5 ರಾಜ್ಯಗಳ ಚುನಾವಣೆ: ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು

ಕ್ರಿಮಿನಲ್ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳ ಮೇಲಿನ ಆರೋಪಗಳು ಸಾಬೀತಾದರೆ ಅವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ನೀಡಿದ ತೀರ್ಪು ಕಳಂಕಿತರಿಗೆ ನುಂಗಲಾರದ ತುತ್ತಾಗಿದೆ.
ಈ ಮಧ್ಯೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆಯಾಗಿವೆ. ಶಾಸಕರಲ್ಲಿ ಶೇ. 43ರಷ್ಟು ಜನಪ್ರತಿನಿಧಿಗಳು ಅಪರಾಧ ಹಿನ್ನಲೆಯುಳ್ಳವರಾಗಿದ್ದಾರೆ. 2008ರ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಘೋಷಿಸಿಕೊಂಡಿರುವಂತೆ ಶೇ. 43ರಷ್ಟು ಶಾಸಕರು ಒಂದಿಲ್ಲೊಂದು ಅಪರಾಧ ಹಿನ್ನೆಲೆಯುಳ್ಳ ಶಾಸಕರಾಗಿದ್ದಾರೆ.
ರಾಷ್ಟ್ರೀಯ ಚುನಾವಣಾ ಕಣ್ಗಾವಲು ಮತ್ತು ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆ ಬಿಡುಗಡೆ ಮಾಡಿರುವ ದಾಖಲೆಗಳಂತೆ ನವದೆಹಲಿಯಲ್ಲಿರುವ ಶೇ. 43ರಷ್ಟು ಶಾಸಕರು ಕ್ರಿಮಿನಲ್ಲುಗಳು ಎಂಬುದು ಸಾಬೀತಾಗಿದೆ. ಮುಂದಿನ ತಿಂಗಳು ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿಯೂ ಕ್ರಿಮಿನಲ್ ಆರೋಪಗಳನ್ನು ಹೊತ್ತಿರುವ ಅನೇಕ ಮಂದಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಕೊಲೆ, ಕೊಲೆ ಯತ್ನ, ಅತ್ಯಾಚಾರ, ಮತ ಪೆಟ್ಟಿಗೆ ಅಪಹರಣ, ಭೂ ವಿವಾದ ಸೇರಿದಂತೆ ಅನೇಕ ಆರೋಪಗಳು ಇವರ ಮೇಲೆ ಇರುವುದು ಅಫಿಡೆವಿಟ್ ನಲ್ಲಿ ಕಂಡು ಬಂದಿದೆ. 5 ರಾಜ್ಯಗಳಾದ ದೆಹಲಿ, ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ತಾನ ಮತ್ತು ಮಿಜೋರಾಂಗಳಲ್ಲಿ ಸ್ಪರ್ಧಿಸಿದ್ದ ಒಟ್ಟು 6800 ಅಭ್ಯರ್ಥಿಗಳಲ್ಲಿ 879 (ಶೇ. 13ರಷ್ಟು) ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ.
ಇದರಲ್ಲಿ ಶೇ. 6ರಷ್ಟು ಅಭ್ಯರ್ಥಿಗಳು ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರು ಅಂದರೆ ಶೇ. 11ರಷ್ಟು ಶಾಸಕರು ಗಂಭೀರ ಸ್ವರೂಪದ ಆರೋಪಗಳಿಗೆ ಗುರಿಯಾಗಿದ್ದಾರೆ. ನಂತರದಲ್ಲಿ ದೆಹಲಿ, ಛತ್ತೀಸ್‌ಗಡ ಶೇ. 9ರಷ್ಟು, ಮಿಜೋರಾಂ ಶೇ. 7ರಷ್ಟು ಶಾಸಕರು ಇದೇ ಆರೋಪದಲ್ಲಿ ಸಿಲುಕಿದ್ದಾರೆ. ಪಕ್ಷಗಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿ ಶೇ. 35ರಷ್ಟು ಟಿಕೆಟ್ ಕ್ರಿಮಿನಲ್ ಅಭ್ಯರ್ಥಿಗಳಿಗೆ ನೀಡಿದ್ದರೆ ಕಾಂಗ್ರೆಸ್ ಶೇ. 20ರಷ್ಟು ನೀಡಿತ್ತು.












Click it and Unblock the Notifications