದ್ಯಂತ ಬರಸಿಡಿಲಿನಂತೆ ಅಪ್ಪಳಿಸಿತ್ತು. ಬಾದಲ್ ನಿಧನದ ಹಿನ್ನೆಲೆ ಕೇಂದ್ರ ಸರ್ಕಾರವು ಭಾರತದಾದ್ಯಂತ 2 ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ. ಹಾಗೇ ಮತ್ತೊಂದೆಡೆ ನಿನ್ನೆ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದ್ದರು.

ಪ್ರಧಾನಿ ಮೋದಿ, ಬಾದಲ್ ಸ್ನೇಹ
ಪ್ರಧಾನಿ ಮೋದಿ, ಪ್ರಕಾಶ್ ಸಿಂಗ್ ಬಾದಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡುವೆ ಉತ್ತಮ ಸ್ನೇಹವಿತ್ತು. ಈ ಮೂವರು ನಾಯಕರು ಒಟ್ಟಾಗಿಯೇ ಹಲವು ನಿರ್ಣಯ ಕೈಗೊಂಡಿದ್ದರು. ಅದರಲ್ಲೂ ಪ್ರಕಾಶ್ ಸಿಂಗ್ ಬಾದಲ್ ಅವರ ರಾಜಕೀಯ ಸಲಹೆಗಳು ಎಷ್ಟೋ ಬಾರಿ ಸಮ್ಮಿಶ್ರ ಸರ್ಕಾರಕ್ಕೆ ನೆರವಾಗಿದ್ದವು. ಹೀಗೆ ಹಲವು ದಶಕಗಳ ಕಾಲ ಇವರ ನಡುವೆ ಉತ್ತಮ ಒಡನಾಟವಿತ್ತು. ಹೀಗಾಗಿ ತಮ್ಮ ಅತ್ಯಾಪ್ತ ಹಿರಿಯ ನಾಯಕನಿಗೆ ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸಿದ್ದರು.
20ನೇ ವಯಸ್ಸಿಗೆ ರಾಜಕೀಯ, 5 ಬಾರಿ ಸಿಎಂ
ಒಂದಲ್ಲ ಎರಡಲ್ಲ ಒಟ್ಟು 5 ಬಾರಿ ಪಂಜಾಬ್‌ನ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು ಪ್ರಕಾಶ್ ಸಿಂಗ್ ಬಾದಲ್. 20ನೇ ವಯಸ್ಸಿಗೆ ಬಾದಲ್ ಗ್ರಾಮದ ಸರಪಂಚರಾಗಿ ನೇಮಕವಾದ ನಂತರ ಕೆಲವೇ ವರ್ಷದಲ್ಲಿ ಲಂಬಿ ಗ್ರಾಮದ ಬ್ಲಾಕ್ ಕಮಿಟಿ ಚೇರ್‌ಮನ್ ಆಗಿ ಕೂಡ ಆಯ್ಕೆಯಾಗಿದ್ದರು. ಇಷ್ಟೆಲ್ಲದರ ನಡುವೆ ಪಂಜಾಬ್ ವಿಧಾನಸಭೆ ಪ್ರವೇಶಕ್ಕೂ ಅವರಿಗೆ ಅವಕಾಶ ಒದಗಿ ಬಂದಿತ್ತು. 1957ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1969ರಲ್ಲಿ ಮರು ಆಯ್ಕೆಯಾಗಿ, ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಇದೇ ಮುಂದೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಹಾಯವಾಗಿತ್ತು.
ರಾಜಕೀಯ ಸೇವೆಯ ಇತಿಹಾಸ
ಸಮಾಜ-ಕಲ್ಯಾಣ, ಪಂಚಾಯ್ತಿರಾಜ್, ಪಶುಸಂಗೋಪನೆ ಸೇರಿದಂತೆ ಹಲವು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ಅನುಭವ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಅಪಾರ ಜ್ಞಾನ ತಂದುಕೊಟ್ಟಿತ್ತು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೃಷಿ ಮತ್ತು ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಅನುಭವ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಇತ್ತು. ಮುಂದೆ 1970 ರಿಂದ 71, 1977 ರಿಂದ 80, 1997 ರಿಂದ 2002 ಹಾಗೂ 2007 ರಿಂದ 2012 ಮತ್ತು 2012 ರಿಂದ 2017 ರವರೆಗೆ 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಹೀಗೆ ಪಂಜಾಬ್ ಇತಿಹಾಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯಲಿದೆ.
ಶಾಸಕರಾಗಿ ದಾಖಲೆ ನಿರ್ಮಾಣ
ಈಗೆಲ್ಲಾ ಒಂದೆರಡು ಬಾರಿ ಶಾಸಕರಾದರೆ ಸಾಕು ಸಚಿವ ಸ್ಥಾನಕ್ಕೆ ಫೈಟಿಂಗ್ ಶುರುವಾಗುತ್ತದೆ. ಆದರೆ ಪ್ರಕಾಶ್ ಸಿಂಗ್ ಬಾದಲ್ 10 ಬಾರಿ ಶಾಸಕರಾಗಿ ಸಾಧನೆ ಮಾಡಿದ್ದರು. 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಜೊತೆಗೆ 3 ಬಾರಿ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. 1972, 1980 ಮತ್ತು 2002ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು ಪ್ರಕಾಶ್ ಸಿಂಗ್ ಬಾದಲ್. 1995ರಿಂದ 2008ರವರೆಗೆ ಶಿರೋಮಣಿ ಅಕಾಲಿದಳದ ಅಧ್ಯಕ್ಷರೂ ಆಗಿ ಬಾದಲ್ ಅವರಿಗೆ ಕಾರ್ಯನಿರ್ವಹಿಸಿದ ಅನುಭವ ಇತ್ತು.












Click it and Unblock the Notifications