KPCC: ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ: ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಅಹಮದಾಬಾದ್, ಏಪ್ರಿಲ್ 09: ಕಳೆದ ಬೆಳಗಾವಿ ಅಧಿವೇಶನದ ವೇಳೆ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಸೂಚನೆ ನೀಡಲಾಗಿತ್ತು. ಬ್ಲಾಕ್, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಅಹಮದಾಬಾದ್ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಪಕ್ಷ ಸಂಘಟನೆಯ ವಿಚಾರದಲ್ಲಿ ಒಂದೊಂದೆ ಬದಲಾವಣೆಗಳನ್ನು ತರಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿ ಇನ್ನೂ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರು ಚರ್ಚೆ ನಡೆಸಿ ಒಟ್ಟಿಗೆ ಕೆಲಸ ಮಾಡುವುದಕ್ಕೆ ಈ ಸಮಾವೇಶ ಮುನ್ನುಡಿ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಲವಾರು ವಿಚಾರಗಳು ಸೇರಿದಂತೆ ಪಕ್ಷದ ಎಲ್ಲಾ ಘಟಕಗಳ ಬಲವರ್ಧನೆ ಬಗ್ಗೆ ಚರ್ಚೆ ಮಾಡಲಾಗುವುದು. ಕಳೆದ ವಾರ ದೆಹಲಿಯಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರ ಸಭೆ ನಡೆಸಲಾಗಿತ್ತು. 1924 ರಲ್ಲಿ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಂಡು 100 ವರ್ಷಗಳು ಸಂದಿವೆ. ಗಾಂಧಿ ಅವರು ಏಕ ನಾಯಕತ್ವದಲ್ಲಿ ನಂಬಿಕೆ ಇಟ್ಟವರಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟು ನಡೆದವರು ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಗೆಲುವು ಗುಜರಾತಿನಿಂದ ಪ್ರಾರಂಭವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಖಂಡಿತವಾಗಿಯೂ ಆಗಲಿದೆ. ಜೊತೆಗೂಡುವುದು ಆರಂಭ, ಜೊತೆಗೂಡಿ ನಡೆಯುವುದು ಪ್ರಗತಿ ಎನ್ನುವ ಮಾತನ್ನು ನಾನು ಪುನರುಚ್ಚರಿಸುತ್ತೇನೆ ಎಂದರು. ಬಿಜೆಪಿಯವರ ಜನಾಕ್ರೋಶ ಯಾತ್ರೆಯನ್ನು ಸ್ವಾಗತಿಸುತ್ತೇನೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಜನರಿಗೆ ಇರುವ ಆಕ್ರೋಶ ಈ ಯಾತ್ರೆ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಅರ್ಥವಾಗಲಿ. ಅವರ ಸರ್ಕಾರದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಪರಂಪರೆಯನ್ನು ಹೊಂದಿರುವ ಅಹ್ಮದಾಬಾದ್ ನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಐತಿಹಾಸಿಕ ಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ನಮ್ಮ ಗಣರಾಜ್ಯ ಹಲವು ಅಪಾಯಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ , ಈ ಸಭೆಯು ಆಧುನಿಕ ಭಾರತ ನಿರ್ಮಾಣದ ಮೂಲತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಪುನ: ಜೀವ ತುಂಬಲಿದೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಹಾಗೂಸೋನಿಯಾ ಜೀ ಅವರ ನಾಯಕತ್ವದಲ್ಲಿ, ನಮ್ಮ ಪಕ್ಷ ಚುನಾವಣೆಗೆ ಸಜ್ಜಾಗುವುದರ ಜೊತೆಗೆ ನಾವು ಭಾರತದ ಪರಿಕಲ್ಪನೆಯನ್ನು ಮರುಸ್ಥಾಪಿಸಲು ಸಿದ್ಧತೆ ನಡೆಸಿದ್ದೇವೆ. ಇದು ಕೇವಲ ಒಂದು ಸಭೆಯಲ್ಲ , ಇದೊಂದು ಭರವಸೆಯ ಆಂದೋಲನ. ಭಾರತದ ಪ್ರತಿಯೊಬ್ಬ ರೈತ, ಪ್ರತಿಯೊಬ್ಬ ಕಾರ್ಮಿಕ, ಪ್ರತಿಯೊಬ್ಬ ಯುವಕ , ಪ್ರತಿಯೊಬ್ಬ ಮಹಿಳೆ- ಘನತೆ ಹಾಗೂ ಅವಕಾಶಗಳನ್ನು ಬಯಸುವ ಪ್ರತಿಯೊಬ್ಬ ಭಾರತೀಯನ ಪರವಾಗಿ ಹೋರಾಡಲು ಕೈಗೊಳ್ಳುತ್ತಿರುವ ಸಾಮೂಹಿಕ ಪ್ರತಿಜ್ಞೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕಾಂಗ್ರೆಸ್ ಎಂದೂ ಅಧಿಕಾರದ ಬೆನ್ನು ಹತ್ತಿಲ್ಲ ಎಂಬುವುದನ್ನು ನಾವು ನೆನಪಿಡಬೇಕು. ನಾವು ಭಾರತಕ್ಕೆ ಸ್ಪಷ್ಟ ರೂಪುರೇಷೆಯನ್ನು ಒದಗಿಸಿದ್ದೇವೆ. ಈಗ ಮತ್ತದೇ ಧೈರ್ಯ, ಉತ್ಸಾಹ , ಸ್ಪಷ್ಟತೆ ಹಾಗೂ ಸಹಾನುಭೂತಿಯಿಂದ ಪುನ: ಈ ಕಾರ್ಯದಲ್ಲಿ ತೊಡಗುತ್ತೇವೆ. ನಮ್ಮ ನೆಚ್ಚಿನ ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ. ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ನಮ್ಮ ಸಂವಿಧಾನದ ಅಡಿಪಾಯಗಳು. ಈ ಅಡಿಪಾಯಗಳು ಇಂದು ಅಧಿಕಾರದ ಅಮಲು ಹಾಗೂ ನಿಯಂತ್ರಣದ ಗೀಳು ತುಂಬಿರುವ ಅಧಿಕಾರದ ಹಿಡಿತಕ್ಕೆ ಸಿಲುಕಿವೆ.
