ವೋಟರ್ ಐಡಿ-ಆಧಾರ್ ಲಿಂಕ್: ಮಾಹಿತಿ ಹಂಚಿಕೆ ಕಡ್ಡಾಯವೇ?
ನವದೆಹಲಿ, ಮಾರ್ಚ್ 20: ಕೇಂದ್ರ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಕುರಿತು ತಾಂತ್ರಿಕ ಸಮಾಲೋಚನೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದೆ. ಇದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಜೊತೆ ಚುನಾವಣಾ ಆಯೋಗ ಕೆಲಸ ಮಾಡಲಿದೆ. ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲು ನಮೂನೆ 6ಬಿಗೆ ಕೇಂದ್ರ ಕಾನೂನು ಸಚಿವಾಲಯ ತಿದ್ದುಪಡಿಯನ್ನು ತರಲಿದೆ. ವ್ಯಕ್ತಿ ಆಧಾರ್ ಮಾಹಿತಿ ಹಂಚಿಕೊಳ್ಳುವುದು ಕಡ್ಡಾಯವೇ? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಯುಐಡಿಎಐ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳ ನಡುವೆ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಹಂಚಿಕೆ ಕುರಿತು ತಾಂತ್ರಿಕ ಸಮಾಲೋಚನೆಗಳು ನಡೆಯಲಿವೆ. ಗೃಹ ಸಚಿವಾಲಯ, ಕಾನೂನು ಇಲಾಖೆಯ ಕಾರ್ಯದರ್ಶಿಗಳು ಮತ್ತು ಯುಐಡಿಎಐ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸಭೆಯನ್ನು ನಡೆಸಿದ್ದಾರೆ.

ಎಪಿಕ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೆಲವು ಕಾನೂನು ತಿದ್ದುಪಡಿಗಳು ಅಗತ್ಯವಿದೆ. ಭಾರತದ ಸಂವಿಧಾನದ ಆರ್ಟಿಕಲ್ 326ರ ಪ್ರಕಾರ, ಭಾರತದ ನಾಗರಿಕನಿಗೆ ಮಾತ್ರ ಮತದಾನದ ಹಕ್ಕುಗಳನ್ನು ನೀಡಬಹುದು ಆದರೆ ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಹೇಳುತ್ತದೆ. ಆದ್ದರಿಂದ ವ್ಯಕ್ತಿಯ ಆಧಾರ್ ಮಾಹಿತಿ ಹಂಚಿಕೊಳ್ಳಲು ಕೆಲವು ಕಾನೂನು ತಿದ್ದುಪಡಿಗಳ ಅಗತ್ಯವಿದೆ.
ಮಾಹಿತಿ ಹಂಚಿಕೆ ಕಡ್ಡಾಯವೇ?: ಆಧಾರ್ ಮತ್ತು ಎಪಿಕ್ ಕಾರ್ಡ್ ಜೋಡಣೆಗೆ ವ್ಯಕ್ತಿ ಆಧಾರ್ ಮಾಹಿತಿಯನ್ನು ಹಂಚಿಕೆ ಮಾಡಿಕೊಳ್ಳುವುದು ಕಡ್ಡಾಯವೇ? ಎಂಬ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಾನೂನು ಸಚಿವಾಲಯವು ನಮೂನೆ 6B ಅನ್ನು ತಿದ್ದುಪಡಿ ಮಾಡಲಿದೆ. ಇದರಿಂದಾಗಿ ಆಧಾರ್ ವಿವರಗಳನ್ನು ನೀಡುವುದು ಸ್ವಯಂಪ್ರೇರಿತವಾಗಿ ಉಳಿಯಲಿದೆ. ಆದರೆ ವ್ಯಕ್ತಿ ಏಕೆ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸುತ್ತೇನೆ ಎಂದು ಕಾರಣಗಳನ್ನು ವಿವರಿಸಬೇಕಿದೆ.
ಮಂಗಳವಾರ ನಡೆದ ಚುನಾವಣಾ ಆಯೋಗ, ಗೃಹ ಸಚಿವಾಲಯ, ಕಾನೂನು ಸಚಿವಾಲಯ, ಐಟಿ ಸಚಿವಾಲಯ ಮತ್ತು ಯುಐಡಿಎಐ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದಿವೆ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಈ ವರ್ಷ ನಡೆದ ಮೊದಲ ಸಭೆ ಇದಾಗಿತ್ತು. ಮತದಾರರ ಪಟ್ಟಿಯಲ್ಲಿ ಲೋವಿದೆ ಎಂದು 'ಇಂಡಿಯಾ' ಮೈತ್ರಿಕೂಟ ಆರೋಪ ಮಾಡಿದ ಬಳಿಕ ನಡೆದ ಮೊದಲ ಸಭೆ ಇದಾಗಿತ್ತು.
