ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಜೊತೆಯಾದ ಡಿಎಂಕೆ ನಾಯಕಿ ಕನಿಮೋಳಿ
ನವದೆಹಲಿ, ಡಿಸೆಂಬರ್ 23: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ರಾಷ್ಟ್ರ ರಾಜಧಾನಿಯತ್ತ ಹೆಜ್ಜೆ ಇಟ್ಟಿದೆ. ಈಗಾಗಲೇ ಹರಿಯಾಣದಲ್ಲಿ ಸಾಗುತ್ತಿರುವ ಯಾತ್ರೆಗೆ ಅಪಾರ ಜನಬೆಂಬಲ ದೊರೆಯುತ್ತಿದೆ. ನಾಳೆ (ಡಿಸೆಂಬರ್ 24) ರಾಷ್ಟ್ರ ರಾಜಧಾನಿಯನ್ನು ತಲುಪಲಿರುವ ಯಾತ್ರೆ ಅದ್ದೂರಿ ಸ್ವಾಗತಕ್ಕೆ ಸಾಕ್ಷಿಯಾಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ದೆಹಲಿಯಲ್ಲಿ ಪ್ರಮುಖ ಮಾರ್ಗಗಳಲ್ಲಿ ಸಾಗುವ ಯಾತ್ರೆಯು ಕೆಂಪು ಕೋಟೆಗೆ ತಲುಪಲಿದೆ. ಅಲ್ಲಿಂದ ರಾಜ್‌ಘಾಟ್‌ಗೆ ತೆರಳಲಿದೆ. ರಾಹುಲ್ ಗಾಂಧಿ ಅವರು ರಾಷ್ಟ್ರ ನಾಯಕರ ಸಮಾಧಿಗಳಿಗೆ ಭೇಟಿ ನಮನ ಸಲ್ಲಿಸಲಿದ್ದಾರೆ ಎಂದು ಪಕ್ಷದ ಅಧಿಕೃತ ಮೂಲಗಳು ಹೇಳಿವೆ.
ದೆಹಲಿ ಸಮೀಪಿಸುತ್ತಿದ್ದಂತೆ ಯಾತ್ರೆಯು ಹೈ-ವೋಲ್ಟೇಜ್ ಪೊಲಿಟಿಕಲ್ ಇವೆಂಟ್ ಆಗಿ ಮಾರ್ಪಡುತ್ತಿದೆ. ದೇಶದ ಪ್ರಮುಖ ನಾಯಕರು ಯಾತ್ರೆಗೆ ಜೊತೆಯಾಗುತ್ತಿದ್ದಾರೆ.

ಇಂದು ಹರಿಯಾಣದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಡಿಎಂಕೆ ನಾಯಕಿ, ಸಂಸದೆ ಕನಿಮೋಳಿ ಭಾಗವಹಿಸಿದ್ದಾರೆ.
#BharatJodoYatra welcomes Member of Parliament and DMK leader Kanimozhi ji. @KanimozhiDMK
— Bharat Jodo (@bharatjodo) December 23, 2022
Walking together for India.🇮🇳 pic.twitter.com/cvIMXBdTa5
ಕನಿಮೋಳಿ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ. ಜನರತ್ತ ನಗುತ್ತಲೇ ಕೈಬೀಸುತ್ತಿರುವ ಫೋಟೋಗಳನ್ನು 'ಭಾರತ್ ಜೋಡೋ' ಯಾತ್ರೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತ್ ಜೋಡೋ ಯಾತ್ರೆಗೆ ಜೊತೆಯಾಗಿರುವ ಕನಿಮೋಳಿ ಅವರಿಗೆ ಸ್ವಾಗತವೆಂದು ಟ್ವೀಟ್ ಮಾಡಲಾಗಿದೆ.

ನಾಳೆ ದೆಹಲಿಯಲ್ಲಿ ಸಾಗಲಿರುವ ಯಾತ್ರೆಯಲ್ಲಿ ಹೆಸರಾಂತ ಚಿತ್ರನಟ ಹಾಗೂ ರಾಜಕೀಯ ಮುಖಂಡ ಕಮಲ್ ಹಾಸನ್ ಜೊತೆಯಾಗುವ ಸಾಧ್ಯತೆ ಇದೆ. ಕಮಲ್ ಹಾಸನ್ ಅವರು ಬಿಜೆಪಿ ಹಾಗೂ ಮೋದಿ ವಿಚಾರದಾರೆಗೆ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ಹೀಗಾಗಿ, ಯಾತ್ರೆಯಲ್ಲಿ ಕಮಲ್ ಹಾಸನ್ ಅವರು ಪಾಲ್ಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ಈಗಾಗಲೇ 100 ದಿನಗಳನ್ನು ಪೂರೈಸಿದೆ. ಈ ಯಾತ್ರೆಯ ವಿಶೇಷವೆಂದರೆ, ಕೇವಲ ಕಾಂಗ್ರೆಸ್ ನಾಯಕರಷ್ಟೇ ಅಲ್ಲದೇ, ಬೇರೆ ಪಕ್ಷಗಳ ನಾಯಕರು ಭಾಗಿಯಾಗಿರುವುದು. ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದಾಗ, ಶಿವಸೇನೆ ಯುವನೇತಾರ ಆದಿತ್ಯ ಠಾಕ್ರೆ ಹಾಗೂ ಎನ್‌ಸಿಪಿ ನಾಯಕಿ, ಸಂಸದೆ ಸುಪ್ರಿಯಾ ಸುಳೆ ಅವರು ರಾಹುಲ್ ಜೊತೆ ಹೆಜ್ಜೆ ಹಾಕಿದ್ದರು. ಬರಹಗಾರರು, ಸಾಹಿತಿಗಳು, ಸಿನಿಮಾ ನಟರು, ಕಲಾವಿದರು, ಸಾಮಾಜಿಕ ಹೋರಾಟಗಾರರು, ಕಾರ್ಮಿಕರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಯು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಸುಮಾರು 3500 ಕಿಮೀಗೂ ಅಧಿಕ ದೂರ ಕ್ರಮಿಸಲಿದೆ. ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣಗಳಲ್ಲಿ ಯಾತ್ರೆ ಸಾಗಿದೆ.












Click it and Unblock the Notifications