'ರಾಷ್ಟ್ರಪತಿ ದ್ರೌಪದಿ ಚಮಚಾಗಿರಿ'- ಕಾಂಗ್ರೆಸ್ ಮುಖಂಡನ ಹೇಳಿಕೆ, ಬಿಜೆಪಿಗರ ಟೀಕೆ
ನವದೆಹಲಿ, ಅ. 6: ರಾಷ್ಟ್ರಪತಿ ದ್ರೌಪದಿ ಮುರ್ಮು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ನಿನ್ನೆ ಬುಧವಾರ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಡಾ. ಉದಿತ್ ರಾಜ್ ವಿರುದ್ಧ ಬಿಜೆಪಿಗರು ಟೀಕಾ ಮಳೆಯನ್ನೇ ಸುರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದಿತ್ ರಾಜ್ ಅವಹೇಳನ ಮಾಡಿರುವುದು ಕಾಂಗ್ರೆಸ್ ಪಕ್ಷದ ಬುಡಕಟ್ಟು ಸಮುದಾಯ ವಿರೋಧಿ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಉದಿತ್ ರಾಜ್ ಗುರುವಾರ ಹೇಳಿದ್ದಾರೆ.
ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಪಕ್ಷದವರು ಜರಿದಿದ್ದು ಇದೇ ಮೊದಲಲ್ಲ ಎಂದ ಸಂಬಿತ್ ಪಾತ್ರ, "ದೇಶದಲ್ಲಿ ಅತ್ಯುನ್ನತ ಸ್ಥಾನಕ್ಕೆ ಶ್ರಮ ಪಟ್ಟು ಹೋಗಿರುವ ರಾಷ್ಟ್ರಪತಿ ಬಗ್ಗೆ ಕಾಂಗ್ರೆಸ್ ಬಾರಿ ಬಾರಿ ಲೇವಡಿ ಮಾಡುತ್ತಿರುವುದು ಅಚ್ಚರಿ ಮತ್ತು ಬೇಸರ ಮೂಡಿಸುತ್ತದೆ. ಇದು ಕಾಂಗ್ರೆಸ್‌ನ ಮಾನಸಿಕತೆಯನ್ನು ಬೆತ್ತಲು ಮಾಡುತ್ತದೆ," ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರರು ಗುಡುಗಿದ್ದಾರೆ.
ಹಾಗೆಯೇ, ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗಿರುವ ದ್ರೌಪದಿ ಮುರ್ಮು ಬಗ್ಗೆ ಇಂಥ ಕೀಳು ಅಭಿಪ್ರಾಯ ಹೊಂದಿರುವುದಕ್ಕಾಗಿ ಕಾಂಗ್ರೆಸ್ ಪಕ್ಷ ಕ್ಷಮೆ ಯಾಚಿಸಬೇಕು ಎಂದು ಸಂಬಿತ್ ಪಾತ್ರ ಆಗ್ರಹಿಸಿದ್ದಾರೆ. ಇನ್ನು, ರಾಷ್ಟ್ರೀಯ ಮಹಿಳಾ ಆಯೋಗವು ಉದಿತ್ ರಾಜ್‌ಗೆ ನೋಟೀಸ್ ಜಾರಿ ಮಾಡಿದ್ದು, ಕ್ಷಮೆ ಯಾಚಿಸುವಂತೆ ಒತ್ತಾಯಿಸಿದೆ.

ಉದಿತ್ ರಾಜ್ ಹೇಳಿದ್ದೇನು?
ರಾಷ್ಟ್ರಪತಿ ದ್ರೌಪದಿ ಮುರ್ಮು ಚಮಚಾಗಿರಿ ಮಾಡಿ ಆ ಸ್ಥಾನಕ್ಕೆ ಏರಿದ್ಧಾರೆ ಎಂದು ಕಾಂಗ್ರೆಸ್ ಮುಖಂಡ ಡಾ. ಉದಿತ್ ರಾಜ್ ನಿನ್ನೆ ಬುಧವಾರ ಟ್ವೀಟ್ ಮಾಡಿದ್ದರು.
"ಯಾವ ದೇಶಕ್ಕೂ ದ್ರೌಪದಿ ಮುರ್ಮು ಅವರಂತಹ ಅಧ್ಯಕ್ಷರು ಸಿಗಬಾರದು. ಚಮಚಾಗಿರಿಗೂ ಒಂದು ಮಿತಿ ಇರುತ್ತದೆ. ದೇಶದ ಶೇ. 70ರಷ್ಟು ಜನರು ಗುಜರಾತ್‌ನ ಉಪ್ಪನ್ನು ತಿನ್ನುತ್ತಾರೆ ಎಂದು ಅವರು ಹೇಳಿದ್ದಾರೆ. ನೀವು ಬರೀ ಉಪ್ಪು ತಿನ್ನುತ್ತಾ ಕೂತರೆ ಗೊತ್ತಾಗುತ್ತೆ," ಎಂದು ಉದಿತ್ ರಾಜ್ ಬುಧವಾರ ರಾತ್ರಿ ಮಾಡಿದ ಟ್ವೀಟ್‌ನಲ್ಲಿ ಕಿಡಿ ಕಾರಿದ್ದರು.
