EPFOನಲ್ಲಿದೆ ಉಚಿತ ಜೀವವಿಮೆ: ಉದ್ಯೋಗಿಗಳಿಗೆ ₹7 ಲಕ್ಷದವರೆಗೆ ಸಿಗಲಿದೆ ಕ್ಲೈಮ್!
ಅನೇಕ ಸಂಬಳ ಪಡೆಯುವ ಉದ್ಯೋಗಿಗಳಿಗೆ ತಾವೊಂದು ಉಚಿತ ಜೀವವಿಮಾ ಯೋಜನೆಯಡಿ ಅಟೋಮ್ಯಾಟಿಕ್ ಆಗಿ ನೋಂದಾಯಿಸಲ್ಪಟ್ಟಿದ್ದೇವೆ ಮತ್ತು ಅದಕ್ಕಾಗಿ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಎಂಬ ವಿಷಯ ತಿಳಿದಿಲ್ಲ. ಇತ್ತೀಚೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಜಾಗೃತಿ ಅಭಿಯಾನದ ಭಾಗವಾಗಿ, ಇಪಿಎಫ್ (EPF) ಸದಸ್ಯರೆಲ್ಲರೂ 'ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶೂರೆನ್ಸ್' (EDLI) ಯೋಜನೆಯಡಿ ವಿಮಾ ರಕ್ಷಣೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದೆ.
ಇದು ಹೇಗೆ ಕೆಲಸ ಮಾಡುತ್ತೆ? ಉದ್ಯೋಗಿಯು ಸೇವೆಯಲ್ಲಿದ್ದಾಗ ಮರಣ ಹೊಂದಿದರೆ, ಅವರ ನಾಮಿನಿ (Nominee) ಅಥವಾ ಅರ್ಹ ಕುಟುಂಬದ ಸದಸ್ಯರಿಗೆ ಈ ಆರ್ಥಿಕ ನೆರವು ಸಿಗುತ್ತದೆ. ಇದರ ಸಂಪೂರ್ಣ ವೆಚ್ಚವನ್ನು ಮಾಲೀಕರೇ (Employers) ಭರಿಸುತ್ತಾರೆ.

ಏನಿದು EDLI ಯೋಜನೆ?
ಇದು ಇಪಿಎಫ್ (EPF) ಸದಸ್ಯತ್ವದೊಂದಿಗೆ ಬರುವ ಒಂದು ಶಾಸನಬದ್ಧ ಜೀವವಿಮಾ ಸೌಲಭ್ಯ. ಇಪಿಎಫ್ ವ್ಯಾಪ್ತಿಗೆ ಒಳಪಡುವ ಉದ್ಯೋಗಿಯು ಕೆಲಸದಲ್ಲಿರುವ ಅವಧಿಯಲ್ಲಿ ಮರಣ ಹೊಂದಿದರೆ, ಅವರ ಕುಟುಂಬಕ್ಕೆ ಈ ಯೋಜನೆಯಡಿ ಒಟ್ಟು ಮೊತ್ತದ ಹಣವನ್ನು ನೀಡಲಾಗುತ್ತದೆ. ಒಂದು ವೇಳೆ ಉದ್ಯೋಗಿಯು ಕನಿಷ್ಠ ಒಂದು ವರ್ಷದ ನಿರಂತರ ಸೇವೆಯನ್ನು ಪೂರ್ಣಗೊಳಿಸುವ ಮುನ್ನವೇ ಮರಣ ಹೊಂದಿದರೂ ಸಹ, ಕನಿಷ್ಠ ₹50,000 ಆರ್ಥಿಕ ಪ್ರಯೋಜನ ಸಿಗುತ್ತದೆ.
ಅರ್ಹತೆಯ ಮಾನದಂಡಗಳೇನು?
