ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Joshimath ಮುಳುಗಡೆಗೆ ವಿದ್ಯುತ್ ಯೋಜನೆ ಕಾರಣ: ನಿವಾಸಿಗಳ ಗಂಭೀರ ಆರೋಪ

|
Google Oneindia Kannada News

ದಿನ ಕಳೆದಂತೆ ಚಳಿಯೊಂದಿಗೆ ಉತ್ತರಖಂಡದ ಜೋಶಿಮಠದ ನಿವಾಸಿಗಳ ಪ್ರಾಣದ ಭೀತಿ ಹೆಚ್ಚಾಗುತ್ತಿದೆ. ಮುಳುಗುತ್ತಿರುವಂತೆ ಕಂಡುಬರುವ ಹಿಮಾಲಯದ ಯಾತ್ರಿಕರ ಪಟ್ಟಣ ಜೋಶಿಮಠದ ನಿವಾಸಿಗಳು ತಮ್ಮ ಈ ದುಃಸ್ಥಿತಿಗೆ ಸರ್ಕಾರವೇ ಕಾರಣ ಎಂದು ದೂರಿದ್ದಾರೆ. ಪಟ್ಟಣದಲ್ಲಿ ಆಸ್ತಿ ಕಳೆದುಕೊಂಡ ಎಲ್ಲರಿಗೂ ಸರ್ಕಾರ ಪುನರ್ವಸತಿ ಮತ್ತು ಹೊಸ ಮನೆಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ತಮ್ಮ ಜೀವನದ ಉಳಿತಾಯವನ್ನು ಹೂಡಿಕೆ ಮಾಡಿ ಕನಸಿನ ಮನೆ ಕಟ್ಟಿಕೊಂಡಿದ್ದ ಜೋಶಿಮಠದ ನಿವಾಸಿಗಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ನೋಡ ನೋಡುತ್ತಿದ್ದಂತೆ ಮನೆಗಳು ಬಿರುಕು ಬಿಟ್ಟು ಧರೆಗುರಳಲು ಕಾದು ನಿಂತಿವೆ. ಇಂತಹ ಪರಿಸ್ಥಿತಿಗೆ ಸರ್ಕಾರವೇ ಕಾರಣ ಎಂದು ನಿವಾಸಿಗಳು ದೂರಿದ್ದಾರೆ. ಮನೆಗಳ ಪುನರ್‌ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಉತ್ತರಖಂಡದ ಜೋಶಿಮಠ ಮುಳುತ್ತಿದೆ. ಭೂಗರ್ಭದಲ್ಲಿ ಭೂಕಂಪ, ಭೂಕುಸಿತ ಹಾಗೂ ನೀರಿನ ಹರಿವಿನಿಂದಾಗಿ ಮನೆಗಳು ಬೃಹತ್‌ ಗಾತ್ರದಲ್ಲಿ ಬಿರುಕು ಬಿಟ್ಟಿವೆ. ಮನೆಗಳು, ದೇವಸ್ಥಾನಗಳು, ರಸ್ತೆಗಳು, ಹಾಗೂ ಜಮೀನುಗಳಲ್ಲೂ ಬಿರುಕಿನಿಂದಾಗಿ ಜನ ಆತಂಕದಲ್ಲೇ ದಿನ ದೂರುವಂತಾಗಿದೆ. ತೀವ್ರ ಬಿಕ್ಕಟ್ಟಿನ ಸ್ಥಳಗಳ ಮನೆಗಳಿಂದ ಈಗಾಗಲೇ ಹಲವಾರು ಜನರನ್ನು ಸ್ಥಳಾಂತರಿಸಲಾಗಿದೆ. ನಿತ್ಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು ಪಟ್ಟಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆ. ಜೊತೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪಟ್ಟಣಕ್ಕೆ ಭೇಟಿ ನೀಡಿ ಸಮಿತಿಯಿಂದ ವರದಿ ಕೇಳಿದ್ದಾರೆ.

ಜೋಶಿಮಠ ನಿವಾಸಿಗಳ ಗಭೀರ ಆರೋಪ

ಜೋಶಿಮಠ ನಿವಾಸಿಗಳ ಗಭೀರ ಆರೋಪ

ಆದರೆ ತಮಗೆ ಸೂಕ್ತ ನೆರವು ನೀಡುವಂತೆ ಒತ್ತಾಯಿಸಿ ನಿವಾಸಿಗಳು ಭಾನುವಾರ ತಹಸಿಲ್ ಪ್ರಧಾನ ಕಚೇರಿಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ತಪೋವನ-ವಿಷ್ಣುಗಡವನ್ನು ದೂಷಿಸಿದರು. ಪವಿತ್ರ ಪಟ್ಟಣಕ್ಕೆ 'ಬದಲಾಯಿಸಲಾಗದ' ಹಾನಿಯಾಗಿರುವುದು ವಿದ್ಯುತ್ ಯೋಜನೆಯಿಂದ ಎಂದು ದೂರಿದ್ದಾರೆ.

ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಭಾನುವಾರ ದೆಹಲಿಯಲ್ಲಿ ಪರಿಸ್ಥಿತಿಯ ಉನ್ನತ ಮಟ್ಟದ ಪರಿಶೀಲನೆಯನ್ನು ನಡೆಸಿತು. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳು ಮತ್ತು ಭೂವಿಜ್ಞಾನ ಮತ್ತು ವಿಪತ್ತು ನಿರ್ವಹಣೆಯ ವೈಜ್ಞಾನಿಕ ತಜ್ಞರು ಭಾಗವಹಿಸಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ನೆಲಮಟ್ಟದ ಮೌಲ್ಯಮಾಪನದ ನಂತರ, ಸುಮಾರು 350 ಮೀಟರ್ ಅಗಲದ ಭೂಮಿಗೆ ಹಾನಿಯಾಗಿದೆ ಎಂದು ನಿರ್ಧರಿಸಲಾಗಿದೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ರಾಜ್ಯದ ತಕ್ಷಣದ ಆದ್ಯತೆಗಳು ಪೀಡಿತ ಪ್ರದೇಶದಲ್ಲಿ ವಾಸಿಸುವ ಜನರ ಸುರಕ್ಷತೆಯಾಗಿರಬೇಕು ಎಂದು ಒತ್ತಿ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ನಾಲ್ಕು ರಾಜ್ಯ ಪಡೆಗಳು ಜೋಶಿಮಠಕ್ಕೆ ತಲುಪಿದ್ದು, ಜಿಲ್ಲಾಡಳಿತವು ಸಂತ್ರಸ್ತ ಕುಟುಂಬಗಳೊಂದಿಗೆ ಆಹಾರ, ವಸತಿ ಮತ್ತು ಭದ್ರತೆಗಾಗಿ ಸಾಕಷ್ಟು ವ್ಯವಸ್ಥೆಗಳೊಂದಿಗೆ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೆಲಸ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಸರ್ಕಾರ ವಿರುದ್ಧ ನಿವಾಸಿಗಳ ಆಕ್ರೋಶ

ಸರ್ಕಾರ ವಿರುದ್ಧ ನಿವಾಸಿಗಳ ಆಕ್ರೋಶ

ನಿವಾಸಿಗಳ ಪ್ರತಿಭಟನೆಯ ನೇತೃತ್ವ ವಹಿಸಿರುವ ಜೋಶಿಮಠ ಬಚಾವೋ ಸಂಘರ್ಷ ಸಮಿತಿಯ ಸಂಚಾಲಕ ಅತುಲ್ ಸತಿ ಮಾತನಾಡಿ, ಪಟ್ಟಣವು ದುರಂತದ ಅಂಚಿನಲ್ಲಿರುವಾಗ ಸರ್ಕಾರ ಅಭಿವೃದ್ಧಿ ಯೋಜನೆಯನ್ನು ಮಾತ್ರ ನಿಲ್ಲಿಸಿದೆ. "ಎನ್‌ಟಿಪಿಸಿಯ ಕೆಲಸವು ಈ ಪಟ್ಟಣವನ್ನು ಮುಳುಗಿಸಲಿದೆ ಎಂದು ನಾವು ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆವು. ಯಾರೂ ಗಮನ ಹರಿಸಲಿಲ್ಲ. ಈಗ ಜೋಶಿಮಠದ ಪರಿಸ್ಥಿತಿ ನೋಡಿ ಹೇಗಾಗಿದೆ" ಎಂದು ದೂರಿದ್ದಾರೆ.

ಬಾರ್ಡರ್ ರೋಡ್ಸ್ ಸಂಸ್ಥೆಯಿಂದ ಹೇಳಂಗ್-ಮಾರ್ವಾರಿ ಬೈಪಾಸ್ ನಿರ್ಮಾಣ ಯೋಜನೆಗಳನ್ನು ಸ್ಥಗಿತಗೊಳಿಸುವುದರಿಂದ ಪ್ರಯೋಜನವಾಗುವುದಿಲ್ಲ ಎಂದು ಜೋಶಿಮಠ ಪ್ರದೇಶದ ಸುನೀಲ್ ಗ್ರಾಮದ ಅಂಗಡಿಯ ವ್ಯಾಪಾರಿ ದಿನೇಶ್ ಚೌಧರಿ ಹೇಳಿದರು. ''ಎನ್‌ಟಿಪಿಸಿ ಮತ್ತು ಬಿಆರ್‌ಒ ಯೋಜನೆಗಳಿಗೆ ಸರಕಾರ ಪೂರ್ಣವಿರಾಮ ಹಾಕಬೇಕು. ಆಗ ಮಾತ್ರ ಜೋಶಿಮಠ ಉದ್ಧಾರವಾಗುತ್ತಾರೆ'' ಎಂದು ಅವರು ಹೇಳಿದರು.

