Free Toll: ಈ ಟೋಲ್‌ನಲ್ಲಿ ವಾಹನಗಳಿಗೆ ಶುಲ್ಕವಿಲ್ಲದೆ ಪ್ರಯಾಣಕ್ಕೆ ಅವಕಾಶ
ದೀಪಾವಳಿ ಹಬ್ಬದ ಪ್ರಯುಕ್ತ ಕಂಪನಿಗಳಲ್ಲಿ ಬೋನಸ್, ದುಬಾರಿ ಗಿಫ್ಟ್ ಕೊಡೋದು ಕೇಳಿರುತ್ತೀರಿ. ಆದ್ರೆ ಎಲ್ಲಾದ್ರೂ ವಾಹನಗಳಲ್ಲಿ ಟೋಲ್‌ರಹಿತ ಪ್ರಯಾಣದ ಸೇವೆ ಕೊಡೋದನ್ನು ನೋಡಿದ್ದೀರಾ? ಹೌದು ದೀಪಾವಳಿ ಹಬ್ಬದ ಪ್ರಯುಕ್ತ ಟೋಲ್‌ಗೇಟ್‌ನಲ್ಲಿ ವಾಹನಗಳಿಗೆ ಯಾವುದೇ ಶುಲ್ಕವಿಲ್ಲದೆ ಪ್ರಯಾಣದ ಅವಕಾಶ ಕಲ್ಪಿಸಿದ್ದಾರೆ. ಟೋಲ್ ಸಿಬ್ಬಂದಿಯೇ ಗೇಟ್‌ಗಳನ್ನು ತೆರೆದು ವಾಹನ ಮಾಲೀಕರಿಗೆ ಈ ಸೇವೆ ನೀಡಿದ್ದಾರೆ. ಆದರೆ ಅಸಲಿ ವಿಚಾರ ಬೇರೆಯೇ ಇದೆ.
ದೀಪಾವಳಿ ಹಬ್ಬದ ಹಿನ್ನೆಲೆ ಬೋನಸ್ ವಿಚಾರವಾಗಿ ಅಸಮಾಧಾನಗೊಂಡ ಟೋಲ್ ಸಿಬ್ಬಂದಿ ಎಲ್ಲ ಗೇಟ್‌ಗಳನ್ನು ತೆರೆದಿದ್ದಾರೆ. ಇದರಿಂದ ಸಾವಿರಾರು ವಾಹನಗಳು ಯಾವುದೇ ಟೋಲ್ ಪಾವತಿಸದೆ ಉಚಿತವಾಗಿ ಸಂಚರಿಸಿವೆ. ಹೌದು, ಉತ್ತರ ಪ್ರದೇಶದ ಫತೇಹಾಬಾದ್‌ನಲ್ಲಿರುವ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಟೋಲ್ ಸಿಬ್ಬಂದಿ ಬೋನಸ್ ವಿಚಾರವಾಗಿ ಈ ರೀತಿ ವಿಭಿನ್ನವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಸಂಚರಿಸಿದ್ದು, ಟೋಲ್ ಕಾರ್ಯಾಚರಣೆ ಮತ್ತು ಸಂಚಾರಕ್ಕೆ ದೊಡ್ಡ ಸಮಸ್ಯೆ ಎದುರಾಗಿ ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.

ಶ್ರೀಸೈನ್ ಆಂಡ್ ದಾತಾರ್ ಕಂಪನಿಯಿಂದ ನಿರ್ವಹಿಸಲ್ಪಡುವ ಫತೇಹಾಬಾದ್ ಟೋಲ್ ಪ್ಲಾಜಾದ ಉದ್ಯೋಗಿಗಳು ದೀಪಾವಳಿ ಬೋನಸ್ ಆಗಿ ಕೇವಲ 1,100 ರೂ.ಗಳನ್ನು ಪಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಅವರು ಟೋಲ್‌ಗೇಟ್ ತೆರೆದು ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿ ಈ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಹೆಚ್ಚಿನ ಬೋನಸ್ ನೀಡುವಂತೆ ಒತ್ತಾಯಿಸಿ ಸಿಬ್ಬಂದಿ ತಮ್ಮ ಕೆಲಸವನ್ನು ನಿಲ್ಲಿಸಿ, ಎಲ್ಲ ಟೋಲ್ ಗೇಟ್‌ಗಳನ್ನು ತೆರೆದು ವಾಹನಗಳು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾವಿರಾರು ವಾಹನಗಳು ಶುಲ್ಕವಿಲ್ಲದೆ ದಾಟುತ್ತಿದ್ದಂತೆ, ಟೋಲ್ ಅಧಿಕಾರಿಗಳು ಬೇರೆ ಟೋಲ್ ಪ್ಲಾಜಾಗಳಿಂದ ಸಿಬ್ಬಂದಿಯನ್ನು ನಿಯೋಜಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಬದಲಿ ವಾಹನಗಳು ಸ್ಥಳಾಂತರಗೊಳ್ಳದಂತೆ ತಡೆದು ಪರಿಸ್ಥಿತಿ ಹದಗೆಟ್ಟಿತ್ತು. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
ಪ್ರತಿಭಟನೆಯಿಂದ ಭಾರೀ ನಷ್ಟ
ಪೊಲೀಸರು ಸ್ಥಳಕ್ಕೆ ಆಗಮಿಸಿ ಕಂಪನಿ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತುಕತೆಗೆ ಅನುಕೂಲ ಮಾಡಿಕೊಟ್ಟರು. ಚರ್ಚೆಗಳ ನಂತರ, ಕಂಪನಿಯು ಉದ್ಯೋಗಿಗಳಿಗೆ ಭರವಸೆ ನೀಡಿತು. ತಕ್ಷಣದ ಪರಿಹಾರವಾಗಿ ಶೇ.10 ರಷ್ಟು ವೇತನ ಹೆಚ್ಚಳವನ್ನು ಸಹ ಘೋಷಿಸಿತು. ಇದಾದ ನಂತರ ಸಿಬ್ಬಂದಿ ಮತ್ತೆ ಕೆಲಸ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಅಡಚಣೆಯ ನಂತರ ಸಾಮಾನ್ಯ ಕಾರ್ಯಾಚರಣೆ ಮುಂದುವರಿಯಿತು. ಈ ಪ್ರತಿಭಟನೆಯಿಂದಾಗಿ ಸಾವಿರಾರು ವಾಹನಗಳು ಟೋಲ್ ಪಾವತಿಸದೆ ಸಂಚರಿಸಿರುವುದು ಕೂಡ ಭಾರೀ ನಷ್ಟ ಉಂಟು ಮಾಡಿದೆ.
ಟೋಲ್ ಬೂತ್‌ಗಳ ಮೂಲಕ ವಾಹನಗಳು ಉಚಿತವಾಗಿ ಚಲಿಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಪ್ರತಿಭಟನೆಯಿಂದ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದ ಪ್ರಮುಖ ಮಾರ್ಗವಾದ ಈ ಎಕ್ಸ್‌ಪ್ರೆಸ್‌ವೇ, ಆಗ್ರಾ ಮತ್ತು ಲಕ್ನೋ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ದೆಹಲಿ ಮತ್ತು ಎನ್‌ಸಿಆರ್‌ಗೂ ಸಂಪರ್ಕ ಕಲ್ಪಿಸುತ್ತದೆ.












Click it and Unblock the Notifications