ಈ ಯೋಜನೆಯ ಲಾಭ ಪಡೆಯಲು ಉದ್ಯೋಗಿಯು ಇಪಿಎಫ್ (EPF) ಸದಸ್ಯರಾಗಿರಬೇಕು ಎಂಬುದು ಮುಖ್ಯ ನಿಯಮವಾಗಿದೆ. ಉದ್ಯೋಗಿ ಮರಣ ಹೊಂದಿದಲ್ಲಿ, ಅವರ ನಾಮಿನಿ ಅಥವಾ ಕಾನೂನುಬದ್ಧ ವಾರಸುದಾರರು ಈ ವಿಮೆಯನ್ನು ಕ್ಲೈಮ್ ಮಾಡಬಹುದು. ವಿನಾಯಿತಿ ಪಡೆದ ಸಂಸ್ಥೆಗಳ (Exempted Establishments) ವಿಷಯದಲ್ಲಿ, ಮಾಲೀಕರು ಒಪ್ಪಂದ ಮಾಡಿಕೊಂಡಿರುವ ವಿಮಾ ಕಂಪನಿಯು ಈ ಹಣವನ್ನು ಪಾವತಿಸುತ್ತದೆ. ಆದರೆ ಈ ಮೊತ್ತವು EDLI ಯೋಜನೆಗಿಂತ ಕಡಿಮೆ ಇರಬಾರದು.
EDLI ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
ಸ್ವಯಂಚಾಲಿತ ನೋಂದಣಿ: ಇಪಿಎಫ್ ವ್ಯಾಪ್ತಿಗೆ ಬರುವ ಎಲ್ಲಾ ಉದ್ಯೋಗಿಗಳು ಈ ಯೋಜನೆಗೆ ಸ್ವಯಂಚಾಲಿತವಾಗಿ ಸೇರ್ಪಡೆಗೊಳ್ಳುತ್ತಾರೆ. ಇದಕ್ಕೆ ಯಾವುದೇ ಪ್ರತ್ಯೇಕ ಅರ್ಜಿ ಬೇಕಾಗಿಲ್ಲ.
ವಿಮಾ ಮೊತ್ತದ ಮಿತಿ: ಉದ್ಯೋಗಿಯ ಮರಣದ ಸಂದರ್ಭದಲ್ಲಿ ನಾಮಿನಿಗೆ ಕನಿಷ್ಠ ₹2.5 ಲಕ್ಷ ಮತ್ತು ಗರಿಷ್ಠ ₹7 ಲಕ್ಷದವರೆಗೆ ವಿಮಾ ಮೊತ್ತ ಸಿಗುತ್ತದೆ.
ಉದ್ಯೋಗಿಗೆ ಉಚಿತ: ಉದ್ಯೋಗಿಗಳು ಈ ವಿಮೆಗಾಗಿ ಯಾವುದೇ ಹೆಚ್ಚುವರಿ ಕೊಡುಗೆ ಅಥವಾ ಪ್ರೀಮಿಯಂ ಪಾವತಿಸುವಂತಿಲ್ಲ.
ಮಾಲೀಕರ ಧನಸಹಾಯ: ಮಾಲೀಕರೇ ಉದ್ಯೋಗಿಯ ಮೂಲ ವೇತನ ಮತ್ತು ತುಟ್ಟಿಭತ್ಯೆಯ (Basic + DA) ಶೇಕಡಾ 0.5 ರಷ್ಟು ಹಣವನ್ನು EDLI ನಿಧಿಗೆ ನೀಡುತ್ತಾರೆ.
ವಿದೇಶಿ ನಿಯೋಜನೆ: ಇಪಿಎಫ್ ನಿಯಮಗಳ ಪ್ರಕಾರ, ಉದ್ಯೋಗಿಯು ವಿದೇಶದಲ್ಲಿ ಕೆಲಸ ಮಾಡುವಾಗ ಮರಣ ಹೊಂದಿದರೂ ಈ ಸೌಲಭ್ಯ ಸಿಗಬಹುದು.
ಪರ್ಯಾಯ ವಿಮೆ: ಮಾಲೀಕರು EDLI ಗಿಂತ ಉತ್ತಮವಾದ ಅಥವಾ ಸಮಾನವಾದ ಬೇರೆ ಗ್ರೂಪ್ ಇನ್ಶೂರೆನ್ಸ್ ಪಾಲಿಸಿಯನ್ನೂ ತರಬಹುದು.
