Delhi Ordinance Bill: ದೆಹಲಿ ಸುಗ್ರೀವಾಜ್ಞೆ ಮಸೂದೆ- ಅಮಿತ್ ಶಾರಿಂದ ಇಂದು ಮಂಡನೆ ಸಾಧ್ಯತೆ
ನವದೆಹಲಿ, ಆಗಸ್ಟ್ 01: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಸುಗ್ರೀವಾಜ್ಞೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಮಸೂದೆ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೊಂದಲಿದೆ.
ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಮಂಡಿಸಲಿದ್ದಾರೆ. ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಸುಗ್ರೀವಾಜ್ಞೆ ಕುರಿತು ವಿವರಿಸಲಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಸುಗ್ರೀವಾಜ್ಞೆಯನ್ನು ತೀವ್ರವಾಗಿ ವಿರೋಧಿಸಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಮಸೂದೆಯನ್ನು ಬೆಂಬಲಿಸುವ ನಿರೀಕ್ಷೆಯಿದೆ.
ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 'ನಾವು ಸಂವಿಧಾನದ ಚೌಕಟ್ಟನ್ನು ಅನುಸರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಗೃಹ ಸಚಿವಾಲಯವು ಈ ಮಸೂದೆಯನ್ನು (ದೆಹಲಿ ಸುಗ್ರೀವಾಜ್ಞೆ) ಸರಿಯಾಗಿ ರಚಿಸಿದೆ. ಇಡೀ ದೇಶವು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸಿದೆ ಭಾರತ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿದೆ' ಎಂದು ಹೇಳಿದ್ದಾರೆ.

ಈ ಸುಗ್ರಿವಾಜ್ಞೆ ಮೂಲಕ ದೆಹಲಿಯ ಅಧಿಕಾರಿಗಳ ಮೇಲೆ ಕೇಂದ್ರವು ಸಂಪೂರ್ಣ ನಿಯಂತ್ರಣ ಹೊಂದಲಿವೆ. ವರ್ಗಾವಣೆಗಳು ಮತ್ತು ನೇಮಕಾತಿಗಳಲ್ಲಿ ರಾಜ್ಯ ಸರ್ಕಾರದ ಯಾವುದೇ ಹಸ್ತಕ್ಷೇಪವಿರದಂತೆ ನೋಡಿಕೊಳ್ಳುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕೇಂದ್ರ ಸರ್ಕಾರ ಈ ಸುಗ್ರಿವಾಜ್ಞೆಯನ್ನು ಜಾರಿಗೆ ತರಲು ಹೊರಟಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮುಂದಿನ ವಾರ ಅವಿಶ್ವಾಸ ನಿರ್ಣಯ ಕುರಿತು ಚರ್ಚೆ
ಆಗಸ್ಟ್ 8,9 ಮತ್ತು 10 ರಂದು ಲೋಕಸಭೆ ಸ್ಪೀಕರ್ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ, ಐಎನ್‌ಡಿಐಎ ಮೈತ್ರಿಕೂಟದ ಪರವಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ಪ್ರಸ್ತಾಪವನ್ನು ಅಂಗೀಕರಿಸಿದರು. ಈಗ ಆಗಸ್ಟ್ 8,9 ಮತ್ತು 10 ರಂದು ಈ ಕುರಿತು ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಕನಿಷ್ಠ 332 ಸಂಸದರ ಬೆಂಬಲವನ್ನು ಹೊಂದಿರುವ ನರೇಂದ್ರ ಮೋದಿ ಸರ್ಕಾರವು ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಮಣಿಪುರ ಹಿಂಸಾಚಾರದ ಕುರಿತು ಮಾತನಾಡುವಂತೆ ಪ್ರಧಾನಿ ಮೇಲೆ ಒತ್ತಡ ಹೇರುವುದು ಅವಿಶ್ವಾಸ ನಿರ್ಣಯದ ಉದ್ದೇಶವಾಗಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.












Click it and Unblock the Notifications