Cauvery River: ನೀರಿಲ್ಲದೆ ಒಣಗುತ್ತಿದೆ ತಮಿಳುನಾಡಿನ ಪ್ರಮುಖ ಜಲಾಶಯ
ಒಂದು ಕಡೆ ತಮಿಳುನಾಡು ಕಾವೇರಿ ನೀರಿಗಾಗಿ ಕರ್ನಾಟಕದ ಜೊತೆ ಕಿರಿಕ್ ತೆಗೆದಿದೆ. ಹೀಗೆ ಕಾವೇರಿ ಪ್ರಾಧಿಕಾರದ ಮೂಲಕ ಆದೇಶ ತಂದು ಕಾವೇರಿ ನೀರು ಪಡೆದುಕೊಂಡಿದೆ. ಆದರೆ ಇದು ಎರಡೂ ರಾಜ್ಯದ ನಡುವೆ ಕಿಚ್ಚು ಹೊತ್ತಿಸಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ ತಮಿಳುನಾಡಿಗೂ ದೊಡ್ಡ ಆಘಾತ ಎದುರಾಗಿದೆ.
ಹೌದು ತಮಿಳುನಾಡು ಕೂಡ ಈ ಬಾರಿ ಬರದ ಬೇಗೆಯಲ್ಲಿ ನರಳಾಡುವ ಸ್ಥಿತಿ ಇದೆ. ಮಳೆ ಕೊರತೆ ಕಾರಣ ತಮಿಳುನಾಡು ಜಲಾಶಯಗಳು ಕೂಡ ಒಣಗುತ್ತಿದ್ದು, ಅದರಲ್ಲೂ ನೆರೆಯ ರಾಜ್ಯದ ಜೀವನಾಡಿ ಮೆಟ್ಟೂರು ಜಲಾಶಯ ಭಾಗಶಃ ಖಾಲಿಯಾಗಿ ಹೋಗಿದೆ. ಈ ಹಿನ್ನೆಲೆ ಕುಡಿಯುವ ನೀರಿಗೂ ಮುಂದೆ ಸಮಸ್ಯೆ ಎದುರಾಗುವ ಆತಂಕ ಆವರಿಸಿದೆ. ಹಾಗಾದರೆ ಈಗ ಮೆಟ್ಟೂರು ಡ್ಯಾಂನಲ್ಲಿ ಉಳಿದಿರುವ ನೀರು ಎಷ್ಟು? ಮತ್ತೊಮ್ಮೆ ಕಾವೇರಿ ವಿಚಾರಕ್ಕೆ ನೆರೆ ರಾಜ್ಯ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ವಾರ್ ಆಗುತ್ತಾ?

ಮೆಟ್ಟೂರು ಜಲಾಶಯ ಖಾಲಿ ಖಾಲಿ
ಅಂದಹಾಗೆ ತಮಿಳುನಾಡಿನ ಸುಮಾರು 24 ಜಿಲ್ಲೆಗಳು ಅವಲಂಬಿಸಿರುವುದು ಇದೇ ಡ್ಯಾಂನ ನೀರನ್ನು. ಹೀಗಾಗಿ ಕಾವೇರಿ ವಿಚಾರಕ್ಕೆ ತಮಿಳುನಾಡು ದೊಡ್ಡ ಕಿರಿಕ್ ತೆಗೆಯುತ್ತೆ. ಆದರೆ ಕುಡಿಯುವ ನೀರನ್ನ ಮೊದಲು ರಕ್ಷಣೆ ಮಾಡುವ ಬದಲು, ತಮಿಳುನಾಡು ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಎಲ್ಲಾ ಕಿರಿಕಿರಿ ನಡುವೆ ಈಗ ಮೆಟ್ಟೂರು ಡ್ಯಾಂ ನೀರಿನ ಮಟ್ಟ 32 ಅಡಿಗೆ ಕುಸಿದಿದೆ. ಅಂದ್ರೆ 120 ಅಡಿ ಎತ್ತರ ಇರುವ ಮೆಟ್ಟೂರು ಜಲಾಶಯದ ಗರಿಷ್ಠ ಮಟ್ಟ ಈಗ ಕನಿಷ್ಠ ಹಂತಕ್ಕೆ ತಲುಪಿದೆ. ಹೀಗಾಗಿ ಮುಂದೆ ಏನಪ್ಪಾ ಕಥೆ ಎಂಬ ಭಯ ಶುರುವಾಗಿದೆ.
ಈಗ ಎಷ್ಟು ನೀರು ಬಾಕಿ ಇದೆ?
ಇನ್ನು ಮೆಟ್ಟೂರು ಜಲಾಶಯದಲ್ಲಿ ಒಟ್ಟು 93.47 ಟಿಎಂಸಿ ಸಾಮರ್ಥ್ಯ ಇದ್ದರೆ ಈಗ ಬರೀ 8.7 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗೆ 1 ತಿಂಗಳ ಕಾಲ ಬರೋಬ್ಬರಿ 6,500 ಕ್ಯೂಸೆಕ್ ನೀರನ್ನು ಕೃಷಿಗೆ ಹರಿಸಿದ ಕಾರಣ ಡ್ಯಾಂ ಖಾಲಿ ಆಗುತ್ತಿದೆ. ಹೀಗಾಗಿ ಈಗ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಲಾಗಿದೆ. ದಿಢೀರ್ 4,000 ಕ್ಯೂಸೆಕ್‌ಗೆ ನೀರು ಬಿಡುಗಡೆ ಪ್ರಮಾಣ ಇಳಿಸಲಾಗಿದೆ. ಈ ಮೂಲಕ ಕುಡಿಯುವ ನೀರಿನ ರಕ್ಷಣೆಗೆ ಈಗ ತಮಿಳುನಾಡು ಸರ್ಕಾರ ಎಚ್ಚೆತ್ತುಕೊಂಡಿದೆ.

ಒಟ್ನಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನೀರಿನ ತಿಕ್ಕಾಟಕ್ಕೆ ಒಂದು ಅಂತ್ಯ ಹಾಡಬೇಕಿದೆ. ಇದಕ್ಕೆಲ್ಲಾ ಮೇಕೆದಾಟು ಜಲಾಶಯ ಸೂಕ್ತ ಉತ್ತರ ನೀಡಬಲ್ಲದು. ಹೀಗಾಗಿ ಆದಷ್ಟು ಬೇಗ ಮೇಕದಾಟು ಡ್ಯಾಂ ನಿರ್ಮಾಣವಾಗಲಿ ಎಂಬ ಸಲಹೆಯನ್ನ ತಜ್ಞರು ಇದೀಗ ನೀಡುತ್ತಿದ್ದಾರೆ. ಆದರೆ ಇದು ನೆರವೇರುತ್ತಾ? ಇಲ್ಲ ತಮಿಳುನಾಡು & ಕರ್ನಾಟಕದ ಕಾವೇರಿ ಕಿತ್ತಾಟ ಹೀಗೆ ಮುಂದುವರಿಯುತ್ತಾ? ಕಾದು ನೋಡಬೇಕಿದೆ.












Click it and Unblock the Notifications