ವೇಗದ ಸೆಟಲ್ಮೆಂಟ್: ಅಗತ್ಯ ದಾಖಲೆಗಳನ್ನು ಸಲ್ಲಿಸಿದ 20ರಿಂದ 30 ದಿನಗಳ ಒಳಗೆ ಕ್ಲೈಮ್ ಮೊತ್ತವನ್ನು ಇಪಿಎಫ್ಒ ಇತ್ಯರ್ಥಪಡಿಸುತ್ತದೆ.
ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು
ನಾಮಿನೇಷನ್ ನವೀಕರಣ: ಉದ್ಯೋಗಿಗಳು ಇಪಿಎಫ್ಒ ಪೋರ್ಟಲ್ನಲ್ಲಿ ತಮ್ಮ ನಾಮಿನಿ ವಿವರಗಳನ್ನು ಸರಿಯಾಗಿ ನವೀಕರಿಸಬೇಕು. ಮದುವೆ, ಮಗುವಿನ ಜನನ ಅಥವಾ ನಾಮಿನಿಯ ಮರಣದಂತಹ ಸಂದರ್ಭಗಳಲ್ಲಿ ಈ ವಿವರಗಳನ್ನು ತಕ್ಷಣ ಬದಲಾಯಿಸುವುದು ಒಳ್ಳೆಯದು.
ಕೆಲಸ ಬದಲಾಯಿಸಿದರೆ ವಿಮೆ ಕಡಿತವಾಗಲ್ಲ: ಉದ್ಯೋಗಿಗಳು ಕೆಲಸ ಬದಲಾಯಿಸಿದಾಗ, ಹಳೆಯ ಮತ್ತು ಹೊಸ ಕೆಲಸದ ನಡುವೆ 2 ತಿಂಗಳ ಗ್ಯಾಪ್ ಇದ್ದರೂ ವಿಮಾ ರಕ್ಷಣೆಯಲ್ಲಿ ಯಾವುದೇ ಅಡ್ಡಿ ಇರುವುದಿಲ್ಲ. ಇದು ದಿನದ 24 ಗಂಟೆಯೂ ರಕ್ಷಣೆ ನೀಡುತ್ತದೆ.
ಹೆಚ್ಆರ್ ಜೊತೆ ಪರಿಶೀಲಿಸಿ: ನಿಮ್ಮ ಕಂಪನಿಯು ಈ ಯೋಜನೆಯಿಂದ ಹೊರಗುಳಿದು ಬೇರೆ ಪರ್ಯಾಯ ವಿಮೆ ಮಾಡಿಸಿದೆಯೇ ಎಂಬುದನ್ನು ಉದ್ಯೋಗಿಗಳು ತಮ್ಮ ಹೆಚ್ಆರ್ (HR) ವಿಭಾಗದಲ್ಲಿ ವಿಚಾರಿಸಿ ತಿಳಿದುಕೊಳ್ಳಬೇಕು.
ಕ್ಲೈಮ್ ಮಾಡುವುದು ಹೇಗೆ?
ವಿಮಾ ಮೊತ್ತವನ್ನು ಪಡೆಯಲು ಫಾರ್ಮ್ 5 IF (Form 5 IF) ಮತ್ತು ಅದಕ್ಕೆ ಪೂರಕವಾದ ಪೋಷಕ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಕ್ಲೈಮ್ ಮಾಡುವವರು ಅಪ್ರಾಪ್ತರಾಗಿದ್ದರೆ (Minor), ಅವರ ಪರವಾಗಿ ಪೋಷಕರು (Guardian) ಅರ್ಜಿಯನ್ನು ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅಪ್ರಾಪ್ತ ವಾರಸುದಾರರಿದ್ದಲ್ಲಿ, ಪೋಷಕರು ಎಲ್ಲರ ಪರವಾಗಿ ಒಂದೇ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸಬಹುದು.
ಬರಹ: ಭವಾನಿ ಭಟ್














Click it and Unblock the Notifications