ಸದ್ಯದ ಮಟ್ಟಿಗೆ ಮತದಾರರಿಗೆ ನಮೂನೆ 6 ಅತ್ಯಂತ ಪ್ರಮುಖವಾಗಿದೆ. ನಮೂನೆ 6ರನ್ನು ಹೊಸ ಮತದಾರರನ್ನು ನೋಂದಾಯಿಸಲು ಬಳಕೆ ಮಾಡಲಾಗುತ್ತದೆ. ನಮೂನೆ 6ರಲ್ಲಿ ಸದ್ಯ ಕೇವಲ ಎರಡು ಆಯ್ಕೆಗಳಿವೆ. ನಾನು ಆಧಾರ್ ನಂಬರ್ ನೀಡುತ್ತೇನೆ, ನಾನು ಆಧಾರ್ ಕಾರ್ಡ್ ಹೊಂದಿಲ್ಲದ ಕಾರಣ ಆಧಾರ್ ಸಂಖ್ಯೆ ನೀಡಲು ಸಾಧ್ಯವಿಲ್ಲ ಎಂಬ ಆಯ್ಕೆಗಳಿವೆ.
ಈಗ ಕೇಂದ್ರ ಕಾನೂನು ಸಚಿವಾಲಯ ಈ ನಿಯಮಗಳಲ್ಲಿ ತಿದ್ದುಪಡಿ ಮಾಡಲಿದೆ. ಕೆಲವು ನಿರ್ಬಂಧಿತ ಆಯ್ಕೆಗಳನ್ನು ತೆಗೆದು ಹಾಕಲಾಗುತ್ತದೆ. ಆದರೆ ಮತದಾರರು ತಮ್ಮ 12 ಅಂಕಿಯ ಆಧಾರ್ ನಂಬರ್ ಏಕೆ ನೀಡುವುದಿಲ್ಲ ಎಂದು ಕಾರಣವನ್ನು ಸಹ ವಿವರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು 2023ರ ತನಕ 66 ಕೋಟಿ ಮತದಾರರ ಆಧಾರ್ ವಿವರಗಳನ್ನು ಸಂಗ್ರಹಿಸಿದೆ. ಅವರು ಸ್ವಯಂ ಪ್ರೇರಿತವಾಗಿ ಈ ಮಾಹಿತಿಯನ್ನು ಒದಗಿಸಿದ್ದಾರೆ. ಆದರೆ ಈ 66 ಕೋಟಿ ಮತದಾರರ ಎರಡು ಡೇಟಾಬೇಸ್‌ಗಳನ್ನು ಇನ್ನೂ ಸಹ ಜೋಡಣೆ ಮಾಡಿಲ್ಲ. ಆಧಾರ್ ಸಂಖ್ಯೆಯನ್ನು ಇನ್ನೂ ಸಹ ನಕಲಿ ದಾಖಲೆಗಳನ್ನು ತೆಗೆದುಹಾಕಲು ಅಥವಾ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದನ್ನು ರದ್ದು ಮಾಡುವ ಕಾರ್ಯಕ್ಕೆ ಬಳಕೆ ಮಾಡಿಲ್ಲ.
ದೇಶದಲ್ಲಿಯೇ ಮೊದಲ ಬಾರಿಗೆ ಈ ತಿದ್ದುಪಡಿಯನ್ನು ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮೊದಲು ಮಾಡುವ ನಿರೀಕ್ಷೆ ಇದೆ. ಈಗ ನಮೂನೆ 6ರ ನಿಯಮ ಬದಲಾವಣೆಯನ್ನು ಮಾಡಲಾಗುತ್ತದೆ. ಆಗ ಮತದಾರರು ತಮ್ಮ ಆಧಾರ್ ಸಂಖ್ಯೆ ನೀಡದೇ ಇರುವ ಕಾರಣವನ್ನು ವಿವರಿಸಬೇಕಾಗುತ್ತದೆ.












Click it and Unblock the Notifications