ಬದರಿನಾಥ ದೇಗುಲದ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಜೋಶಿಮಠದ ನಿವಾಸಿಗಳು, ತಮ್ಮ ಮನೆಗಳಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಒಂದು ವರ್ಷದಿಂದ ಸರ್ಕಾರಕ್ಕೆ ದೂರು ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಕಟ್ಟಡ ಬಿರುಕು ಬಿಟ್ಟ ನಂತರವೇ ಆಡಳಿತ ಚುರುಕುಗೊಂಡಿದೆ. ವಾಸ್ತವವಾಗಿ, ಜೋಶಿಮಠದಲ್ಲಿನ ಬಿರುಕುಗಳು ಇನ್ನು ಮುಂದೆ ಕೇವಲ ಮನೆಗಳು ಮತ್ತು ಕಟ್ಟಡಗಳಿಗೆ ಸೀಮಿತವಾಗಿಲ್ಲ. ಟ್ರೆಕ್ಕಿಂಗ್ ಮಾರ್ಗಗಳಲ್ಲಿನ ರಸ್ತೆಗಳು ಮತ್ತು ಕಲ್ಲುಗಳು ಸಹ ಬೀಳಬಹುದು ಎನ್ನಲಾಗುತ್ತಿದೆ.

ಸರ್ಕಾರದ ನಿರ್ಲಕ್ಷಕ್ಕೆ ನಿವಾಸಿಗಳು ಗರಂ

ಸರ್ಕಾರದ ನಿರ್ಲಕ್ಷಕ್ಕೆ ನಿವಾಸಿಗಳು ಗರಂ

ಡೆಹ್ರಾಡೂನ್ ಮೂಲದ ಸಾಮಾಜಿಕ ಕಾರ್ಯಕರ್ತ ಅನೂಪ್ ನೌಟಿಯಾಲ್ ಅವರು ಒಂದು ವಾರದ ಅವಧಿಯಲ್ಲಿ ಚಮೋಲಿಯಲ್ಲಿರುವ ಜಿಲ್ಲಾಡಳಿತವು ಕೇವಲ 68 ಕುಟುಂಬಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಇದುವರೆಗೆ 1,271 ಜನರಿಗೆ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆಯನ್ನು ಮಾತ್ರ ಮಾಡಿದೆ ಎಂದು ಆರೋಪಿಸಿದ್ದಾರೆ. ಈ "ತುರ್ತು ಸಮಯದಲ್ಲಿ" ಸ್ಥಳಾಂತರಿಸುವಿಕೆ ಮತ್ತು ಪುನರ್ವಸತಿಗೆ ಆಡಳಿತವು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಜನವರಿ 4ರಂದು 385 ಮಂದಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಜಾಗ ನೀಡಿತ್ತು. ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾದ ಐದು ದಿನಗಳ ನಂತರ ಜನವರಿ 8 ರವರೆಗೆ ಆಡಳಿತವು 1,271 ಜನರಿಗೆ ಪುನರ್ವಸತಿಗಾಗಿ ಜಾಗವನ್ನು ಸೃಷ್ಟಿಸಲು ಸಾಧ್ಯವಾಯಿತು. ಈ ಅಂಕಿ-ಅಂಶ ಜೋಶಿಮಠದ ಒಟ್ಟು ಜನಸಂಖ್ಯೆಯ ಶೇ.6ರಷ್ಟು ಕೂಡ ಇಲ್ಲ ಎಂದು ನೌಟಿಯಾಲ್ ಆರೋಪಿಸಿದ್ದಾರೆ. 2011 ರ ಜನಗಣತಿಯ ಪ್ರಕಾರ, ಜೋಶಿಮಠವು 16,000 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಪಟ್ಟಣದಲ್ಲಿ ಪ್ರಸ್ತುತ 20,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂದು ಆಡಳಿತ ಅಧಿಕಾರಿಗಳು ಹೇಳುತ್ತಾರೆ.

