ದೇಶದ ಯಾವುದೇ ವ್ಯಕ್ತಿ ಹಸಿವಿನಿಂದ ಮಲಗದಂತೆ ನೋಡಿಕೊಳ್ಳಿ: ಸುಪ್ರೀಂ ಕೋರ್ಟ್
ನವದೆಹಲಿ, ಡಿಸೆಂಬರ್ 07: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನ ಗಳಿಸಿದೆ. ಈ ಮೂಲಕ ಭಾರತದ ಹಸಿವಿನ ಸಮಸ್ಯೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಭಾರತದಲ್ಲಿನ ಹಸಿವು ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಇ-ಶ್ರಮ್ ಪೋರ್ಟ್‌ಲ್‌ನಲ್ಲಿ ಅಸಂಘಟಿತ ವಲಯದ ಕಾರ್ಮಿಕರ(ವಲಸೆ ಕಾರ್ಮಿಕರು) ನೋಂದಣಿಯನ್ನು ಶಿಸ್ತುಬದ್ದವಾಗಿ ಮಾಡಿಸಿಕೊಳ್ಳಬೇಕು. ಅವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು
ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು ಈ ಬಗ್ಗೆ ವಿಚಾರಣೆ ನಡೆಸಿದೆ.
ನೋಂದಾಯಿತ ಕಾರ್ಮಿಕರು 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಯೋಜನೆ ಅಡಿ ಸಬ್ಸಿಡಿ ಆಹಾರಧಾನ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೋವಿಡ್ ಸಮಯದಲ್ಲಿ ಬಡವರು ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಪೂರೈಸಿದ ಸರ್ಕಾರಗಳ ಕಾರ್ಯವನ್ನು ಸುಪ್ರೀಂ ಕೋರ್ಟ್ ಪ್ರಶಂಸೆ ಮಾಡಿತು.

ಇ-ಪೋರ್ಟಲ್‌ನಲ್ಲಿ ನೋಂದಾಯಿತ ಕಾರ್ಮಿಕರ ಸಂಖ್ಯೆ ಎಷ್ಟು?
ಸೆಪ್ಟೆಂಬರ್ 19ರ ವರೆಗೆ 28.26 ಕೋಟಿ ಕಾರ್ಮಿಕರನ್ನು (ಶೇ 73.7) ಇ-ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಶೇಖಡಾ ನೂರರಷ್ಟು ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಛತ್ತೀಸ್‌ಗಢ, ಉತ್ತರಾಖಂಡ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶಗಳು ಶೇ 90 ಕ್ಕಿಂತ ಹೆಚ್ಚು ಉದ್ದೇಶಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಕಡಿಮೆ ನೋಂದಣಿ
ಮಹಾರಾಷ್ಟ್ರ(ಶೇ 38), ಕರ್ನಾಟಕ ಮತ್ತು ತಮಿಳುನಾಡು (ಎರಡು ರಾಜ್ಯಗಳಲ್ಲಿ ಶೇ 37), ಮತ್ತು ತೆಲಂಗಾಣ (ಶೇ 36) ನಲ್ಲಿ ಅಸಂಘಟಿತ ಕಾರ್ಮಿಕರ ಕಡಿಮೆ ನೋಂದಣಿಯಾಗಿದೆ.
ಪ್ರತಿ ಬಾರಿಯೂ ಮಹಾರಾಷ್ಟ್ರದಲ್ಲಿ ಕಡಿಮೆ ಅಸಂಘಟಿತ ಕಾರ್ಮಿಕರ ನೋಂದಣಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಮಹಾರಾಷ್ಟ್ರ ಸರ್ಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ.

ಸಬ್ಸಿಡಿ ಆಹಾರ ಧಾನ್ಯ ಪಡೆಯಲು ಕಾರ್ಮಿಕರು ಅರ್ಹರಾಗಿದ್ದಾರೆ.
ನೋಂದಾಯಿತ ವಲಸೆ ಕಾರ್ಮಿಕರಲ್ಲಿ ಶೇ 94 ರಷ್ಟು ಮಂದಿ 10,000 ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ. ಅವರು ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. 25 ಕೋಟಿ ಜನರು ಈ ಹಕ್ಕನ್ನು ಪಡೆಯಬೇಕು ಎಂದು ವಕೀಲ ಪ್ರಶಾಂತ್ ಭೂಷನ್ ಹೇಳಿದ್ದಾರೆ.
ದೇಶದ 14 ರಾಜ್ಯಗಳಲ್ಲಿ ಗ್ರಾಮೀಣ ಜನಸಂಖ್ಯೆಯ ಶೇ 75ರಷ್ಟು ಹಾಗೂ ನಗರ ಜನಸಂಖ್ಯೆಯ ಶೇ 50ರಷ್ಟು ಮಂದಿಗೆ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿಯಲ್ಲಿ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದ್ದರಿಂದ ಅವರಿಗೆ ಪಡಿತರ ಚೀಟಿಗಳನ್ನು ನೀಡಲಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದಾಯದ ಕುರಿತು ಕೇಂದ್ರ ಸರ್ಕಾರ ಹೇಳಿದ್ದೇನು?
ಎನ್‌ಎಫ್‌ಎಸ್‌ಎ ಜಾರಿಯಾದ ನಂತರ ಎಂಟು ವರ್ಷಗಳಲ್ಲಿ ತಲಾ ಆದಾಯವು ಶೇ 33.4% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರವು ಹೇಳಿದೆ. ಇದು ಸಮಾಜದ ದುರ್ಬಲ ವರ್ಗಗಳನ್ನು ಬಡತನ ರೇಖೆಯಿಂದ ಹೊರಬರುವಂತೆ ಮಾಡಿದೆ ಎಂದು ತಿಳಿಸಿದೆ.
ಕಳೆದ ಎಂಟು ವರ್ಷಗಳಲ್ಲಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ 18-19 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ನೋಂದಾಯಿಸಿಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.












Click it and Unblock the Notifications