Weather News: ಉತ್ತರ ಭಾರತದಾದ್ಯಂತ ದಟ್ಟವಾದ ಮಂಜು: ದೆಹಲಿಯಲ್ಲಿ ವಿಮಾನ, ರೈಲುಗಳ ಮೇಲೆ ಪರಿಣಾಮ
ದೆಹಲಿ ಜನವರಿ 3: ದೇಶದಾದ್ಯಂತ ಚಳಿಗಾಲ ಉತ್ತುಂಗದಲ್ಲಿದೆ. ದೆಹಲಿ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ತೀವ್ರ ಚಳಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಪ್ರಸ್ತುತ ದೆಹಲಿ ಚಳಿಗಾಲದ ಜೊತೆಗೆ ದಟ್ಟವಾದ ಮಂಜಿನ ಹೊದಿಕೆಯಲ್ಲಿ ಮರೆಯಾಗಿವೆ. ಪ್ರತಿ ವರ್ಷ ಚಳಿಗಾಲದಲ್ಲಿ ಈ ಮಂಜಿನ ನೋಟ ಸಾಮಾನ್ಯವಾಗಿದ್ದರೂ ಈ ಬಾರಿ ಜನವರಿ ಆರಂಭದಲ್ಲಿ ಮಂಜು ಹೆಚ್ಚಾಗಿದೆ. ದಟ್ಟವಾದ ಮಂಜಿನಿಂದಾಗಿ ಗೋಚರತೆ ಗಮನಾರ್ಹವಾಗಿ ಕಡಿಮೆಯಾಗಿದೆ. ಶೀತಗಾಳಿ ಮತ್ತು ತಾಪಮಾನ ಕುಸಿತದಿಂದ ಜನರ ಸಮಸ್ಯೆಗಳು ಹೆಚ್ಚಿವೆ. ದಟ್ಟವಾದ ಮಂಜು ವಾಹನ, ವಿಮಾನ ಹಾಗೂ ರೈಲುಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದೆ.
ಜನವರಿ 8ರವರೆಗೆ ದೆಹಲಿಯಲ್ಲಿ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದ್ದು, ಜನವರಿ 6ರಂದು ಲಘು ಮಳೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಬೆಳಗಿನ ತನಕ ದೆಹಲಿಯ ತಾಪಮಾನ 9.6 ಡಿಗ್ರಿ ಸೆಲ್ಸಿಯಸ್ ಇದೆ, ರಾಷ್ಟ್ರ ರಾಜಧಾನಿಯಲ್ಲಿ ಸತತ ಐದನೇ ದಿನವೂ ಇದೇ ತಾಪಮಾನ ಮುಂದುವರೆದಿದೆ.

ನಾಡಿನಲ್ಲಿ ತೀವ್ರ ಚಳಿಯ ನಡುವೆ ಶುಕ್ರವಾರ ದಟ್ಟವಾದ ಮಂಜು ಕವಿದಿದ್ದು ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಕಾಣಿಸಿಕೊಂಡಿದೆ. ಇದರಿಂದ ಗೋಚರತೆ ಕ್ಷೀಣಿಸಿ ರೈಲು ಮತ್ತು ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಇದು ಸಾಮಾನ್ಯಕ್ಕಿಂತ ಮೂರು ಡಿಗ್ರಿ ಕಡಿಮೆಯಾಗಿದೆ. ಅದೇ ರೀತಿ ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ಇತ್ತು.
ವಿಮಾನ ಹಾರಾಟಕ್ಕೆ ತೊಂದರೆ
ದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ಇಂಡಿಗೋ ಮತ್ತು ಏರ್ ಇಂಡಿಯಾ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟದ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ದಟ್ಟವಾದ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳಿಗೆ ಸರಾಸರಿ ಐದು ನಿಮಿಷಗಳು ಮತ್ತು ನಿರ್ಗಮಿಸುವ ವಿಮಾನಗಳಿಗೆ 11 ನಿಮಿಷಗಳ ವಿಳಂಬವಾಗಿದೆ.

ಅಲ್ಲದೆ ಅಮೃತಸರ ಮತ್ತು ಗುವಾಹಟಿಯಿಂದ ಬರುವ ಎಲ್ಲಾ ವಿಮಾನಗಳ ಮೇಲೆ ದಟ್ಟ ಮಂಜು ಪರಿಣಾಮ ಬೀರಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ. ಹೀಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ದೆಹಲಿ, ಅಮೃತಸರ, ಲಕ್ನೋ, ಬೆಂಗಳೂರು ಮತ್ತು ಗುವಾಹಟಿ ಮಾರ್ಗಗಳ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಪ್ರಯಾಣ ಸಲಹೆಯನ್ನು ನೀಡಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವಾಗ ಇತ್ತೀಚಿನ ನವೀಕರಣಗಳನ್ನು ಗಮನಿಸಬೇಕು ಎಂದು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮನವಿ ಮಾಡಿವೆ. ಗೋಚರತೆ ಕಳಪೆಯಾಗಿದ್ದರೆ ವಿಮಾನಗಳನ್ನು ರದ್ದುಗೊಳಿಸಬಹುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ. ಇನ್ನೂ ದಟ್ಟವಾದ ಮಂಜು ರೈಲು ಸಂಚಾರದ ಮೇಲೂ ಪರಿಣಾಮ ಬೀರಿದೆ.
ತಡವಾಗಿ ರೈಲು ಸಂಚಾರ
ಗೋಚರತೆ ಕಡಿಮೆಯಾದ ಪರಿಣಾಮ ದೆಹಲಿಯಿಂದ ಹೊರಡುವ ಮತ್ತು ದೆಹಲಿಗೆ ಬರುವ ರೈಲುಗಳು ಸಹ ತಡವಾಗಿ ಸಂಚಾರ ಮಾಡುತ್ತಿವೆ. ಕೆಲವು ಮಾರ್ಗಗಳಲ್ಲಿ ಸಮಯವನ್ನು ಬದಲಾಯಿಸಲಾಗಿದೆ. ಶುಕ್ರವಾರ ದೆಹಲಿ, ಲಕ್ನೋ, ಬೆಂಗಳೂರು, ಅಮೃತಸರ ಮತ್ತು ಗುವಾಹಟಿಯಲ್ಲಿ ದಟ್ಟ ಮಂಜು ಕವಿದಿರುವ ಸಾಧ್ಯತೆ ಇದ್ದು ರೈಲುಗಳ ಸಂಚಾರ ತಡವಾಗುವ ಸಾಧ್ಯತೆ ಇದೆ.
ದೆಹಲಿ, ರಾಜಸ್ಥಾನದ ಕೋಟಾ, ಬುಂದಿ, ಸಿಕರ್, ಜುಂಜುನು, ಚುರು, ಶ್ರೀಗಂಗಾನಗರ ಮತ್ತು ಟೋಂಕ್, ಪಂಜಾಬ್‌ನ ಅಮೃತಸರ, ಗುರುದಾಸ್‌ಪುರ, ತರ್ನ್ ತರಣ್ ಮತ್ತು ಕಪುರ್ತಲಾ ಮತ್ತು ಹರಿಯಾಣದ ಕುರುಕ್ಷೇತ್ರ, ಅಂಬಾಲಾ ಮತ್ತು ಅಂಬಾಲಾದಲ್ಲಿ ದಟ್ಟವಾದ ಮಂಜು ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಯಮುನಾನಗರ ಹೆಚ್ಚು ಮಂಜು ಕವಿದಿರುವ ಎಚ್ಚರಿಕೆ ನೀಡಲಾಗಿದೆ.
ಹಿಮಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಭಾಗಗಳಲ್ಲಿ ಲಘು ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಶೀತಗಾಳಿಯ ಹಿನ್ನೆಲೆಯಲ್ಲಿ ಗೌತಮ ಬುದ್ಧನಗರದ ಆಡಳಿತ ಮಂಡಳಿಯು ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ 8ನೇ ತರಗತಿಯವರೆಗಿನ ತರಗತಿಗಳನ್ನು ಮುಂದೂಡಲು ಆದೇಶಿಸಿದೆ.
ಉತ್ತರ ರೈಲ್ವೆಯಿಂದ ಬಂದಿರುವ ಮಾಹಿತಿ ಪ್ರಕಾರ ಚಳಿ ಮತ್ತು ಮಂಜಿನಿಂದಾಗಿ ಗೋಚರತೆ ಕಡಿಮೆಯಾದ ಬೆನ್ನಲ್ಲೆ ಸುಮಾರು 43 ರೈಲುಗಳು ದೆಹಲಿಗೆ ಬಂದು ಹೋಗುವುದು ತಡವಾಗಿದೆ. ಇಲ್ಲಿಯವರೆಗೆ ಮೂರು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ರೈಲಿನ ಓಡಾಟದ ಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಪ್ರಯಾಣಿಕರು ಮನೆಯಿಂದ ಹೊರಹೋಗುವಂತೆ ರೈಲ್ವೆ ಮನವಿ ಮಾಡಿದೆ.
ವಾಹನ ಸಂಚಾರಕ್ಕೂ ತೊಂದರೆ
ದಟ್ಟವಾದ ಮಂಜಿನಿಂದ ವಿಮಾನ ಹಾಗೂ ರೈಲುಗಳ ಸಂಚಾರಕ್ಕೆ ಮಾತ್ರ ತೊಂದರೆಯಾಗಿರದೆ ವಾಹನಗಳ ಸಂಚಾರಕ್ಕೂ ತೊಂದರೆಯನ್ನುಂಟು ಮಾಡಿದೆ. ಬೆಳಗ್ಗೆ ದಟ್ಟವಾದ ಮಂಜು ಆವರಿಸಿ ರಸ್ತೆ ಗೋಚರಿಸದಂತಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಸಂಸ್ಯೆಯನ್ನುಂಟು ಮಾಡಿದೆ. ದಟ್ಟವಾದ ಮಂಜಿನಿಂದಾಗಿ ವಾಹನ ಸಂಚಾರಕ್ಕೂ ತಡವಾಗುತ್ತಿದ್ದು, ಗಮ್ಯಾ ಸ್ಥಳಗಳಿಗೆ ತಲುಪಲು ತಡವಾಗುತ್ತಿದೆ.












Click it and Unblock the Notifications