ನಿರಾಶ್ರಿತರಿಗೆ ಪಡಿತರ ಕಿಟ್, ಅಗತ್ಯ ವಸ್ತುಗಳ ಪೂರೈಕೆ

ನಿರಾಶ್ರಿತರಿಗೆ ಪಡಿತರ ಕಿಟ್, ಅಗತ್ಯ ವಸ್ತುಗಳ ಪೂರೈಕೆ

ಈ ಬಗ್ಗೆ ಮಾತನಾಡಿದ ಚಮೋಲಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ತ್ರಿಪಾಠಿ 2,000 ಜೋಶಿಮಠ ನಿವಾಸಿಗಳ ಪುನರ್ವಸತಿಗಾಗಿ ಪ್ರತಿಯೊಂದೂ ತಾತ್ಕಾಲಿಕ ವ್ಯವಸ್ಥೆ ಮಾಡಲು ಆಡಳಿತವು ಎನ್‌ಟಿಪಿಸಿ ಮತ್ತು ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯನ್ನು ಕೇಳಿದೆ ಎಂದು ಹೇಳಿದರು. ಜೋಶಿಮಠದಿಂದ 35 ಕಿಮೀ ದೂರದಲ್ಲಿರುವ ಪಿಪಾಲ್‌ಕೋಥಿಯಲ್ಲಿ ಅಗತ್ಯವಿದ್ದಲ್ಲಿ ನಾವು ಜನರಿಗೆ ಪುನರ್ವಸತಿ ಕಲ್ಪಿಸುತ್ತೇವೆ. ಜಿಲ್ಲಾಡಳಿತ ನಿರಾಶ್ರಿತರಿಗೆ ಪಡಿತರ ಕಿಟ್ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದೆ ಎಂದು ಅವರು ಹೇಳಿದರು.

ಈ ಪ್ರದೇಶಕ್ಕೆ ಭೇಟಿ ನೀಡಿದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಜನರು ಜೀವ ಅಮೂಲ್ಯವಾದುದಾಗಿದ್ದು ಮನೆಗಳಿಗೆ ಹಾನಿಯಾಗಿದ್ದರೆ ಅವರು ತಮ್ಮ ಮನೆಗಳನ್ನು ಖಾಲಿ ಮಾಡಬೇಕು ಎಂದು ಎಚ್ಚರಿಸಿದ್ದಾರೆ. "ನಿಮ್ಮ ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ' ಎಂದು ಹರೀಶ್ ರಾವತ್ ಹೇಳಿದ್ದಾರೆ.

ಇಂದು ಮಹತ್ವದ ಸಭೆ

ಇಂದು ಮಹತ್ವದ ಸಭೆ

ದೆಹಲಿಯಲ್ಲಿ ನಡೆದ ಪಿಎಂಒ ಪರಿಶೀಲನಾ ಸಭೆಯಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ನಾಲ್ವರು ಸದಸ್ಯರು ಮತ್ತು ಗಡಿ ನಿರ್ವಹಣಾ ಕಾರ್ಯದರ್ಶಿ ಜನವರಿ 9 ರಂದು ಜೋಶಿಮಠಕ್ಕೆ ಭೇಟಿ ನೀಡಿ, ತಾಂತ್ರಿಕ ತಂಡಗಳ ಸಂಶೋಧನೆಗಳನ್ನು ಮೌಲ್ಯಮಾಪನ ಮಾಡಲು ತಿಳಿಸಲಿದೆ. "ಜೋಶಿಮಠದ ನಿವಾಸಿಗಳಿಗೆ ಬೆಳವಣಿಗೆಗಳ ಬಗ್ಗೆ ತಿಳಿಸಲಾಗುತ್ತಿದೆ ಮತ್ತು ಅವರ ಸಹಕಾರವನ್ನು ಪಡೆಯಲಾಗುತ್ತಿದೆ. ಅಲ್ಪ-ಮಧ್ಯಮ-ದೀರ್ಘಾವಧಿಯ ಯೋಜನೆಗಳನ್ನು ರೂಪಿಸಲು ತಜ್ಞರ ಸಲಹೆಯನ್ನು ಪಡೆಯಲಾಗುತ್ತಿದೆ'' ಎಂದು ಪಿಎಂಒ ಹೇಳಿಕೆ ತಿಳಿಸಿದೆ. ಬಳಿಕ ಉನ್ನತ ಮಟ್ಟದ ಸಭೆ ನಡೆಯಲಿದೆ ಎನ್ನಲಾಗುತ್ತಿದೆ.

English summary
Residents of Joshimath in Uttarakhand have strongly accused the power project as the cause of Joshimath flooding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X