ಭಾರತಕ್ಕೆ ಆಹಾರ ನೀಡಲು ಬಿಸಿಲಿನಲ್ಲಿ ಶ್ರಮಿಸುವ ರೈತರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೈತರು ಬೀದಿಗಳಲ್ಲಿ ನಡೆಸಿದ ಹೋರಾಟ , ತಮ್ಮ ಮಕ್ಕಳನ್ನು ಕಳೆದುಕೊಂಡ ರೈತರ ಕೂಗಿಗೆ ಮೌನದ ಹಾಗೂ ಗುಂಡಿನ ಪ್ರತ್ಯುತ್ತರ ದೊರಕಿದೆ. ಭರವಸೆಗಳನ್ನು ನೀಡಲಾದರೂ , ಒಂದನ್ನೂ ಇದುವರೆಗೆ ಈಡೇರಿಸಲಾಗಿಲ್ಲ. ನಮ್ಮ ಮಹಿಳೆಯರು- ತಾಯಂದಿರು, ಅಕ್ಕತಂಗಿಯರು, ಹೆಣ್ಣುಮಕ್ಕಳು- ಸುರಕ್ಷತೆ , ಘನತೆ ಹಾಗೂ ಸಮಾನ ಅವಕಾಶಗಳ ಬೇಡಿಕೆಯಿರಿಸಿದ್ದಾರೆ. ಆದರೆ ಮೋದಿಯವರ ಭಾರತದಲ್ಲಿ, ಅವರ ಹೋರಾಟದ ಹಕ್ಕನ್ನೂ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಮಣಿಪುರದಿಂದ ಹತ್ರಾಸ್ ನವರೆಗೂ , ಅವರ ನೋವುಗಳನ್ನು ಕಡೆಗಣಿಸಿ, ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಹೇಳಿದರು.
ಶತಮಾನಗಳಿಂದ ಅನ್ಯಾಯದ ವಿರುದ್ಧ ಹೋರಾಡುತ್ತಾ ಬಂದಿರುವ ನಮ್ಮ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಇನ್ನಷ್ಟು ಅಂಚಿಗೆ ತಳ್ಳಲಾಗುತ್ತಿದೆ. ದ್ವೇಷದಿಂದ ಸಾಮಾಜಿಕ ವ್ಯವಸ್ಥೆಯನ್ನು ಘಾಸಿಗೊಳಿಸಲಾಗಿದೆ. ಅಭಿವೃದ್ಧಿಯ ರಾಜಕಾರಣವನ್ನು, ವಿಭಜಿಸುವ ರಾಜಕಾರಣವನ್ನಾಗಿ ಬದಲಿಸಲಾಗುತ್ತಿದೆ.ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಲೆ ಏರಿಕೆ ಹೆಚ್ಚುತ್ತಿವೆ. 'ಅಚ್ಛೇ ದಿನ್' ಎಂಬ ಭರವಸೆ ಯೆಂಬುದು, ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯವಾಗಿದೆ.
ಇದು ನಮಗೆ ಭರವಸೆ ನೀಡಲಾಗಿದ್ದ ನವ ಭಾರತವೇ? ಅಥವಾ ಸ್ವಾತಂತ್ರ್ಯವನ್ನುಭಯ ಆಕ್ರಮಿಸಿರುವ, ಕಾರ್ಯಕ್ಷಮತೆಯನ್ನು ಪ್ರಚಾರ ಆಕ್ರಮಿಸಿರುವಂತಹ ಒಡೆದ ಭಾರತವೇ? ನಮ್ಮಲ್ಲಿ ಸ್ಪಷ್ಟತೆ ಇರಬೇಕು: ಇದು ಕೇವಲ ಆಡಳಿತದ ಬಿಕ್ಕಟ್ಟಲ್ಲ. ಇದು ನೈತಿಕತೆಯ ಬಿಕ್ಕಟ್ಟು. ತ್ಯಾಗ ಹಾಗೂ ಸೇವೆಯ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮಾತ್ರ , ದೇಶದ ಮೇಲಾಗಿರುವ ಈ ಗಾಯವನ್ನು ಗುಣಪಡಿಸುವ ಹಾಗೂ ಈ ಗಣರಾಜ್ಯವನ್ನು ಮರುನಿರ್ಮಿಸುವ ಶಕ್ತಿಯನ್ನು ಹೊಂದಿದೆ.
ಇಂದು ಭಾರತ ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ- ಸಂವಿಧಾನಿಕ ಅಪಾಯವನ್ನೂ ಎದುರಿಸುತ್ತಿದೆ. ಭಾರತೀಯ ಜನತಾ ಪಕ್ಷವೂ ಕೇವಲ ಅಡಳಿತವನ್ನು ನಡೆಸದೇ ,ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಒಂದೊಮ್ಮೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಹೆಸರಾಗಿದ್ದ ಚುನಾವಣಾ ಆಯೋಗವು , ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದ್ದು, ಬಿಜೆಪಿಯ ಅಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡೆಗಣಿಸುವ ಜೊತೆಗೆ ಪುರಸ್ಕರಿಸಲಾಗುತ್ತಿದೆ ಎಂದರು.












Click it and Unblock the Notifications