ತೆಲಂಗಾಣ ಡಿಜಿ ಐಜಿಪಿ ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ: ಕಾರಣವೇನು..?
ತೆಲಂಗಾಣ, ಡಿಸೆಂಬರ್ 03: ತೆಲಂಗಾಣ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಇಂದು ಹೊರಬಿದ್ದಿದೆ. ಮತ ಎಣಿಕೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ತೆಲಂಗಾಣದ ಡಿಜಿ ಮತ್ತು ಐಜಿಪಿ ಅಂಜನಿ ಕುಮಾರ್ ಅವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಮತ ಎಣಿಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ ಪೂರ್ಣ ಪ್ರಮಾಣದ ಚುನಾವಣಾ ಫಲಿತಾಂಶ ಬರುವ ಮುನ್ನವೇ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು.

ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ) ಮಹೇಶ್ ಭಾಗವತ್ ಅವರೊಂದಿಗೆ ರೇವಂತ್ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ಡಿಜಿ ಮತ್ತು ಐಜಿಪಿ ಅಂಜನಿ ಕುಮಾರ್ ಹೂ ಗುಚ್ಚ ನೀಡುವ ಮೂಲಕ ಶುಭಾಶಯ ಕೋರಿದರು. ಈ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.
ಚುನಾವಣಾ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಚುನಾವಣಾ ಆಯೋಗ, ತಕ್ಷಣವೇ ಜಾರಿಗೆ ಬರುವಂತೆ ಡಿಜಿ ಮತ್ತು ಐಜಿಪಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
'ಚುನಾವಣೆಯ ಮತದಾನ ಹಾಗೂ ಮತ ಎಣಿಕೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ತನ್ನದೇ ಆದ ಕರ್ತವ್ಯವಿದೆ. ಹಿರಿಯ ಅಧಿಕಾರಿಗಳು ಮಾಡಿದಂತೆ ಇತರ ಪೊಲೀಸರು ತಮ್ಮ ಚುನಾವಣೆಯ ಕರ್ತವ್ಯ ಬಿಟ್ಟು ಶುಭ ಕೋರಲು ಹೋದರೆ. ಮುಂದೆ ಊಹಿಸಲಾದ ಪರಿಣಾಮಗಳು ನಡೆಯುತ್ತದೆ.
ಹೀಗಾಗಿ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ರೇವಂತ್ ರೆಡ್ಡಿ ಅವರನ್ನು ಭೇಟಿಯಾದ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ) ಮಹೇಶ್ ಭಾಗವತ್ ಅವರ ಬಳಿಯೂ ಸ್ಪಷ್ಟನೆ ಕೇಳಲಾಗಿದೆ. ಅಲ್ಲದೇ ರಾಜ್ಯದ ಮುಂದಿನ ಹಿರಿಯ ಅರ್ಹ ಪೊಲೀಸ್ ಅಧಿಕಾರಿಗೆ ತಕ್ಷಣವೇ ತೆಲಂಗಾಣ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ನೀಡಲಾಗುವುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 65 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ಬಿಆರ್‌ಎಸ್ ಪಕ್ಷ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಬಿಜೆಪಿ ಎಂಟು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಇತರೆ ಏಳು ಕ್ಷೇತ್ರದಲ್ಲಿ ಗೆಲುವು ಕಂಡಿದೆ.












Click it and Unblock the Notifications