Rain Alert: ಭಾರೀ ಮಳೆಗೆ 04 ಸಾವು, 40 ವಿಮಾನಗಳ ಸಂಚಾರಕ್ಕೆ ಅಡಚಣೆ, ಹವಾಮಾನ ಮುನ್ಸೂಚನೆ
ದೆಹಲಿ, ಮೇ 02: ದೇಶದ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದ ಪೂರ್ವ ಮುಂಗಾರು ಮಳೆ ಇದೀಗ ದೆಹಲಿ ಸೇರಿದಂತೆ ದೇಶ ಉತ್ತರ ಭಾಗದಲ್ಲೂ ಸಕ್ರಿಯವಾಗಿದೆ. ದೆಹಲಿಯಲ್ಲಿ ನೆನ್ನೆ ತಡರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೆ ಭಾರೀ ಮಳೆ ದಾಖಲಾಗಿದೆ. ಗುಡುಗು ಸಹಿತ ಸುರಿದ ಆಲಿಕಲ್ಲು ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ವಿಮಾನ ಹಾರಾಟಕ್ಕೂ ತೊಂದರೆ ಆಗಿಲ್ಲ. ಭಾರೀ ಮಳೆಗೆ ನಾಲ್ಕು ಸಾವುಗಳು ಸಂಭವಿಸಿದೆ ಎಂದು ವರದಿ ಆಗಿದೆ.
ದೆಹಲಿ ಹಾಗೂ ಪಕ್ಕದ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಶುಕ್ರವಾರ ಬೆಳಗ್ಗೆ ಒಂದೇ ಸಮನೆ ಗುಡುಗು ಸಹಿತ ಮಳೆ ಬೀಸಲಾರಂಭಿಸಿತು. ಈ ಮೂಲಕ ಈವರೆಗೆ ಉಂಟಾಗಿದ್ದ ಶಾಖದ ಅಲೆ ವಾತಾವರಣ ಕೊನೆ ಆಯಿತು. ಬಿರುಗಾಳಿ ಸಹಿತ ಮಳೆ ಆಗಿದ್ದು, ಗಾಳಿಯ ಬೀಸುವಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸೃಷ್ಟಿಯಾಗಿರುವ ಹವಾಮಾನ ವೈಪರೀತ್ಯ ಕಾರಣದಿಂದಾಗಿ ಸುರಿದ ಭಾರಿ ಮಳೆ, ಗಾಳಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಸುಮಾರು 40 ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮಾರ್ಗ ಬದಲಾಯಿಸಲಾಯಿತು. ಅಲ್ಲದೇ ಇಲ್ಲಿಂದ ಹೊರಡಬೇಕಿದ್ದ ಸುಮಾರು 100 ವಿಮಾನಗಳ ಹಾರಾಟ ವಿಳಂಬವಾಯಿತು. ವಿಮಾನಯಾನ ಪ್ರಯಾಣಿಕರು ಪರದಾಡಿದರು.
ಬೀರುಗಾಳಿ ಸಹಿತ ಬಂದ ಮಳೇಗೆ ದ್ವಾರಕಾದ ಜಾಫರ್‌ಪುರ್ ಕಲಾನ್ ವ್ಯಾಪ್ತಿಯ ಗ್ರಾಮದಲ್ಲಿ ಬೃಹತ್ ಬೇವಿನ ಮರ ಕೊಳವೆ ಬಾವಿ ಮೇಲೆ ಬಿದ್ದ ಪರಿಣಾಮ 26 ವರ್ಷದ ಮಹಿಳೆ ಜ್ಯೋತಿ ಮತ್ತವರ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಅವರನ್ನು ರಕ್ಷಿಸಲು ಹರಸಾಹಸ ಪಟ್ಟರು ಅವರು ಇಲ್ಲಿನ ಆರ್‌ಟಿಆರ್‌ನಲ್ಲಿ ಮೃತಪಟ್ಟರು. ಮೃತರ ಪತಿಗೆ ಒಂದಷ್ಟು ಗಾಯಗಳಾಗಿವೆ.
ಶುಕ್ರವಾರ ದೆಹಲಿಗೆ ಅತ್ಯಧಿಕ ಮಳೆ ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಸದ್ಯ ಗಾಳಿಯ ಪ್ರಮಾಣ ತೀವ್ರಗತಿಯಲ್ಲಿ ಏರಿಕೆ ಆಗಿದೆ. ಪ್ರತಿ ಗಂಟೆಗೆ 70ರಿಂದ 80 ಕಿ.ಮೀ. ಗರಿಷ್ಠ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಹೈ ಅಲರ್ಟ್ ಕೊಡಲಾಗಿದೆ.

ಬಿರುಗಾಳಿ ವೇಗ ಹೆಚ್ಚಳ
ದೆಹಲಿಯಲ್ಲಿ ಬೇಸಿಗೆ ಆರಂಭದಿಂದಲೂ ವಿಪರೀತ ಸೆಕೆ, ಉಷ್ಣ ಅಲೆ ಕಂಡು ಬಂದಿತ್ತು. ಇದೀಗ ಒಂದೇ ಒಂದು ಜೋರು ಮಳೆಯಿಂದಾಗಿ ತ್ವರಿತ ಗತಿಯಲ್ಲಿ ಉಷ್ಣಾಂಶ ಕಡಿಮೆ ಆಗಿದೆ. ಸಫ್ದರ್‌ಜಂಗ್‌ನಲ್ಲಿ ಶುಕ್ರವಾರ ಬೆಳಗ್ಗೆ ಗಾಳಿಯ ವೇಗವು ಪ್ರತಿ ಗಂಟೆಗೆ 80 ಕಿ.ಮೀ. ತಲುಪಿತ್ತು. ಪಾಲಂನಲ್ಲಿ ಬೆಳಗ್ಗೆ 5.19 ಗಂಟೆಗೆ ಗಂಟೆಗೆ 74 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬಿಸಿತ್ತು.
ಅದೇ ರೀತಿ ಪ್ರಗತಿ ಮೈದಾನದಲ್ಲಿ ಪ್ರತಿ ಗಂಟೆಗೆ 78 ಕಿ.ಮೀ, ಜಾಫರ್‌ಪುರದಲ್ಲಿ ಗಂಟೆಗೆ 74 ಕಿ.ಮೀ., ಪಿತಾಂಪುರ ಮತ್ತು ಲೋದಿ ರಸ್ತೆ 59 ಕಿ.ಮೀ, ನಜಫ್‌ಗಢ 56 ಕಿ.ಮೀ., ಇಗ್ನೌ 52 ಕಿ.ಮೀ., ಫಾರ್ಮಾ ಸೈನ್ಸ್ 46 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.
3 ಗಂಟೆಗಳಲ್ಲಿ 80 ಮಿ.ಮೀ. ಮಳೆ
ದೆಹಲಿಯಲ್ಲಿ ಕೇವಲ ಮೂರು ಗಂಟೆಗಳಲ್ಲಿ, ಸುಮಾರು 80 ಮಿಲಿ ಮೀಟರ್ ಮಳೆ ಆಗಿದೆ. ಎಲ್ಲೆಲ್ಲಿ ಹೆಚ್ಚು ಮಳೆ ಆಗಿದೆ ಎಂದು ನೋಡುವುದಾದರೆ ಲೋಧಿ ರಸ್ತೆಯಲ್ಲಿ ಇಂದು ಬೆಳಗ್ಗೆ 78 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ
ರಿಡ್ಜ್ 59.2 ಮಿ.ಮೀ., ಆಯನಗರದಲ್ಲಿ 39.4 ಮಿ.ಮೀ ಮತ್ತು ಸಫ್ದರ್‌ಜಂಗ್‌ನಲ್ಲಿ 7.7 ಸೆಂ.ಮೀ. ಮಳೆ ದಾಖಲಾಗಿದೆ.
ಕೇವಲ ಮೂರು ಗಂಟೆಗಳಲ್ಲಿ, ಸುಮಾರು 8 ಸೆಂ.ಮೀ. ಮಳೆ ದಾಖಲಾಗಿದೆ. ಲಜಪತ್ ನಗರ, ಆರ್‌ಕೆ ಪುರಂ ಸೇರಿದಂತೆ ಭಾರೀ ಮಳೆ ಆದ ಪ್ರದೇಶಗಳಲ್ಲಿ ಜನರಿಗೆ ತೊಂದರೆ ಆಗಿದೆ. ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ನೀರು ಉಕ್ಕಿ ಹರಿದಿದೆ. ಅಲ್ಲಲ್ಲಿ ಸಿಗ್ನಲ್‌ಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂದಿದೆ.
ದೆಹಲಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿ ಮಳೆ ಆಗುವ ಸಾಧ್ಯತೆ. ಶುಕ್ರವಾರ ಸಂಜೆ ನಂತರ ಮಳೆ ಚುರಕಾಗಬಹುದು. ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications