Shocking! ಮೊಮೊಸ್ ಪ್ರಿಯರೇ ಎಚ್ಚರ: ಕಾರ್ಖಾನೆಯಲ್ಲಿ ನಾಯಿಯ ತಲೆ, ಕೊಳೆತ ಕೋಳಿ ಪತ್ತೆ
ಮೊಮೊಸ್ ಅಂದ್ರೆ ಬಾಯಿ ಚಪ್ಪರಿಸಿ ತಿನ್ನೋ ಜನ ಈ ಸುದ್ದಿಯನ್ನು ಓದಲೇ ಬೇಕು. ಯಾಕೆಂದರೆ ಪಂಜಾಬ್‌ನ ಮೊಮೊಸ್ ತಯಾರಿಸುವ ಕಾರ್ಖಾನೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾರ್ಖಾನೆಯಲ್ಲಿ ನಾಯಿಯ ತಲೆ, ಕೊಳೆತ ಕೋಳಿ ಪತ್ತೆಯಾಗಿದ್ದು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಪಂಜಾಬ್‌ನ ಮೊಹಾಲಿಯ ಮಾತೌರ್‌ನಲ್ಲಿರುವ ಮೊಮೊ ತಯಾರಿಕಾ ಕಾರ್ಖಾನೆಯ ಮೇಲೆ ಆರೋಗ್ಯ ಇಲಾಖೆಯ ತಂಡ ದಾಳಿ ನಡೆಸಿತ್ತು. ತಂಡದ ತನಿಖೆಯ ಸಮಯದಲ್ಲಿ ಕಾರ್ಖಾನೆಯ ರೆಫ್ರಿಜರೇಟರ್‌ನಲ್ಲಿ ನಾಯಿಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಇದಲ್ಲದೆ ಸ್ಥಳದಲ್ಲಿ ತಂಡ ಕೊಳೆತ ಕೋಳಿಯನ್ನು ಸಹ ವಶಪಡಿಸಿಕೊಂಡಿದೆ. ಇವುಗಳನ್ನು ಮೊಮೊಸ್ ತಯಾರಿಸಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಆದರೆ ತೋರಿಕೆಗೆ ನಾಯಿಯ ತಲೆಯಂತೆ ಕಾಣುವ ಮಾಂಸ ವಾಸ್ತವವಾಗಿ ನಾಯಿಯದ್ದೇನಾ ಅಥವಾ ಅಲ್ವಾ ಎಂಬುದು ಮಾತ್ರ ದೃಢಪಟ್ಟಿಲ್ಲ. ಈ ಘಟನೆಯ ನಂತರ ಇಡೀ ತ್ರಿವಳಿ ನಗರದಲ್ಲಿ (ಚಂಡೀಗಢ, ಪಂಚಕುಲ, ಮೊಹಾಲಿ) ಭೀತಿ ಆವರಿಸಿದೆ. ಯಾಕೆಂದರೆ ಈ ಕಾರ್ಖಾನೆಯಿಂದ ಇಡೀ ತ್ರಿವಳಿ ನಗರಕ್ಕೆ ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ಪೂರೈಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಈ ಘಟನೆ ಬೆಳಕಿಗೆ ಬಂದ ನಂತರ ಜನ ಬೆಚ್ಚಿ ಬಿದ್ದಿದ್ದಾರೆ. ಜನರು ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳ ಬಗ್ಗೆ ವಿಭಿನ್ನವಾಗಿ ಮಾತನಾಡುತ್ತಿದ್ದಾರೆ. ಸಂಜೆ ವೇಳೆ ಅಂಗಡಿಗಳು ಮತ್ತು ಬಂಡಿಗಳ ಬಳಿ ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ತಿನ್ನಲು ಸಾಕಷ್ಟು ಜನ ಸೇರಿರುತ್ತಾರೆ. ಅಲ್ಲದೆ ಕೆಲವು ಜನರು ಚಿಕನ್ ಮೊಮೊಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಈ ಸುದ್ದಿ ನಿಜಕ್ಕೂ ಆರೋಗ್ಯದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ. ಕೆಲವರು ಈ ಸುದ್ದಿ ತಿಳಿದ ಬಳಿಕ ಮೊಮೊಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.
ಎರಡು ದಿನಗಳ ಹಿಂದೆ ಈ ಹೊಲಸಿನ ವಿಡಿಯೋ ವೈರಲ್
ದಾಳಿಗೂ ಎರಡು ದಿನಗಳ ಹಿಂದೆ ಮಾತೌರ್‌ನಲ್ಲಿರುವ ಈ ಕಾರ್ಖಾನೆಯ ವೀಡಿಯೊ ವೈರಲ್ ಆಗಿತ್ತು. ಮೊಮೊಗಳನ್ನು ಇಟ್ಟಿದ್ದ ಸ್ಥಳದಲ್ಲಿ ಬಹಳಷ್ಟು ಕೊಳಕು ಇರುವುದನ್ನು ವೀಡಿಯೊದಲ್ಲಿ ತೋರಿಸಲಾಗಿತ್ತು. ಕೊಳೆತ ಎಲೆಕೋಸು, ಹೂಕೋಸು ಮತ್ತು ಇತರ ತಿನಿಸುಗಳು ಮೊಮೊಸ್ ಇಡುವ ಸ್ಥಳದಲ್ಲಿ ಬಿದ್ದಿದ್ದವು. ಅಲ್ಲದೆ ಮೊಮೊಗಳನ್ನು ಕೊಳಕು ಎಣ್ಣೆಯಲ್ಲಿ ಹುರಿಯಲಾಗುತ್ತಿತ್ತು. ಈ ವಿಡಿಯೋ ವೈರಲ್ ಆದ ನಂತರ ಆರೋಗ್ಯ ಇಲಾಖೆಯ ತಂಡ ತನಿಖೆ ನಡೆಸಿದಾಗ ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ.

ಮೊಮೊಸ್, ಸ್ಪ್ರಿಂಗ್ ರೋಲ್ಸ್ ಮತ್ತು ಚಟ್ನಿಯ ಮಾದರಿ ಸಂಗ್ರಹ
ವಿಡಿಯೋ ವೈರಲ್ ಆದ ನಂತರ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ತಂಡವು ಕಾರ್ಖಾನೆಯನ್ನು ಪರಿಶೀಲಿಸಿದಾಗ ನಾಯಿಯಂತಹ ಪ್ರಾಣಿಯ ಕತ್ತರಿಸಿದ ತಲೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕಾರ್ಖಾನೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಲಾಗಿದೆ ಎಂದು ಮೊಹಾಲಿಯ ಸಹಾಯಕ ಆಹಾರ ಸುರಕ್ಷತಾ ಆಯುಕ್ತ ಡಾ. ಅಮೃತ್ ವಾರಿಂಗ್ ಹೇಳಿದ್ದಾರೆ.
ಅಲ್ಲದೆ ಕಾರ್ಖಾನೆಯಿಂದ ಸರಬರಾಜು ಮಾಡಲಾದ ಸ್ಪ್ರಿಂಗ್ ರೋಲ್‌ಗಳು ಮತ್ತು ಮೊಮೊಗಳಲ್ಲಿ ಪ್ರಾಣಿಗಳ ಮಾಂಸವನ್ನು ಬಳಸಲಾಗಿದೆಯಾ ಅಥವಾ ಇಲ್ಲವೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ. ನಾಯಿಯ ತಲೆಯನ್ನು ಹೋಲುವ ಮಾಂಸವನ್ನು ಪಶುವೈದ್ಯಕೀಯ ಇಲಾಖೆಗೆ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಇದನ್ನು ದೃಢಪಡಿಸಲಾಗುತ್ತದೆ. ಇದಲ್ಲದೆ ಮೊಮೊಸ್, ಸ್ಪ್ರಿಂಗ್ ರೋಲ್ಸ್ ಮತ್ತು ಚಟ್ನಿಯ ಮಾದರಿಗಳನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.












Click it and Unblock the Notifications