|
ರಾಷ್ಟ್ರಪತಿ ಹೇಳಿಕೆಗೆ ಪ್ರತಿಕ್ರಿಯೆ
ಉದಿತ್ ರಾಜ್ ನೀಡಿದ ಹೇಳಿಕೆಯು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುಜರಾತ್‌ನಲ್ಲಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆಯಾಗಿತ್ತು. ಅಕ್ಟೋಬರ್ 3ರಂದು ಗುಜರಾತ್‌ನಲ್ಲಿ ಮಾತನಾಡುತ್ತಾ ದ್ರೌಪತಿ ಮುರ್ಮು ಗುಜರಾತ್ ರಾಜ್ಯದ ಉಪ್ಪಿನ ಬಗ್ಗೆ ಪ್ರಸ್ತಾಪ ಮಾಡಿದ್ದರು.
"ಹಾಲು ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಗುಜರಾತ್‌ನ ಹಾಲು ಸಹಕಾರ ಸಂಘಗಳು ಆರಂಭಿಸಿದ ಶ್ವೇತ ಕ್ರಾಂತಿ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಶೇ. 76ರಷ್ಟು ಉಪ್ಪನ್ನು ಗುಜರಾತ್ ತಯಾರಿಸುತ್ತದೆ. ಗುಜರಾತ್‌ನಲ್ಲಿ ತಯಾರಾದ ಉಪ್ಪನ್ನು ದೇಶದ ಎಲ್ಲಾ ಜನರೂ ತಿನ್ನುತ್ತಾರೆ," ಎಂದು ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಹೇಳಿದ್ದರು.

ಉದಿತ್ ರಾಜ್ ಸಮರ್ಥನೆ
ರಾಷ್ಟ್ರಪತಿ ದ್ರೌಪದಿ ಚಮಚಾಗಿರಿ ಮಾಡುತ್ತಿದ್ಧಾರೆಂದು ಹೇಳಿ ಬಿಜೆಪಿ ನಾಯಕರಿಂದ ಟ್ರೋಲ್ ಆಗುತ್ತಿರುವ ಕಾಂಗ್ರೆಸ್ ನಾಯಕ ಡಾ. ಉದಿತ್ ರಾಜ್, ತಮ್ಮ ಹೇಳಿಕೆಗೆ ಕೆಲ ಸ್ಪಷ್ಟೀಕರಣಗಳನ್ನು ಕೊಟ್ಟಿದ್ದಾರೆ.
"ದ್ರೌಪದಿ ಮುರ್ಮು ಬಗ್ಗೆ ನಾನು ನೀಡಿದ್ದು ವೈಯಕ್ತಿಕ ಹೇಳಿಕೆಯೇ ಹೊರತು ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಅಲ್ಲ" ಎಂದು ಸ್ಪಷ್ಟಪಡಿಸಿರುವ ಅವರು ಆದಿವಾಸಿ ಹೆಸರಲ್ಲಿ ಜನರು ಉನ್ನತ ಹಂತಕ್ಕೇರಿ ಬಳಿಕ ತಮ್ಮ ಸಮುದಾಯವನ್ನೇ ಮರೆತುಬಿಡುತ್ತಾರೆ ಎಂದೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಆದಿವಾಸಿ ಹೆಸರಿನಲ್ಲಿ ದ್ರೌಪದಿ ಮುರ್ಮು ಅವರ ಸ್ಪರ್ಧೆ ಮತ್ತು ಪ್ರಚಾರ ನಡೆದಿತ್ತು. ಎಸ್‌ಸಿ ಎಸ್‌ಟಿ ಸಮುದಾಯದವರು ಉನ್ನತ ಹಂತಕ್ಎ ಹೋದಾಗ ತಮ್ಮ ಸಮುದಾಯದವರನ್ನು ತಿರಸ್ಕರಿಸಿ ಮೌನವಾಗಿರುವುದನ್ನು ಕಂಡಾಗ ನನಗೆ ವೇದನೆ ಆಗುತ್ತದೆ" ಎಂದು ಉದಿತ್ ರಾಜ್ ಗುರುವಾರ ಟ್ವೀಟ್ ಮಾಡಿದ್ದಾರೆ.
"ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಬಗ್ಗೆ ಪೂರ್ಣ ಗೌರವ ಇದೆ. ಅವರು ದಲಿತ ಮತ್ತು ಆದಿವಾಸಿಗಳ ಪ್ರತಿನಿಧಿಯೂ ಹೌದು. ಈ ಸಮುದಾಯಗಳು ತಮ್ಮ ಪಾಲನ್ನು ಕೇಳುವ ಅಧಿಕಾರ ಹೊಂದಿದ್ದಾರೆ. ಇದನ್ನು ರಾಷ್ಟ್ರಪತಿ ಪದವಿಗೆ ಜೋಡಿಸಬಾರದು" ಎಂದೂ ಕಾಂಗ್ರೆಸ್ ನಾಯಕ ಸ್ಪಷ್ಟಪಡಿಸಿದ್ದಾರೆ. ಅಂದರೆ, ತಾನು ಚಮಚಾಗಿರಿ ಎಂದದ್ದು ವೈಯಕ್ತಿಕವಾಗಿ ದ್ರೌಪದಿ ಮುರ್ಮು ಅವರಿಗೆಯೇ ಹೊರತು, ರಾಷ್ಟ್ರಪತಿಗೆ ಅಲ್ಲ ಎಂಬುದು ಉದಿತ್ ರಾಜ್ ಸ್ಪಷ್ಟೀಕರಣ.
ಇನ್ನು, ಬಿಜೆಪಿ ನಾಯಕ ಸಂಬಿತ್ ಪಾತ್ರ ಮಾಡಿದ ಟ್ರೀಟ್‌ಗೂ ಉದಿತ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
"ಪಾತ್ರ ಅವರೇ, ನಾನೊಬ್ಬ ದಲಿತ ವ್ಯಕ್ತಿಯಾಗಿ ದ್ರೌಪದಿ ಮುರ್ಜು ಅವರಿಗೆ ಪ್ರಶ್ನೆ ಕೇಳಿದೆ. ನೀವು ಕೇಳಲು ಆಗುವುದಿಲ್ಲ. ಅದು ನಮ್ಮ ನಡುವಿನ ವಿಷಯ. ಎಸ್‌ಸಿ ಎಸ್‌ಟಿ ಹೆಸರಿನಲ್ಲಿ ಕಿವುಡ ಮೂಗರು ಮುನ್ನೆಲೆಗೆ ಬರುತ್ತಾರೆ ಎಂಬುದು ಡಾ. ಅಂಬೇಡ್ಕರ್ ಭಯವಾಗಿತ್ತು. ನಾನು ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುವ ಮುಂಚಿನವರೆಗೂ ಬಿಜೆಪಿಯಲ್ಲಿ ನನ್ನ ಬಗ್ಗೆ ಗೌರವ ಇತ್ತು. ನೀವು ಡಮ್ಮಿಗಳ ಮೂಲಕ ನಮ್ಮ ಮತಗಳನ್ನು ಕೊಳ್ಳೆ ಹೊಡೆಯುತ್ತೀರಿ," ಎಂದು ಉದಿತ್ ರಾಜ್ ತಿರುಗೇಟು ನೀಡಿದ್ದಾರೆ.

ಮಹಿಳಾ ಆಯೋಗ ನೋಟೀಸ್
ಇದೇ ವೇಳೆ, ದ್ರೌಪದಿ ಮುರ್ಮು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಾ. ಉದಿತ್ ರಾಜ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟೀಸ್ ಜಾರಿ ಮಾಡಿದೆ. ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸುವಂತೆ ಆಗ್ರಹ ಕೂಡ ಮಾಡಿದೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ತಮ್ಮ ಭಾಷಣವೊಂದರಲ್ಲಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಹೀಯಾಳಿಸಿದ್ದರು. ಆ ಘಟನೆಗೆ ಬಿಜೆಪಿ ಟೀಕೆ ವ್ಯಕ್ತಪಡಿಸಿದ ಬಳಿಕ ಅವರು ಅಧೀರ್ ರಂಜನ್ ಕ್ಷಮೆಯಾಚಿಸಿದ್ದರು.
"ನಾನೊಬ್ಬ ಬಂಗಾಳಿ. ನನಗೆ ಹಿಂದಿ ಬಳಕೆ ಅಷ್ಟೇನೂಗೊತ್ತಿಲ್ಲ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ನಾನು ಅರಿವಿಲ್ದೇ ಒಮ್ಮೆ ರಾಷ್ಟ್ರಪತ್ನಿ ಪದ ಪ್ರಯೋಗ ಮಾಡಿದ್ದೆ. ಅದು ತಪ್ಪಿ ಆಡಿದ ಮಾತು. ರಾಷ್ಟ್ರಪತಿಗಳನ್ನು ಅಗೌರವಿಸುವ ಉದ್ದೇಶ ಇರಲಿಲ್ಲ... ನಾನು ರಾಷ್ಟ್ರಪತಿ ಮುರ್ಮು ಅವರಲ್ಲಿ ಕ್ಷಮೆ ಕೋರುತ್ತೇನೆ ಹೊರತು ಈ 'ಪಾಖಂಡಿ'ಗಳಿಗೆ ಕ್ಷಮೆ ಯಾಚಿಸುವುದಿಲ್ಲ" ಎಂದ ಅಧೀರ್ ರಂಜನ್ ಚೌಧುರಿ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications